Well-meaning prudence
869
—
873
869
ಮಾರ್ಗಣೆಯೆ ಮುಖ್ಯ; ಲಭ್ಯದ ಮಾತದಂತಿರಲಿ ।
ಸ್ವರ್ಗವನು ಭುವಿಗಿಳಿಸಬಲ್ಲವನದಾರು? ॥
ಅರ್ಗಲ ವಿಹೀನ ಸರ್ವಾರ್ಥ ಸಹಭಾಗಿತೆಯೆ ।
ಅರ್ಘಾರ್ಹತತ್ತ್ವವೆಲೊ - ಮಂಕುತಿಮ್ಮ ॥ ೮೬೯ ॥
ಎಲ್ಲರೂ ಎಲ್ಲಾ ಕಾಲಕ್ಕೂ ಸುಖದ ಸಾಧನಗಳನ್ನು ಹುಡುಕುವುದೇ ಮುಖ್ಯ. ಅದರಿಂದ ಏನು ಸಿಕ್ಕಿತು ಅಥವಾ ಇಲ್ಲ ಎನ್ನುವ ಮಾತು ಒತ್ತಟ್ಟಿಗಿರಲಿ. ಎಲ್ಲಾ ಸುಖಗಳ ತಾಣವಾದ ಸ್ವರ್ಗವನು ಈ ಭೂಮಿಯಮೇಲೆ ತರಬಲ್ಲವನು ಯಾರು? ಜಗತ್ತಿನಲ್ಲಿರುವ ಸುಖಸಾಧನಗಳನ್ನು, ಅಬಾಧಿತವಾಗಿ ಅಡೆತಡೆಯಿಲ್ಲದೆ ಸಮಾನವಾಗಿ ಎಲ್ಲರೂ ಹಂಚಿಕೊಂಡು ಬಾಳುವುದೇ ಅತ್ಯುತ್ತಮ ತತ್ವ ಎನ್ನುತ್ತಾರೆ, ಸನ್ಮಾನ್ಯ ಗುಂಡಪ್ಪನವರು.
870
ದಿವಿಜಸುಧೆ ಬರಿಮಧುವೊ; ಹುಳಿಯುಪ್ಪು ಮಿಶ್ರಿತವೊ? ।
ಅವನಿಯುಣಿಸಿನಲಿ ಷಡ್ರಸ ತಪ್ಪದಿಹುದು ॥
ಲವಲೇಶಮಾನುಮಿರದಿರೆ ಕಯ್ಪು ಜೀವನದಿ ।
ಪವಳಿಸಿರನೇ ನರನು? - ಮಂಕುತಿಮ್ಮ ॥ ೮೭೦ ॥
ದೇವಲೋಕದ ಅಮೃತ ಬರೀ ಸಿಹಿಯೋ ಹುಳಿಯುಪ್ಪುಮಿಶ್ರಿತವೋ?, ಗೊತ್ತಿಲ್ಲ. ಆದರೆ ಭೂಮಿಯ ಆಹಾರದಲ್ಲಿ ಷಡ್ರಸಗಳು ತಪ್ಪದೆ ಇರುವುದು. ಬದುಕಿನ ಅನುಭವದಲ್ಲಿ ಎಲ್ಲವೂ ಸವಿಯಾಗಿ ಸ್ವಲ್ಪವಾದರೂ ಕಹಿ ಇರದೇ ಇದ್ದರೆ, ಮನುಷ್ಯ ಸದಾ ಮಲಗಿ ನಿದ್ರಿಸದೆ ಇರುವುದ್ದಿಲ್ಲವೇ? ಎಂದು ಪ್ರಶ್ನಿಸುತ್ತಾ ಮಿಶ್ರ ಅನುಭವಗಳ ಸೂಕ್ತತೆಯನ್ನು ಮತ್ತು ಅವಶ್ಯಕತೆಯನ್ನೂ ಸಹ ಅರುಹಿದ್ದಾರೆ ಮಾನ್ಯ ಗುಂಡಪ್ಪನವರುಈ ಮುಕ್ತಕದಲ್ಲಿ.
