Universal growth
854
—
858
854
ಸರ್ವಹಿತವೊಂದುಂಟೆ? ಅದಕೆ ಪಥ ನಮಗುಂಟೆ? ।
ನಿರ್ವಾಹಸಾಧನಗಳೆತ್ತ? ಗುರುವೆತ್ತ? ॥
ಪೂರ್ವವನು ನೆಟ್ಟಗಿಪ ನರಕೃತಿಯಿನಾಗದೇನ್ ।
ಅರ್ವಾಚಿಯಲಿ ಸೊಟ್ಟು? - ಮಂಕುತಿಮ್ಮ ॥ ೮೫೪ ॥
ಈ ಜಗತ್ತಿನಲ್ಲಿ ಎಲ್ಲರಿಗೂ ಹಿತವಾದುದು ಎನ್ನುವುದು ಉಂಟೆ? ಇದ್ದರೆ ಅದನ್ನು ಸಾಧಿಸುವ ಹಾದಿ ಯಾವುದು? ಅದನ್ನು ಸಾಧಿಸಲು ನಮಗಿರುವ ಉಪಕರಣಗಳಾವುವು? ನಮಗದನ್ನು ಕಲಿಸುವ ಗುರುವು ಯಾರು? ತಮ್ಮ ಪೂರ್ವವನ್ನು ಸರಿಪಡಿಸಿಕೊಳ್ಳಲು ಮನುಷ್ಯರ ಈಗಿನ ಕರ್ಮಗಳಿಂದ ಸಾಧ್ಯವಿಲ್ಲವೇ? ಹಾಗೆ ಸರಿಪಡಿಸಿಕೊಳ್ಳುವ ಪ್ರಯತ್ನದಲ್ಲಿ ಭವಿಷ್ಯದ ಬದುಕು ಸೊಟ್ಟಗಾಗುವುದಿಲ್ಲವೇನು? ಎನ್ನುವ ಪ್ರಶ್ನೆಗಳನ್ನು ಕೇಳುತ್ತಾ, ಕೆಲವು ವಿಚಾರಗಳ ಮಂಥನಕ್ಕೆ ನಮಗೆ ಆಹ್ವಾನವಿತ್ತಂತೆ ಇದೆ, ಮಾನ್ಯ ಗುಂಡಪ್ಪನವರ ಈ ಮುಕ್ತಕ.
855
ಸುಲಭವೇನಲ್ಲ ನರಲೋಕಹಿತನಿರ್ಧಾರ ।
ಬಲಕೆ ನೋಳ್ಪರ್ ಕೆಲರು, ಕೆಲರೆಡಕೆ ನೋಳ್ಪರ್ ॥
ವಿಲವಿಲನೆ ಚಪಲಿಸುವ ಮನುಜಸ್ವಭಾವದಲಿ ।
ನೆಲೆಗೊತ್ತು ಹಿತಕೆಲ್ಲಿ? - ಮಂಕುತಿಮ್ಮ ॥ ೮೫೫ ॥
ಲೋಕದಲ್ಲಿ ಸರ್ವರ ಹಿತವನ್ನು ನಿರ್ಧರಿಸುವುದು ಸುಲಭವೇನಲ್ಲ. ಏಕೆಂದರೆ ಚಪಲತೆಯಿಂದ ಕೂಡಿದ ಚಂಚಲ ಮನಸ್ಸಿನ ಮನುಷ್ಯರಲ್ಲಿ ಕೆಲವರು ಬಲಕ್ಕೆ ನೋಡಿದರೆ ಕೆಲವರು ಎಡಕ್ಕೆ ನೋಡುತ್ತಾರೆ. ಹಾಗಿರುವಾಗ ಆ ಹಿತವನ್ನು ಸಾಧಿಸಲು ನೆಲೆಯೂ ಇಲ್ಲ ಹಾದಿಯೂ ಕಾಣುವುದಿಲ್ಲ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
856
ರಾಮಕಾರ್ಮುಕ, ಕೃಷ್ಣಯುಕ್ತಿ, ಗೌತಮಕರುಣೆ ।
ಭೂಮಿಭಾರವನಿಳುಹೆ ಸಾಲದಾಗಿರಲು ॥
ಸಾಮಾನ್ಯರೆನಿತು ತಾಂ ಪೆಣಗಿದೊಡಮೇನಹುದು? ।
ಕ್ಷೇಮವೆಂದುಂ ಮೃಗ್ಯ - ಮಂಕುತಿಮ್ಮ ॥ ೮೫೬ ॥
ರಾಮನ ಬಿಲ್ಲು, ಕೃಷ್ಣನ ಯುಕ್ತಿ, ಗೌತಮನ ಕಾರುಣ್ಯಗಳು ಈ ಭೂ ಭಾರವನ್ನಿಳಿಸಲು ಸಾಲದಾಗಿರಲು ಸಾಮಾನ್ಯ ಮನುಷ್ಯರು ಎಷ್ಟು ಹೆಣಗಾಡಿದರೇನು, ಜಗತ್ತಿನ ಕ್ಷೇಮವನ್ನು ಸಾಧಿಸಲಾಗುವುದೇ? ಸರ್ವ ಜನರ, ಸಮನಾದ ಕ್ಷೇಮವೆಂದೂ ಕೈಗೆಟುಕದ ಮರೀಚಿಕೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
