Fire ends as ashes
863
—
868
863
ಮುದಿಕುರುಡಿ ಹೊಂಗೆಯನು "ಬಾದಾಮಿ, ಕೋ" ಯೆನುತ ।
ಪದುಳದಿಂ ಮೊಮ್ಮಂಗೆ ಕೊಡಲು ಸಿಹಿಯಹುದೆ? ॥
ಹೃದಯವೊಳಿತಾದೊಡೇಂ? ತಿಳಿವಿಹುದೆ? ಜಾಣಿಹುದೆ? ।
ಸುಧೆ ಬಂತೆ ಸುಲಭದಲಿ? - ಮಂಕುತಿಮ್ಮ ॥ ೮೬೩ ॥
ಮುದುಕಿಯಾದ ಕುರುಡಿ ಮೊಮ್ಮಗನಮೇಲೆ ಪ್ರೀತಿ ಮತ್ತು ಅಕ್ಕರೆಯಿಂದ "ಬಾದಾಮಿಯನ್ನು ತೆಗೆದುಕೋ" ಎಂದು ಹೊಂಗೆಯ ಬೀಜವನ್ನು ಕೊಟ್ಟರೆ ಆ ಹೊಂಗೆಯ ಬೀಜ ಬಾದಾಮಿಯಂತೆ ಸಿಹಿಯಾಗಿರಲು ಸಾಧ್ಯವೇ? ಮನಸ್ಸು ಒಳ್ಳೆಯದಾದರೇನು,ಅಂತಹ ಮನಸ್ಸಿನಿಂದ ಕಾರ್ಯಮಾಡುವಾಗ ಅರಿವು ಮತ್ತು ಜಾಣತನವಿಲ್ಲದಿದ್ದರೆ, ಪ್ರಯೋಜನವಿಲ್ಲ. ಸಮುದ್ರ ಮಂಥನದಲ್ಲಿ ಕಡೆಗೆ ಬಂದದ್ದು ಅಮೃತವೇ ಆದರೂ ಅದು ಸುಲಭಕ್ಕೆ ಬಂತೇ? ಎಂದು, ಸರ್ವಕಾಲಕ್ಕೂ ಸೂಕ್ತವಾದ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಮುಕ್ತಕದಲ್ಲಿ.
864
ಜಗದ ಸೊಗದರಸಿಕೆಯ ಫಲ, ನೋಡು, ಬರಿ ಕಲಹ ।
ಮೃಗಗಳಾವೇಶಗೊಳಲಿಪ್ಪುದಿನ್ನೇನು? ॥
ಮುಗಿಯುವುದು ಕಾಳ್ಗಿಚ್ಚು ವನ ಬೂದಿಯಾದಂದು ।
ಹಗೆತನವುಮಂತು - ಮಂಕುತಿಮ್ಮ ॥ ೮೬೪ ॥
ಜಗತ್ತಿನಲ್ಲಿನ ಜೀವನದಲ್ಲಿ, ಸುಖ, ಸಂತೋಷ, ಆನಂದ ಮುಂತಾದವುಗಳ ಹುಡುಕುವಿಕೆಯಿಂದ ಕೇವಲ ಕಲಹ, ಜಗಳಗಳು ಉಂಟಾಗಿವೆ. ಪಾಶವೀ ಪ್ರವೃತ್ತಿಯಿಂದ ಮತ್ತೇನನ್ನು ತಾನೇ ಸಾಧಿಸಲು ಸಾಧ್ಯ? ಕಾಡಿನಲ್ಲಿನ ಬೆಂಕಿ ಕಾಡನ್ನು ಸಂಪೂರ್ಣ ಸುಟ್ಟು ಬೂದಿಯಾಗಿಸದ ಹೊರತು ತಣ್ಣಗಾಗುವುದಿಲ್ಲ. ಹಾಗಾಗಿ ಆನಂದದಿಂದ ಇರಬೇಕಾದರೆ ಹಗೆತನವನ್ನು ಬಿಡು ಎಂದು ಆದೇಶಮಾಡಿದ್ದಾರೆ ಗುಂಡಪ್ಪನವರು ಮುಕ್ತಕದಲ್ಲಿ.
