Kagga Logo

Humans and nature

859

862

859

ಪ್ರಕೃತಿಯನವರತ ಮನುಜನ ತಿದ್ದುತಿರುವಂತೆ ।
ವಿಕೃತಿಗೊಳಿಸುವನವನುಮ್ ಆಕೆಯಂಗಗಳ ॥
ಭೂಕೃಷಿಕ ರಸತಂತ್ರಿ ಶಿಲ್ಪಿ ವಾಹನಯಂತ್ರಿ ।
ವ್ಯಾಕೃತಿಸರೇನವಳ? - ಮಂಕುತಿಮ್ಮ ॥ ೮೫೯ ॥

ಪ್ರಕೃತಿ ನಿರಂತರವಾಗಿ ಮನುಷ್ಯನನ್ನು ತಿದ್ದುತ್ತಿರುವಂತೆಯೇ, ಮನುಷ್ಯ ಪ್ರಕೃತಿಯನ್ನು ವಿರೂಪಗೊಳಿಸುತ್ತಾನೆ. ಭೂಮಿಯನ್ನು ಕೃಷಿ ಮಾಡುವವನು, ಭೂ ಗರ್ಭದಿಂದ ರಾಸಾಯನಿಕಗಳನ್ನು, ಅದಿರುಗಳನ್ನು ಶೋಧಿಸುವವನು, ಲೋಹ ಮತ್ತು ಕಲ್ಲುಗಳಿಂದ ಶಿಲ್ಪಗಳನ್ನು ಮಾಡುವವನು, ತನ್ನ ಯಾತ್ರೆಗಾಗಿ ವಾಹನಗಳನ್ನು ತಯಾರುಮಾಡುವವನು ಎಲ್ಲರೂ ಈ ಪ್ರಕೃತಿಯನ್ನು ವಿಕೃತ ಗೊಳಿಸುವುದಿಲ್ಲವೇನು? ಎಂದು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಪರಸ್ಪರ ಸಂಬಂಧವನ್ನು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

860

ಸೃಷ್ಟಿ ಚೋದನೆಗಳಿಂ ನರನೊಳಿಷ್ಟಗಳುದಯ- ।
ವಿಷ್ಟಸಿದ್ದಿಗೆ ಯಂತ್ರತಂತ್ರಗಳ ಯುಕ್ತಿ ॥
ತ್ವಷ್ಟೃಕುಶಲದೆ ಸೃಷ್ಟಿ ವಿಕೃತಿ; ಇಂತನ್ಯೋನ್ಯ ।
ಸ್ಪೃಷ್ಟರ್ ಪ್ರಕೃತಿ ನರರು - ಮಂಕುತಿಮ್ಮ ॥ ೮೬೦ ॥

ಮನುಷ್ಯನ ಮನಸ್ಸಿನಲ್ಲಿ ಉದ್ಭವವಾಗುವ ಆಸೆಗಳು ಸೃಷ್ಟಿಯ ಪ್ರೇರಣೆ ಮತ್ತು ಪ್ರಚೋದನೆಯಿಂದಲೇ ಆಗುತ್ತದೆ. ಹಾಗೆ ಉದ್ಭವವಾದ ಅವನ ಇಷ್ಟಗಳನ್ನು ಪೂರೈಸಿಕೊಳ್ಳಲು ಸಾಧನಗಳನ್ನೂ ಪ್ರಕೃತಿಯೇ ನಿರ್ಮಿಸಿದೆ. ಆ ಸಾಧನಗಳನ್ನು ಉಪಯೋಗಿಸಿಕೊಂಡು ಮನುಷ್ಯ, ತಂತ್ರ ಮತ್ತು ಯುಕ್ತಿಗಳಿಂದ ತನ್ನ ಇಷ್ಟಗಳನ್ನು ಪೂರೈಸಿಕೊಳ್ಳುತ್ತಾನೆ. ಹೀಗೆ ಸೃಷ್ಟಿಕರ್ತನ ಕುಶಲತೆಯಿಂದಲೇ ಮಾನವನ ಮೂಲಕ ಸೃಷ್ಟಿ ವಿಕೃತಗೊಳ್ಳುತ್ತದೆ. ಹೀಗೆ ಪ್ರಕೃತಿ ಮತ್ತು ಮಾನವರ ಸಂಬಂಧ ಅನ್ಯೋನ್ಯವಾಗಿದೆ ಎಂದು ಮನುಷ್ಯ ಮತ್ತು ಪ್ರಕೃತಿಯ ಸಂಬಂಧವನ್ನು ಗುಂಡಪ್ಪನವರು ಈ ಮುಕ್ತಕದಲ್ಲಿ ಉಲ್ಲೇಖಿಸಿದ್ದಾರೆ .

