Kagga Logo

Forgetfulness is divine grace

684

688

684

ದಿವಸಕೊಳಗದಿನ್ ಆಯುರಾಶಿಯನು ರವಿಯಳೆಯಲ್ ।
ಅವನ ಮಗ ಜವನ್ ಅದರ ಲೆಕ್ಕವಿರಿಸುವನು ॥
ದಿವಿಜರೊಳಗಿವರಿರ್ವರುಪಕಾರಿಗಳು ನಮಗೆ ।
ಸವೆಸುವರು ತನುಘಟವ - ಮಂಕುತಿಮ್ಮ ॥ ೬೮೪ ॥

ನಾವು ಈ ಭೂಮಿಯ ಮೇಲೆ ಎಷ್ಟು ಗಂಟೆ, ಎಷ್ಟು ದಿವಸ, ಎಷ್ಟು ತಿಂಗಳು, ಎಷ್ಟು ವರ್ಷ ಬದುಕಿರುತ್ತೇವೆ ಎನ್ನುವುದು ನಮ್ಮ ಆಯಸ್ಸು. ಸೂರ್ಯನ ಉದಯ ಮತ್ತು ಅಸ್ತಮಾನಗಳ ಅಧಾರದ ಮೇಲೆ ನಾವು ಅದರ ಲೆಕ್ಕವನ್ನು ಹಾಕುತ್ತೇವೆ. ಹಾಗೆಯೇ ಸೂರ್ಯನ ಮಗನಾದ ಯಮನು ನಾವು ಎಷ್ಟು ದಿನ ಈ ಜಗತ್ತಿನಲ್ಲಿ ಇರಬೇಕು ಎಂದು ಲೆಕ್ಕವಿಟ್ಟುಕೊಂಡು, ಸರಿಯಾದ ಸಮಯಕ್ಕೆ ನಮ್ಮನ್ನು ಇಲ್ಲಿಂದ ಕರೆದುಕೊಂಡುಹೋಗುತ್ತಾನೆ . ಈ ದೇಹವನ್ನು ಸವೆಸುವುದರಲ್ಲಿ ಮತ್ತು ಇದರ ಅಂತ್ಯದಲ್ಲಿ ಈ ದೇವತೆಗಳಿಬ್ಬರು ನಮಗೆ ಬಹಳ ಉಪಕಾರ ಮಾಡುತ್ತಾರೆ ಎಂದು ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

685

ಅಂತೊ ಇಂತೋ ಎಂತೊ ಜೀವಕಥೆ ಮುಗಿಯುವುದು ।
ಅಂದೊ ಇಂದೋ ಎಂದೊ ಜನುಮ ಕಳೆಯುವುದು ॥
ಒಂದೆ ಮರೆವಿನ ಮುಸುಕು ಮುಸುಕಲಿಹುದೆಲ್ಲವನು ।
ಸಂತಸದ ಮಾತಿಷ್ಟೆ - ಮಂಕುತಿಮ್ಮ ॥ ೬೮೫ ॥

ಹಾಗೋ ಹೇಗೊ ಹೇಗೋ ಒಂದು ಹಾಗೆ ಬದುಕಿನ ಕತೆಯೂ ಅಂತ್ಯವಾಗುವುದು ಈ ಜನ್ಮದ ಅಂತ್ಯದೊಂದಿಗೆ ಈ ಜನ್ಮದಲ್ಲಿ ನಡೆದ ಎಲ್ಲ ಘಟನೆಗಳ, ಅರಿತುಕೊಂಡ ಎಲ್ಲ ವಿಷಯಗಳ ಮತ್ತು ವ್ಯಕ್ತಿಗಳ ನೆನಪೂ ಮಾಸಿಹೋಗುವುದು. ಇಲ್ಲಿಂದ ಹೊರಡುವಾಗ ಅವುಗಳ ಮೂಟೆಯನ್ನು ಹೊತ್ತು ಹೋಗಬೇಕಾಗಿಲ್ಲವೆಂಬುದಷ್ಟೇ ಸಂತೋಷದ ವಿಷಯ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

686

ಎಲ್ಲ ಬರಿ ಗೊಣಗಾಟ, ತಿಣಕಾಟ, ತಡಕಾಟ ।
ಇಲ್ಲ ನಮಗೊರೆಕೋಲ್, ತಿಳಿಬೆಳಕುಮಿಲ್ಲ ॥
ಬಲ್ಲತನ ಮಬ್ಬಿನಲಿ ನಿದ್ರಿಸದೆ ತೆವಳುವುದು ।
ಸಲ್ಲದುಬ್ಬಟೆ ನಮಗೆ - ಮಂಕುತಿಮ್ಮ ॥ ೬೮೬ ॥