871
ಆರಿಗಾವುದು ತಕ್ಕುದಾರಿಗಾವುದು ದಕ್ಕ- ।
ದೀ ರಹಸ್ಯದಿನಾದ ಸಾಹ್ಯವುಪಕಾರ ॥
ತಾರತಮ್ಯವಿವೇಕವರಿಯದಾ ಸಂಸ್ಕಾರ ।
ಪ್ರೇರಕವೊ ಚೌರ್ಯಕ್ಕೆ - ಮಂಕುತಿಮ್ಮ ॥ ೮೭೧ ॥
ಯಾರು ಯಾರಿಗೆ ಏನು ತಕ್ಕುದ್ದೋ ಅವರವರಿಗೆ ಅದು ದಕ್ಕುತ್ತದೆ. ಆದರೆ ಯಾರಿಗೆ ಏನು ಸೂಕ್ತವಾದದ್ದು ಮತ್ತು ಯಾರಿಗೆ ಏನು ದಕ್ಕುತ್ತದೆ ಎನ್ನುವುದು ರಹಸ್ಯವಾಗಿರುವುದು. ಆ ರಹಸ್ಯವನ್ನು ಅರಿತರೆ ನಮಗೆ ಉಪಕಾರವಾಗುತ್ತದೆ. ನಾವು ಬಯಸಿದ್ದು ಮತ್ತು ನಾವು ಪಡೆದಿದ್ದರ ನಡುವಿನ ಅಂತರವನ್ನು ಅರಿತರೆ ಸಂಸ್ಕಾರ ಬೆಳೆಯುತ್ತದೆ. ಹಾಗೆ ಅರಿಲಾಗದಿದ್ದರೆ, ನಮಗೆ ಸಿಗದ ವಸ್ತುವನ್ನು ಪಡೆಯಲು ಕಳ್ಳತನಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ, ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
872
ಗುಡಿಸಲೇನೊಣಹುಲ್ಲು ಕಡ್ಡಿ ಮಣ್ಣೆನ್ನುತಲಿ ।
ಬಡವನಲಿ ಕೊರತೆಗಳ ನೆಡುವುದರಿದಲ್ಲ ॥
ಕೆಡಿಸಿದಾ ಗುಡಿಸಿಲಿನ ನೆಮ್ಮದಿಯ ಮತ್ತೆಂತು ।
ಕೊಡಲಹುದವಂಗೆ ನೀಂ? - ಮಂಕುತಿಮ್ಮ ॥ ೮೭೨ ॥
ಗುಡಿಸಲನ್ನು ‘ ಅದೇನು ಮಹಾ!!! ಒಣಹುಲ್ಲಿನಿಂದ, ಕಡ್ಡಿ ಮಣ್ಣಿನಿಂದ’ ಕಟ್ಟಿರುವುದು ಎಂದು ತಾತ್ಸಾರದಿಂದ ಅದರಲ್ಲಿ ವಾಸಿಸುವ ಬಡವನನ್ನು ಹೀನಾಯವಾಗಿ ಕಂಡು ಆ ಗುಡಿಸಲನ್ನು ಕೆಡವಿ ಕೆಡಿಸಿದರೆ, ಆ ಗುಡಿಸಿಲಿನಲ್ಲೇ ಅವನಿಗೆ ಸಿಗುತ್ತಿದ್ದ ನೆಮ್ಮದಿಯನ್ನು, ಮತ್ಯಾವುದರಿಂದಲಾದರೂ, ಅವನಿಗೆ ಕೊಡಲಾಗುತ್ತದೆಯೇ? ಎಂದು, ಅವರವರ ಸುಖ ಸಾಧನ ಅವರವರಿಗೆ ಸೂಕ್ತ ಎನ್ನುವಂತಹ ಸೂತ್ರವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
873
ಬಳಲಿ ನೆಲದಲಿ ಮಲಗಿ ಮೈಮರೆತು ನಿದ್ರಿಪನ ।
ಕುಲುಕಿ ಹಾಸಿಗೆಯನರಸೆನುವುದುಪಕೃತಿಯೆ? ॥
ಒಳಿತನೆಸಗುವೆನೆಂದು ನೆಮ್ಮದಿಯ ನುಂಗದಿರು ।
ಸುಲಭವಲ್ಲೊಳಿತೆಸೆಗೆ - ಮಂಕುತಿಮ್ಮ ॥ ೮೭೩ ॥
ಯಾರೋ ಒಬ್ಬ ದುಡಿದು ಸುಸ್ತಾಗಿ, ನೆಲದಮೇಲೆ ಮಲಗಿ ನಿದ್ರಿಸುತ್ತಿರುವವನನ್ನು ಅಲುಗಾಡಿಸಿ, ಎಬ್ಬಿಸಿ, ಹಾಸಿಗೆಯನ್ನು ಹುಡುಕಿಕೊಂಡು ಮಲಗಿಕೋ ಎಂದು ಹೇಳುವುದು ಉಪಕಾರವೇನು? ಉಪಕಾರಮಾಡುವೆ ಎಂದು ಪರರ ನೆಮ್ಮದಿಯನ್ನು ಕಸಿಯಬೇಡ. ಮತ್ತೊಬ್ಬರಿಗೆ ಒಳಿತನ್ನು ಮಾಡುವುದು ಅಷ್ಟು ಸುಲಭವಲ್ಲ ಎಂದು ಪರರಿಗುಪಕರಿಸುವ ಪರಿಯನ್ನು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.