Fate's writing
634
—
638
634
ಯುದ್ಧವಾಗಲಿ ರಾಜ್ಯವಿದ್ಯೆಯಾಗಲಿ ಶಾಸ್ತ್ರ ।
ವೃದ್ಧಿಯಾಗಲಿ ನರನ ಹಣೆಯಿನಳಿಯಿಸದಾ ॥
ಕ್ಷುದ್ರಕಾರ್ಪಣ್ಯದನ್ಯಾಯದನಿತಿನಿತುಳಿಕೆ ।
ಯಿದ್ದೆಯಿರುವುದು ನಮಗೆ - ಮಂಕುತಿಮ್ಮ ॥ ೬೩೪ ॥
ವಿಧಾತನೊಂದಿಗೆ ಹೋರಾಡಿ ಅಥವಾ ಯುದ್ಧಮಾಡಿಯಾಗಲೀ ಅಥವಾ ಹಲವು ಶಾಸ್ತ್ರಗಳನ್ನು ಅಭ್ಯಾಸಮಾಡಿ ಜ್ಞಾನವಂತನಾಗುವುದರಿಂದಾಗಲೀ, ಹಣೆಯ ಬರಹವನ್ನು ಅಳಿಸಲು ಸಾಧ್ಯವೇ ಇಲ್ಲ. ಎಲ್ಲವನ್ನೂ ತೊಳೆದಂತೆ ಅಥವಾ ಅಳಿಸಿದಂತೆ ಕಂಡರೂ ನಮ್ಮ ಸಣ್ಣತನದ, ಅಜ್ಞಾನದ, ಜ್ಞಾನದ ಕಾರ್ಪಣ್ಯ, ಎಂದರೆ ಅರಿವಿನ ಬಡತನ, ಕಳ್ಳತನದ, ಮೋಸಮಾಡುವಂತಹ ಕ್ಷುದ್ರ ಬುದ್ದಿಗಳ ಕಿಂಚಿತ್ ಉಳಿಕೆ ನಮ್ಮಲ್ಲಿ ಇದ್ದೇ ಇರುತ್ತದೆ. ಅದನ್ನು ಸಂಪೂರ್ಣ ತೊಡೆದುಹಾಕುವುದಕ್ಕೆ ಆಗುವುದೇ ಇಲ್ಲ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
635
ಗುದ್ದಲಿಯಿನಾದೀತೆ ಮಲೆ ಕಣಿವೆ ಸಮದ ನೆಲ? ।
ಮದ್ದು ತಡೆವುದೆ ಮುಪ್ಪು ಕಳ್ಳನವೊಲಮರೆ? ॥
ಯುದ್ಧತಾಪದೆ ಶಾಂತಿಶೀತಲತೆಯುದಿಸೀತೆ? ।
ಸಿದ್ಧವಿರು ಸೈರಣೆಗೆ - ಮಂಕುತಿಮ್ಮ ॥ ೬೩೫ ॥
ಮಣ್ಣನ್ನು ಅಗೆಯಲು ಉಪಯೋಗಿಸುವ ಗುದ್ದಲಿಯಿಂದ ದೊಡ್ಡ ಬೆಟ್ಟ ಮತ್ತು ಕಣಿವೆಯನ್ನು ಅಗೆದು ನೆಲ ಸಮ ಮಾಡಲಾದೀತೇ? ನಮ್ಮ ಅರಿವಿಗೆ ಬಾರದಂತೆ ಕಳ್ಳನಂತೆ ನಮ್ಮ ಮೇಲೆ ಎರಗಿದ ಮುಪ್ಪನ್ನು, ಯಾವುದಾದರೂ ಔಷದಿಯನ್ನು ಕುಡಿದು ವೃದ್ಧಾಪ್ಯ ಬರುವುದನ್ನು ತಡೆಯಲಾಗುವುದೇ? ಕದನದಲ್ಲಿ ಶಾಂತಿ ಮತ್ತು ತಣ್ಣನೆಯ ವಾತಾವರಣ ಉದ್ಭವವಾಗುವುದೇ? ಹಾಗೆಯೇ ಬದುಕಿನಲ್ಲಿ ನಡೆಯುವುದನ್ನು ಬದಲಾಯಿಸಲು ಸಾಧ್ಯವಿಲ್ಲ. ತಾಳ್ಮೆಯಿಂದ ಅನುಭವಿಸುವುದನ್ನು ಹೊರತು ನಿನಗೆ ಬೇರೆ ದಾರಿಯಿಲ್ಲ ಎನ್ನುವ ಬುದ್ಧಿವಾದವನ್ನು ಮಾಡಿದ್ದಾರೆ ಗುಂಡಪ್ಪನವರು ಈ ಮುಕ್ತಕದಲ್ಲಿ.