861

ದಿವ್ಯ ಚರಿತಂಗಳ ಪ್ರತ್ಯುಕ್ತಿ ನರಚರಿತೆ ।
ಕಾವ್ಯ ವಿಜ್ಞಾನಗಳ್ ನಿಗಮಾನುಸರಗಳ್ ॥
ನವ್ಯಸಂಪದವಾರ್ಷಸಂಪದುದ್ಧೃತವಿಂತು ।
ಸವ್ಯಪೇಕ್ಷಗಳುಭಯ - ಮಂಕುತಿಮ್ಮ ॥ ೮೬೧ ॥

ಇಂದಿನ ಮನುಷ್ಯರ ಜೀವನ ಹಿಂದಿನ ದಿವ್ಯಪುರುಷರ ಮಹೋನ್ನತವಾದ ನಡವಳಿಕೆಯ ಪ್ರತಿಬಿಂಬದಂತಿದೆ. ಇಂದಿನ ಕಾವ್ಯ ಮೀಮಾಂಸೆಗಳು ನಿಗಮವನ್ನು ಅನುಸರಿಸಿಯೇ ಬರೆಯಲ್ಪಟ್ಟಿದೆ . ಇಂದಿನ ಸಕಲ ಸಂಪತ್ತೂ ಋಷಿಮುನಿಗಳು ಮತ್ತು ನಮ್ಮ ಪೂರ್ವಜರ ಬದುಕಿನ ಮೇಲೆ ಸಮಗ್ರವಾಗಿ ಬೆಳೆದು ನಿಂತಿದೆ. ಹೀಗೆ ನವೀನ ಮತ್ತು ಪುರಾತನಗಳೆರಡೂ ಪರಸ್ಪರಾಧಾರಪಟ್ಟಿವೆ ಎಂದು ಜಗತ್ತಿನಲ್ಲಿ ಬದಲಾಗುತ್ತಿರುವ ಸ್ಥಿತಿಯನ್ನು, ಮಾನ್ಯ ಗುಂಡಪ್ಪನವರು ವಿಶ್ಲೇಷಿಸಿದ್ದಾರೆ, ಈ ಮುಕ್ತಕದಲ್ಲಿ.

862

ಇರುವುದರೊಳಾದನಿತು ಸೊಗವ ಪಡೆವೊಡೆ ಲೋಗರ್ ।
ಅರಿಗೆ ಮೊದಲ್ ಇಹಕೆ ಪರದಾವರಣವಿಹುದನ್ ॥
ಪರಮಾರ್ಥಗಣಿತದಿಂದಿಹದರ್ಥಗಳನೆಣಿಸೆ ।
ಸರಿ ಲೋಕಬಾಂಧವ್ಯ - ಮಂಕುತಿಮ್ಮ ॥ ೮೬೨ ॥

ಇರುವುದರಲ್ಲಿ ಆದಷ್ಟು ಆನಂದವನ್ನು ಪಡೆಯಲು ಮೊದಲು, ಇಹಕ್ಕೆ ಎಂದರೆ, ಪ್ರಪಂಚವನ್ನು ಆವರಿಸಿಕೊಂಡಿರುವ ಪರವನ್ನು ಅರಿಯುವುದು ಅವಶ್ಯಕ. ಪರಮಾರ್ಥದ ಲೆಕ್ಕಾಚಾರಗಳಿಂದ ನಮ್ಮ ಈ ಜಗತ್ತಿನ ಬಾಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಪಟ್ಟರೆ, ನಮ್ಮ ಮತ್ತು ಈ ಲೋಕದ ಭಾಂಧವ್ಯದ ಸ್ವರೂಪ ನಮಗೆ ಅರ್ಥವಾಗುತ್ತದೆ ಎಂದು ವಿವರಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.