857
ಸತತಮಾರ್ಗಣೆ, ಸಿದ್ಧಿಯಂತಿರಲಿ, ಮಾರ್ಗಣೆಯೆ ।
ಗತಿ ಮನುಜಲೋಕಕ್ಕೆ ; ಜಗದ ಜೀವವದು ॥
ಕೃತಕಾಮರೆಲ್ಲರಾದೊಡೆ ಕೃತ್ಯವುಳಿಯದೊಡೆ ।
ಕಥೆಮುಗಿವುದಲ ಜಗಕೆ? - ಮಂಕುತಿಮ್ಮ ॥ ೮೫೭ ॥
ಮನುಜ ಲೋಕದಲ್ಲಿ,’ಸರ್ವಹಿತ ಅಥವಾ ಸರ್ವಸುಖ’ ವನ್ನು ಸಾಧಿಸುವ ವಿಚಾರವನ್ನು ಮುಂದುವರೆಸುತ್ತಾ, ಅದನ್ನು ಸಾಧಿಸುವುದಿರಲಿ, ಅದರ ನಿರಂತರ ಹುಡುಕಾಟವೇ ಮನುಜ ಲೋಕಕ್ಕೆ ಉಳಿದಿರುವ ಗತಿ. ಏಕೆಂದರೆ, ಎಲ್ಲರೂ ತಮಗೆ ಬೇಕಾದುದೆಲ್ಲ ಸಿಕ್ಕಿದೆ, ಮತ್ತೇನೂ ಆಸೆಯಿಲ್ಲ, ಹಾಗಾಗಿ ನಮಗಿನ್ನೇನೂ ಮಾಡಲು ಉಳಿದಿಲ್ಲ ಎಂದು ಯೋಚಿಸಿಬಿಟ್ಟರೆ, ಜಗತ್ತಿನ ಕಥೆಯೇ ಮುಗಿದು ಹೋಗುವುದಲ್ಲ. ಹಾಗಾಗಿ ನಾವು ಬಯಸುವ ‘ ಸರ್ವಹಿತ ಅಥವಾ ಸರ್ವಸುಖ’ ದ ಸ್ಥಿತಿ ಈ ಜಗತ್ತಿನಲ್ಲಿ ಬರುವುದೇ ಇಲ್ಲ ಎಂದು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
858
ಪ್ರಿಯಹಿತಗಳನ್ವೇಷೆಯಿಂ ಕರ್ಮಪರಿಪೋಷೆ ।
ಕ್ರಿಯೆಯ ಪಾರಂಪರ್ಯ ಜನ್ಮಾಂತರೀಯ ॥
ನಿಯತವಿಂತು ಜಗತ್ಪ್ರವರ್ಧನೆಗೆ ನರತೃಷ್ಣೆ ।
ಜಯ ಪೂರ್ಣವೆಂದದಕೆ? - ಮಂಕುತಿಮ್ಮ ॥ ೮೫೮ ॥
ತನಗೆ ಪ್ರಿಯ ಮತ್ತು ಹಿತವಾದದ್ದನ್ನು ಹುಡುಕುವ ಮನುಷ್ಯನ ಕರ್ಮಗಳ ನಿರಂತರ ಪೋಷಣೆ, ಪರಂಪರಾನುಗತವಾಗಿ, ಜನ್ಮಜನ್ಮಾಂತರಗಳಿಂದ ನಡೆಯುತ್ತಿದೆ. ವಿಧಿ ಅಥವಾ ವಿಧಾತ ತನ್ನ ಈ ಜಗತ್ತಿನ ವರ್ಧನೆಗಾಗಿಯೇ ನರನ ಮನಸ್ಸಿನಲ್ಲಿ ಬಯಕೆಗಳನ್ನು ಹುಟ್ಟಿಸುತ್ತದೆ(ತ್ತಾನೆ). ಈ ಬಯಕೆಗಳು ಮತ್ತು ಅವುಗಳ ಪೂರೈಕೆಗೆ ನಡೆಯುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿರುವುದರಿಂದ, ‘ಅವನಿಗೆ ಸಂಪೂರ್ಣ ಜಯ ಎಂದು ಸಿಗುವುದೋ’ ಎಂದು ಒಂದು ಅದ್ಬುತ ವಿಚಾರವನ್ನು ನಮ್ಮ ಮುಂದೆ ಇಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.