636
ಸಾಸಿರದ ಯುಕ್ತಿ ಸಾಹಸವ ನೀನೆಸಗುತಿರು ।
ಲೇಸು ಫಲ ದೊರೆಗೆ ನಿನ್ನೆಲ್ಲ ಪೌರುಷಕಂ ॥
ಶೇಷ ನಿನಗುಳಿವುದೆಂತಾದೊಡಂ ನೋವಿನಿತು ।
ಸೈಸದನು ನೀನಳದೆ - ಮಂಕುತಿಮ್ಮ ॥ ೬೩೬ ॥
ಬದುಕಿನ ಬವಣೆಯನ್ನು ಎದುರಿಸಲು ಮತ್ತು ಸಂದ ಕರ್ಮಫಲವನ್ನು ಅನುಭವಿಸಲು ನೀನು ಸಾವಿರಾರು ಯುಕ್ತಿಯನ್ನು ಮಾಡು. ಅಂತಹ ಪ್ರಯತ್ನದಿಂದ ನಿನಗೆ ಒಳ್ಳೆಯ ಫಲ ದೊರಕಿ ಪಾಪಕರ್ಮದ ಫಲವು ಕಡಿಮೆಯಾದರೂ ಒಂದಿಷ್ಟು ನೋವು ಮನದ ಮೂಲೆಯಲ್ಲೆಲ್ಲೋ ಉಳಿದಿರುತ್ತದೆ. ಅದನ್ನು ಸಹಿಸಿಕೊಂಡು ಬಾಳು ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
637
ಸಿರಿದರಿದ್ರತೆಗಳ್ಗೆ ಫಲದೊಳಂತರ ಕಿರಿದು ।
ಸರಿತಪ್ಪುಗಳಿಗಂತು, ಜಾಣ್ ಬೆಪ್ಪುಗಳ್ಗಂ ॥
ಮರಣವೆಲ್ಲವನೊಂದೆ ತೆರದಿ ಮುಸುಕುವುದೆಂದೊ ।
ಪರವೆಯೆಂತಾದೊಡೇಂ? - ಮಂಕುತಿಮ್ಮ ॥ ೬೩೭ ॥
ಸಿರಿತನ ಮತ್ತು ಬಡತನದ ಬದುಕಿನ ಫಲದ ನಡುವೆ ಅಂತರ ಬಹಳ ಕಿರಿದು, ಹಾಗೆಯೇ ಸರಿ ತಪ್ಪುಗಳ ನಡುವೆಯೂ ಮತ್ತು ಜಾಣತನ ಮತ್ತು ಹೆಡ್ಡತನದ ನಡುವೆಯೂ ಅಂತರ ಬಹಳ ಕಡಿಮೆ. ಸಿರಿವಂತ, ಬಡವ, ಜಾಣ, ಪೆದ್ದ, ತಪ್ಪು ಮಾಡಿದವನು ಅಥವಾ ಮಾಡದವನು ಹೀಗೆ ಸಕಲರನ್ನೂ ಮೃತ್ಯು ಒಂದೇ ರೀತಿಯಲ್ಲಿ, ಯಾವ ಭೇದವನ್ನೂ ಮಾಡದೆ ಆವರಿಸುತ್ತದೆ ಕವಿಯುತ್ತದೆ. ಹಾಗಾಗಿ ಈ ದ್ವಂದ್ವಗಳ ನಡುವಿನ ಅಂತರದ ಮತ್ತು ಅದರಿಂದುಂಟಾಗುವ ಫಲವ್ಯತ್ಯಯದ ಬಗ್ಗೆ ನೀನು ಚಿಂತಿಸಬೇಡ ಎನ್ನುವಂತಹ ವಿವೇಕದ ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
638
ನಂಬು ದೇವರ, ನಂಬು, ನಂಬೆನ್ನುವುದು ಲೋಕ ।
ಕಂಬನಿಯನಿಡುವ ಜನ ನಂಬಲೊಲ್ಲದರೇಂ? ॥
ಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆ? ।
ತುಂಬು ವಿರತಿಯ ಮನದಿ - ಮಂಕುತಿಮ್ಮ ॥ ೬೩೮ ॥
ಜಗತ್ತೆಲ್ಲ ‘ ದೇವರನ್ನು ನಂಬು, ನಂಬಿ ಕೆಟ್ಟವರಿಲ್ಲವೋ, ದೇವರು ನಂಬಿದವರ ಕೈಬಿಡನು’ ಎಂದೆಲ್ಲಾ ಹೇಳುತ್ತದೆ. "ಆದರೆ ತೀರ ಕಷ್ಟದಲ್ಲಿ ಇದ್ದು ಕಣ್ನೀರಿಡುವ ಜನರೇಕೆ ದೇವರನ್ನು ನಂಬುವುದಿಲ್ಲ. ಆಸೆಯನ್ನು ಬಿಟ್ಟವನಿಗೆ ನಂಬಿಕೆಯ ಹಂಗು ಏಕೆ? ನೀನೂ ಸಹ ಈ ನಂಬಿಕೆಯ ವೃತ್ತದಿಂದ ಹೊರಬರಬೇಕಾದರೆ ನಿನ್ನ ಮನಸ್ಸಿನಲ್ಲಿ ವಿರಕ್ತಿಯನ್ನು ತುಂಬಿಕ"’ಎಂದು ಆದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.