865
ಉರಿಯಾರಿ ಮಳೆಗರೆಯೆ ಮರಳಿ ಸಸಿಯೇಳಿವುದು ।
ಮರುಗನೊಂದುವುದು ಪೊನ್ ಪುಟ ಕಾದ ಬಳಿಕ ॥
ನರಜೀವವಂತು ಶುಚಿಯಹುದು ದುಃಖಾಶ್ರುವಿಂ ।
ತರುವಾಯ ಪುನರುದಯ - ಮಂಕುತಿಮ್ಮ ॥ ೮೬೫ ॥
ಹಾಗೆ ಮನುಷ್ಯ-ಮನುಷ್ಯರ ನಡುವಿನ ಪಾಶವೀ ಪ್ರವೃತ್ತಿಯಿಂದ ಉಂಟಾದ ಹಗೆತನದಿಂದ, ‘ಸರ್ವನಾಶ’ವಾದರೂ,’ಶಾಶ್ವತನಾಶ’ವಾಗದೆ, ಬಿಸಿಲಿನ ದಗೆಗೆ ಉರಿದುಹೋದ ಇಳೆಯ ಸಸಿಗಳೆಲ್ಲಾ, ಬೇಸಿಗೆ ಕಳೆದು, ಮಳೆ ಬೀಳಲು ಮತ್ತೆ ಚಿಗುರುವಂತೆ, ಅಧಿಕ ಶಾಖದಲ್ಲಿ ಕಾಯಿಸಲ್ಪಟ್ಟ ಹೊನ್ನು ಮತ್ತೆ ಅಧಿಕ ಮೆರುಗಿನಿಂದ ಥಳಥಳಿಯುವಂತೆ, ತನ್ನ ಅಹಂಕಾರದ ಬೇಗೆಯಲ್ಲಿ ಬೆಂದ ಮಾನವ ಜೀವಿ, ಪಶ್ಚಾತ್ತಾಪದ ಕಣ್ಣೀರಿನಿಂದ, ಹಗುರಾಗಿ, ಶುದ್ಧನಾಗಿ ಮತ್ತೆ ಹೊಸತನವನ್ನು ತನ್ನ ಜೀವನದಲ್ಲಿ ತುಂಬಿಕೊಳ್ಳುತ್ತಾನೆ ಎಂದು ಉಲ್ಲೇಖಿಸಿದ್ದಾರೆ ಸನ್ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
866
ಆತುಮದ ಸಂಸ್ಥಿತಿಗೆ ದೈಹಿಕಸಮಾಧಾನ; ।
ಭೌತವಿಜ್ಞಾನದಾ ರಾಷ್ಟ್ರ ಸಂಸ್ಥೆಗಳಾ ॥
ನೂತನ ವಿವೇಕಪ್ರಯೋಗಗಳಿನಾದೀತು ।
ಭೂತಿಸಂಪದ ಜಗಕೆ - ಮಂಕುತಿಮ್ಮ ॥ ೮೬೬ ॥
ಆತ್ಮದ ಸುಸ್ಥಿತಿಗೆ ದೇಹ ಸಮಾಧಾನವಾಗಿರಬೇಕು. ಭೌತಿಕ ವಿಜ್ಞಾನದ ಪ್ರಯೋಗಗಳಿಂದ, ಹೊಸ ಹೊಸ ಸಾಧನಗಳನ್ನು ಕಂಡುಹಿಡಿಯುತ್ತಾ ರಾಷ್ಟ್ರಗಳು ಮತ್ತು ಆ ರಾಷ್ಟ್ರಗಳಲ್ಲಿನ ಸಂಸ್ಥೆಗಳು ಸಂಪತ್ತನ್ನು ಸೃಷ್ಟಿಸಿ ಜನರ ಸುಖಸಾಧನಗಳಾಗಿಸುತ್ತಾರೆ ಎಂದು, ಜಗತ್ತಿನಲ್ಲಿ ಮನುಷ್ಯನ ‘ ಸುಖಸಾಧನಗಳ ‘ ಹುಡುಕುವಿಕೆಯ ಮತ್ತೊಂದು ಆಯಾಮವನ್ನು ಪರಿಚಯಿಸಿದ್ದಾರೆ ಮಾನ್ಯ ಗುಂಡಪ್ಪನವರು ಮುಕ್ತಕದಲ್ಲಿ.
