Kagga Logo

Difficulty and diversity

629

633

629

ವೈವಿಧ್ಯವೊಂದುಕೃಪೆ ನಮಗಿರುವ ಕಷ್ಟದಲಿ ।
ಆವರಿಸದಳಲ್ ಎಲ್ಲರನುಮೊಂದೆ ಸಮಯ ॥
ನೋವಿಲ್ಲದರು ನೊಂದವರನು ಸಂತಯಿಸುತಿರೆ ।
ಜೀವನವು ಕಡಿದಹುದೆ? - ಮಂಕುತಿಮ್ಮ ॥ ೬೨೯ ॥

ವೈವಿಧ್ಯತೆಯೇ ನಮಗೆ ಆ ಪರಮಾತ್ಮ ಕರುಣಿಸಿರುವ ಕೃಪೆ. ಎಲ್ಲರನ್ನೂ ಒಂದೇ ಬಾರಿ ಕಷ್ಟಗಳು ಆವರಿಸುವುದಿಲ್ಲ, ಹಲ ನೋವಿಲ್ಲದವರು ಹಲ ನೋವಿರುವವರನ್ನು ಸಂತೈಸುತ್ತಾ ಇರುವಾಗ ಬದುಕು ಕಷ್ಟವಾಗುವುದಿಲ್ಲ, ಎಂದು ಬದುಕಿನ ಸುಖ ದುಃಖಗಳ ಮತ್ತೊಂದು ಆಯಾಮವನ್ನು ನಮಗೆ ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

630

ಸ್ಥೂಲಸೂಕ್ಷ್ಮ ವಿವೇಕರಹಿತೇಷ್ಟ ಬಂಧುಜನ ।
ಕಾಲದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು ॥
ಸಾಲವನು ನಿನ್ನಿಂದ ಸಲಿಸಕೊಳಬಂದವರು ।
ತಾಳುಮೆಯಿನವರೊಳಿರು - ಮಂಕುತಿಮ್ಮ ॥ ೬೩೦ ॥

ವಿಷಯಗಳ ಸೂಕ್ಷ್ಮತೆ ಮತ್ತು ಸ್ಥೂಲತೆಯನ್ನು ಅರಿಯದೆ ನಮ್ಮೊಡನೆ ನಡಕೊಳ್ಳುವ ನಮ್ಮ ಬಂಧು ಮಿತ್ರರು ಕಾಲನ ಕರೆಗೆ ನಮ್ಮನ್ನು ಅಣಿಗೊಳಿಸುತ್ತಾರೆ. ನಾವು ಜನ್ಮ ಜನ್ಮಾಂತರದಲ್ಲಿ ಬಹುಜನರಿಂದ ಪಡೆದ ಸಾಲವನ್ನು ಹಿಂತಿರುಗಿ ಪಡೆಯಲು ಬಂದವರೇ ಇವರೆಲ್ಲ. ಹಾಗಾಗಿ ಇವರೊಂದಿಗೆ ವ್ಯವಹರಿಸುವಾಗ ತಾಳ್ಮೆಯಿಂದಿರು ಎಂದು ಪರರ ವ್ಯವಹಾರದಿಂದ ನಮ್ಮ ಮೇಲೆ ಆಗುವ ಪ್ರಭಾವವನ್ನು ಎದುರಿಸುವ ಪರಿಯನ್ನು ಭೋಧಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

631

ಸರಿಗೆಪಂಚೆಯೊ ಹೊದಿಕೆ, ಹರಕುಚಿಂದಿಯೊ ಮೈಗೆ ।
ಪರಮಾನ್ನ ಭೋಜನವೊ, ತಿರುಪೆಯಂಬಲಿಯೋ ॥
ಪರಿಣಾಮದಲಿ ಧನಿಕ ಬಡವರಿರ್ವರುಮೊಂದೆ ।
ಕರುಬು ಕೊರಗೇತಕೆಲೊ - ಮಂಕುತಿಮ್ಮ ॥ ೬೩೧ ॥