ನಮ್ಮ ಬದುಕಿನಲ್ಲಿ ನಾವು ಮಾಡುವುದೆಲ್ಲವೂ ಒಂದು ರೀತಿಯ ತಿಣುಕಾಟ, ಪರದಾಟ. ಅದನ್ನು ಮಾಡಲು ನಮ್ಮ ತಡಕಾಟ ಮತ್ತು ಗೊಣಗಾಟ. ಬದುಕಿನಲ್ಲಿ ಸ್ಥಿರವಾಗಿ ನಿಲ್ಲಲು ನಮಗೆ ಒಂದು ಊರುಗೋಲಿಲ್ಲ ಅಥವಾ ತಿಳಿಯಾದ ಜ್ಞಾನವೂ ಇಲ್ಲ. ನಮ್ಮ ಎಲ್ಲ ಮಾನಸಿಕ ಮತ್ತು ದೈಹಿಕ ಓಡಾಟಗಳಿಗೆ ಒಂದು ನಿಶ್ಚಿತ ಅರಿವಿನ ಆಧಾರವಿಲ್ಲ, ಎಚ್ಚರವೂ ಇಲ್ಲ ನಿದೆಯೂ ಇಲ್ಲ ಒಂದು ರೀತಿಯ ‘ಮಂಪರು’. ಆದರೂ ಬೇಡವಾದ ಅಥವಾ ಸೂಕ್ತವಲ್ಲದ ಉತ್ಸಾಹ ನಮಗೆ ಎಂದು ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನರು ಈ ಮುಕ್ತಕದಲ್ಲಿ.

687

ಅತ್ಯಂತದುತ್ಕಟದ ಸನ್ನಿವೇಶಗಳ ಭರ ।
ಪ್ರತ್ಯಕ್ಷ ದರ್ಶನದಿನಲ್ಲದೆಂತಹುದು? ॥
ಪುಸ್ತಕದ ಚಿತ್ರದಿಂದೂಹಿಪೆಯ ಹಿಮಗಿರಿಯ ।
ವಿಸ್ತಾರದದ್ಭುತವ - ಮಂಕುತಿಮ್ಮ ॥ ೬೮೭ ॥

ಹಿಮಾಲಯ ಪರ್ವತದ ಒಂದು ಚಿತ್ರವನ್ನು ನೋಡಿ ಅದರ ವಿಸ್ತಾರ, ಅಗಾಧತೆಗಳನ್ನು ಊಹಿಸಲುಸಾಧ್ಯವಿಲ್ಲ. ಅದರ ಅನುಭವವಾಗಬೇಕಾದರೆ ಅದನ್ನು ನಾವು ಪ್ರತ್ಯಕ್ಷ ನೋಡಬೇಕು ಎಂದು ಹೇಳುತ್ತಾ, ಹಾಗೆಯೇ ಬದುಕಿನ ಅತ್ಯಂತ ತೀವ್ರತಮ ಘಟನೆಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಆ ಘಟನೆಗಳಲ್ಲಿ ನಾವೂ ಭಾಗಿಯಾಗಿ ಅದರ ಪರಿಣಾಮಗಳ ಅನುಭವವನ್ನು ಪಡೆದರೆ ಮಾತ್ರ ಸತ್ಯವಾದ ಚಿತ್ರಣ ನಮಗೆ ಅರ್ಥವಾಗುವುದು ಸಾಧ್ಯ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

688

ಅರ್ಣವವ ಕಣ್ಣಿಂದ ಕಂಡ ಬೆರಗಾದೀತೆ ।
ವರ್ಣನೆಯನೋದಿದೊಡೆ, ತೆರೆಯನೆಣಿಸಿದೊಡೆ? ॥
ಪೂರ್ಣವಸ್ತುಗ್ರಹಣವಪರೋಕ್ಷದಿಂದಹುದು ।
ನಿರ್ಣಯ ಪ್ರತ್ಯಕ್ಷ - ಮಂಕುತಿಮ್ಮ ॥ ೬೮೮ ॥

ಪ್ರತ್ಯಕ್ಷವಾಗಿ ಕಾಣದೆ ಕೇವಲ ಪುಸ್ತಕದಲ್ಲಿನ ವರ್ಣನೆಯನ್ನು ಓದಿ ಸಮುದ್ರದ ಬೆರಗನ್ನು ಅನುಭವಕ್ಕೆ ತಂದುಕೊಳ್ಳಲು ಸಾಧ್ಯವೇ? ಅಥವಾ ಸಮುದ್ರದ ಮೇಲೇಳುವ ಅಲೆಗಳನ್ನು ಎಣಿಸಿದರೆ ಸಮುದ್ರದ ಸೊಬಗು ಅನುಭವಕ್ಕೆ ಬರುವುದೇ? ಅದನ್ನು ಅರಿಯಲು ಪ್ರತ್ಯಕ್ಷ ನೋಡಬೇಕು ಅದರ ಸೊಬಗನ್ನು ಸವಿಯಬೇಕು. ಅದೇ ರೀತಿ ಯಾವುದೇ ವಸ್ತುವಿನ ನಿಜ ಸ್ವರೂಪವನ್ನರಿಯಲು ಪ್ರತ್ಯಕ್ಷವಾಗಿ ನೋಡಬೇಕು, ಅನುಭವಿಸಬೇಕು. ಪ್ರತ್ಯಕ್ಷಾನುಭವವಾದರೆ ಮಾತ್ರ ಒಂದು ವಸ್ತುವನ್ನು ನಿರ್ಣಾಯಕವಾಗಿ ಅರಿಯಲು ಸಾಧ್ಯ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.