Kagga Logo

World-dance

850

853

850

ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ ।
ಪ್ರತ್ಯೇಕ ಜೀವದಶೆಯವನಂಗಭಂಗಿ ॥
ಸತ್ಯಸತ್ತ್ವಜ್ವಾಲೆ ವಿಶ್ವಮಾಯಾಲೀಲೆ ।
ಪ್ರತ್ಯಗಾತ್ಮನು ನೀನು - ಮಂಕುತಿಮ್ಮ ॥ ೮೫೦ ॥

ಈ ಜಗತ್ತೆಲ್ಲ, ಆ ಪರಬ್ರಹ್ಮನ ನಾಟ್ಯವಿದ್ದಂತೆ. ಇಲ್ಲಿರುವ ಜೀವಿಗಳೆಲ್ಲವೂ ಅವನ ಆ ನಾಟ್ಯದ ಬೇರೆಬೇರೆ ವಿಧದ ಭಂಗಿಗಳು. ಶುದ್ಧಸತ್ವದ ಆ ಬೆಂಕಿಯೇ ಈ ವಿಶ್ವದಲ್ಲಿ ಮಾಯಾಲೀಲೆಯನ್ನು ತೋರುತ್ತಿದೆ. ನೀನು ಕೇವಲ ಆ ಪರಬ್ರಹ್ಮ ವಸ್ತುವಿನ ವಿಸ್ತೃತ ರೂಪವಷ್ಟೆ, ಎಂದು ಒಂದು ಗಹನವಾದ ತತ್ವವನ್ನು ಪ್ರತಿಪಾದಿಸಿದ್ದಾರೆ ಮಾನ್ಯ ಗುಂಡಪ್ಪನವರು.

851

ಕಣ್ದೆರೆದು ನೋಡು, ಚಿತ್ಸತ್ತ್ವಮೂರ್ತಿಯ ನೃತ್ಯ ।
ಕಣ್ಮುಚ್ಚಿ ನೋಡು, ನಿಶ್ಚಲ ಶುದ್ಧ ಸತ್ತ್ವ ॥
ಉನ್ಮುಖನು ನೀನೆರಡು ಜಗಕವಿರುತಿರಲಾಗ ।
ಹೃನ್ಮಧ್ಯದಲಿ ಶಾಂತಿ - ಮಂಕುತಿಮ್ಮ ॥ ೮೫೧ ॥

ಕಣ್ಣನ್ನು ತೆರೆದು ನೋಡಿದರೆ ಪರತತ್ವದ ಪ್ರತಿ ನಿತ್ಯ ಬದಲಾಗುವ ಕೋಟಿ ಕೋಟಿ ರೂಪದ ಸುಂದರ ನೃತ್ಯ, ಲೀಲಾವಿನೋದ. ಕಣ್ಮುಚ್ಚಿ ನೋಡಿದರೆ ಇಡೀ ಜಗತ್ತನ್ನು ಆವರಿಸಿಕೊಂಡು ಆಳುವ ಶುದ್ಧ ಮತ್ತು ನಿಶ್ಚಲ ಪರತತ್ವದ ದರ್ಶನ . ಹೀಗೆ ನೀನು ಎರಡೂ ಸ್ಥಿತಿಗಳನ್ನು ಸಮಭಾವದಿಂದ ನೋಡಿದರೆ ಮನಸ್ಸಿನಂತರಾಳದಲ್ಲಿ ಶಾಂತಿ ನೆಲೆಸುತ್ತದೆ ಎನ್ನುವುದೇ ಮಾನ್ಯ ಗುಂಡಪ್ಪನವರ ಈ ಮುಕ್ತಕದ ಹೂರಣ.

852

ನವನವ ಪ್ರಶ್ನೆಗಳು, ನವನವ ಪರೀಕ್ಷೆಗಳು ।
ದಿವಸಾಬ್ದಯುಗ ಚಕ್ರ ತಿರುತಿರುಗಿದಂತೆ ॥
ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ ।
ಅವಿರತದ ಚೈತನ್ಯ - ಮಂಕುತಿಮ್ಮ ॥ ೮೫೨ ॥

ದಿನ, ವರುಷ ಯುಗಗಳು ಕಳೆದಂತೆ ಮನುಷ್ಯನ ಮನಸ್ಸಿನಲ್ಲಿ ಹೊಸ ಹೊಸ ಪ್ರಶ್ನೆಗಳು ಉದ್ಭವಿಸುತ್ತವೆ ಮತ್ತು ಅವನು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾನೆ. ಹೀಗೆ ಆತ್ಮಹಿತವನ್ನು ವೃದ್ಧಿಗೊಳಿಸಿಕೊಳ್ಳಲು, ಆ ಪರತತ್ವದ ಚೈತನ್ಯ ನಿರಂತರ ಕೃಷಿ ಮಾಡುತ್ತಲೇ ಇರುತ್ತದೆ ಎನ್ನುವುದೇ ಈ ಮುಕ್ತಕದ ಹೂರಣ.

853

ಸಾರ್ವಲೌಕಿಕಸೌಖ್ಯ ನೆಲಸುವನ್ನೆಗಮಿಳೆಯೊ- ।
ಳೊರ್ವನುಂ ಸುಖಿಯಲ್ತು, ದಿಟದಿ. ಪೂರ್ಣದಲಿ ॥
ಒರ್ವನುಬ್ಬಸದ ಬಿಸಿ ವಿಷವಾಯುವಾಗಿ ತಾ ।
ನುರ್ವರೆಯ ಮುಸುಕೀತು - ಮಂಕುತಿಮ್ಮ ॥ ೮೫೩ ॥

ಈ ಭೂಮಿಯ ಮೇಲೆ ಸರ್ವಜನರ ಸುಖ ನೆಲೆಗೊಳ್ಳುವ ತನಕ ಎಲ್ಲರೂ ಸುಖಿಗಳು ಎಂದು ಹೇಳಲು ಆಗುವುದಿಲ್ಲ. ಇಲ್ಲಿ ಎಲ್ಲರೂ ಸರ್ವ ಕಾಲಕ್ಕೂ ಸುಖಿಗಳಲ್ಲ ಎನ್ನುವುದು ಸತ್ಯ. ಏಕೆಂದರೆ ಯಾರೋ ಒಬ್ಬನ ಉಬ್ಬಸದ ಉಸಿರು ವಿಷಗಾಳಿಯಾಗಿ ಈ ಜಗತ್ತನ್ನೇ ಆವರಿಸಿಕೊಳ್ಳಬಹುದು ಎಂದು ಹೇಳುತ್ತಾ ಜಗತ್ತಿನ ಮನುಷ್ಯನ ಬದುಕಿನ ಒಂದು ಆಯಾಮವನ್ನು ನಮಗೆ ತೋರಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.