867
ಯತನ ಕರ್ತವ್ಯವದು, ನಮಗೆ ವಿದ್ಯಾಭ್ಯಾಸ ।
ಹಿತಪರಿಜ್ಞಾನ ಯತ್ನಾನುಭವ ಫಲಿತ ॥
ಸತತಯತ್ನದಿನಾತ್ಮ ಶಕ್ತಿ ಪರಿವರ್ಧಿಪುದು ।
ಯತನ ಜೀವನಶಿಕ್ಷೆ - ಮಂಕುತಿಮ್ಮ ॥ ೮೬೭ ॥
ಪ್ರಯತ್ನಪಡುವುದು ಕರ್ತವ್ಯ. ಅದು ನಮಗೆ ಅದೊಂದು ಕಲಿಕೆಯ ಮಾರ್ಗ. ಹಿತವಾದ ಪರಿಜ್ಞಾನದ ವೃದ್ಧಿಯೇ, ಪ್ರಯತ್ನದ ಅನುಭವದಿಂದ ಸಿಗುವ ಫಲಿತ. ಬದುಕಿನಲ್ಲಿ ಸತತವಾದ ಪ್ರಯತ್ನದಿಂದ ಆತ್ಮಶಕ್ತಿಯ ವೃದ್ಧಿಯಾಗುವುದು. ಸತತವಾಗಿ ಪ್ರಯತ್ನವನ್ನು ಪಡುವುದೇ ಜೀವನದಲ್ಲಿ ಶಿಕ್ಷೆಯಂತೆ ಎನ್ನುತ್ತಾರೆ ಡಿವಿಜಿಯವರು ಈ ಮುಕ್ತಕದಲ್ಲಿ.
868
ಅರೆದಿನದ ನಮ್ಮ ಯತ್ನದಿನದೇನೆನ್ನದಿರು ।
ಕಿರಿದುಮೊಡಗೂಡಿರಲು ಸಿರಿಯಹುದುಬಾಳ್ಗೆ ॥
ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ? ।
ಕಿರುಜಾಜಿ ಸೊಗಕುಡದೆ? - ಮಂಕುತಿಮ್ಮ ॥ ೮೬೮ ॥
‘ನಮ್ಮದು ಅಲ್ಪ ಪ್ರಯತ್ನ, ಇದರಿಂದ ಏನಾಗಬಹುದು ಮಹಾ’ ಎನ್ನುವ ಭಾವ ಬೇಡ. ಏಕೆಂದರೆ ಚಿಕ್ಕ ಚಿಕ್ಕ ಸಾಧನೆಗಳಿಂದಲೇ ಬಾಳು ಸಂವೃದ್ಧವಾಗುತ್ತದೆ. "ಸಾಲುಮರಗಳು ನಮಗೆ ನೆರಳನ್ನು ನೀಡುವುದಿಲ್ಲವೇ? ಜಾಜಿಯ ಹೂವು ಸಣ್ಣದಾದರೂ ಸುಗಂಧವನ್ನು ನೀಡುವುದಿಲ್ಲವೇ?" ಎಂದು ಜಗತ್ತಿನಲ್ಲಿ ನಮ್ಮ ಕಿಂಚಿತ್ ಕೃತಿಯಿಂದಲೂ ಬಾಳಿಗೆ ಒಂದು ಅರ್ಥವನ್ನು ಕಂಡುಕೊಳ್ಳಬಹುದು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.