ರೇಶಿಮೆಯ ಪಂಚೆಯನ್ನು ಉಟ್ಟರೂ, ಹರಿದ ಚಿಂದಿಯನ್ನು ಉಟ್ಟರೂ ಪರಿಣಾಮ ಒಂದೇ ಮತ್ತು ಪರಮಾನ್ನವನ್ನು ಉಂಡರೂ, ಭಿಕ್ಷೆಯೆತ್ತಿ ಗಂಜಿಯನ್ನು ಕುಡಿದರೂ ಪರಿಣಾಮ ಒಂದೇ. ಹಾಗಾಗಿ ‘ನಿನ್ನ ಬಳಿ ಏನೇ ಇದ್ದರೂ ಅಥವಾ ಇರದಿದ್ದರೂ ಕೊರಗದೆ ಬದುಕು’ ಎಂದು ಬದುಕಿನಲ್ಲಿ ಸಂತೋಷದ ಹಾದಿಯನ್ನು ತೋರಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

632

ಕಿವುಡುತನ ತಪ್ಪೀತೆ ರನ್ನ ಕುಂಡಲದಿಂದ? ।
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ॥
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ ।
ಜವರಾಯ ಸಮವರ್ತಿ - ಮಂಕುತಿಮ್ಮ ॥ ೬೩೨ ॥

ಕಿವಿಯಲ್ಲಿ ರತ್ನದ ಕುಂಡಲಗಳನ್ನು ಧರಿಸಿದರೆ ಇರುವ ಕಿವುಡುತನ ತಪ್ಪೀತೆ? ಕೇವಲ ಮೃಷ್ಟಾನ್ನವನ್ನು ತಿಂದರೆ ದೇಹ ಪ್ರಾಯ ಸಂದಂತೆ ಜೋತು ಬೀಳುವುದು ತಪ್ಪೀತೆ? ಭೂಮಿಯಲ್ಲಿನ ಪ್ರಕೃತಿಗೆ ಅನುಗುಣವಾಗಿ ಆಗುವ ಪರಿಣಾಮಗಳಿಗೆ ಬಡವ-ಬಲ್ಲಿದನೆಂಬ ಬೇಧವಿರುವುದಿಲ್ಲ. ಎಲ್ಲರ ಬದುಕನ್ನೂ ಸಮನಾಗಿ ಕೊನೆಗಾಣಿಸುವ ಆ ಯಮರಾಯ ಸಮವಾಗಿ ವರ್ತಿಸುತ್ತಾನೆ ಎಂದು ಬದುಕಿನ ಪರಮ ಸತ್ಯವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

633

ಸಾಧ್ಯಪಡದಾರಿಗಂ ನರಭಾಲಪಟ್ಟವನು ।
ಶುದ್ಧಪಡಿಸಲು ತೊಡೆದು ಪೂರ್ವದೆಲ್ಲವನು ॥
ಹೊದ್ದೆ ಹರಿಯಲಿ ಬೇಕು ಕರ್ಮಶೇಷದ ಪಟವ ।
ಬುದ್ಧಿನುಡಿ ಸೈರಣೆಯೆ - ಮಂಕುತಿಮ್ಮ ॥ ೬೩೩ ॥

ಪೂರ್ವಕರ್ಮವನ್ನು ಸಂಪೂರ್ಣವಾಗಿ ಒಂದೇ ಬಾರಿಗೆ ಅಳಿಸಿಹಾಕಲು ಯಾರಿಗೂ ಸಾಧ್ಯವಾಗುವುದಿಲ್ಲ. ಆ ಪೂರ್ವಕರ್ಮದ ಹೊದಿಕೆಯನ್ನು ಹೊದ್ದೇ, ಎಂದರೆ ಕರ್ಮವನ್ನು ಹೊತ್ತುಕೊಂಡೇ, ಮಾಡುತ್ತಲೇ, ಸವೆಸುತ್ತಲೇ ಜೀವನವನ್ನು ಸಾಗಿಸಬೇಕು. ಆದರೆ ಹಾಗೆ ಬದುಕುವಾಗ ಸೈರಣೆಯಿಂದ, ತಾಳ್ಮೆಬಿಡದೆ, ವಿವೇಕದಿಂದ ಜೀವಿಸಬೇಕು ಎಂದು ಪೂರ್ವಕರ್ಮಾಧಾರಿತ ಬದುಕಿನ ಬವಣೆಯನ್ನು ಎದುರಿಸುವ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.