Kagga Logo

Three kings

149

153

149

ಅರಸನೊಬ್ಬನಲ್ಲ; ಮೂವರು ಬಾಳನಾಳುವರು ।
ನರ ಕರುಮ ದೈವಗಳು; ತೊಡಕದಕೆ ಸಾಜ ॥
ಗುರಿಯಿಡದ, ಮೊದಲು ಕೊನೆಯಿರದ, ದರಬಾರಿನಲಿ ।
ಸರಿಯೇನೊ ತಪ್ಪೇನೊ? - ಮಂಕುತಿಮ್ಮ ॥ ೧೪೯ ॥

ನಮ್ಮ ಬಾಳಿಗೆ ಅರಸ ಅಥವಾ ಒಡೆಯ ಒಬ್ಬನಲ್ಲ. ಮೂರು ಜನರಿದ್ದಾರೆ. ನಾವು, ನಮ್ಮ ಪೂರ್ವ ಕರ್ಮ ಮತ್ತು ದೈವ. ಹೀಗೆ ಒಂದು ಕಾರ್ಯಕ್ಕೆ ಮೂರು ಅರಸರಿದ್ದಾಗ, ತೊಡಕುಂಟಾಗುವುದು ಸಹಜ. ಒಂದು ಆದಿ ಮತ್ತು ಒಂದು ಅಂತ್ಯವಿರದ ಮತ್ತು ಯಾವುದೇ ನಿರ್ಧಾರಿತ ಗುರಿಯಿರದ ಈ ಬಾಳಿನಲ್ಲಿ ನಡೆಯುವುದರಲ್ಲಿ ಸರಿಯೇನೋ ತಪ್ಪೇನೋ ಎಂದು ಒಂದು ಮಹತ್ತಾದ ವಿಷಯವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. 

150

ದೊರೆ ಮೂವರಿರುವಲ್ಲಿ ಸರಿಯಿಹುದೆ ಸೋಜಿಗವು ।
ಕೊರತೆ ಹೆಚ್ಚಿಕೆಗಳಿರಲಚ್ಚರಿಯದೇನು? ॥
ಬರಲಿ ಬರುವುದು; ಸರಿವುದೆಲ್ಲ ಸರಿಯಲಿ; ನಿನಗೆ ।
ಪರಿವೆಯೇನಿಲ್ಲೆಲವೊ - ಮಂಕುತಿಮ್ಮ ॥ ೧೫೦ ॥

ನಮ್ಮನ್ನಾಳುವ ದೊರಗಳು ಮೂವರು ಇರುವಲ್ಲಿ ಎಲ್ಲವೂ ಸರಿಯಿದ್ದರೆ ಅದು ಆಶ್ಚರ್ಯವೇ ಸರಿ. ಹೆಚ್ಚು ಕಡಿಮೆಗಳು, ಕೊರತೆ, ಹೆಚ್ಚಳಿಕೆಗಳು ಇದ್ದರೆ ಅಚ್ಚರಿಯಿಲ್ಲ. ಬರುವುದು ಬರಲಿ ನಡೆಯುವುದೆಲ್ಲ ನಡೆಯಲಿ ಅದನ್ನು ಕುರಿತು ನೀವು ಹೆಚ್ಚಾಗಿ ಚಿಂತಿಸುವೆ ಏಕೋ ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ. 

151

ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ ।
ಜೀವವಾಸನೆಗಳಲಿ ಪೂರ್ವಕೃತವೆನಿಸಿ ॥
ಧೀವರ್ತನೆಯಲಿ ಪೌರುಷವೆನಿಸಿ ಪರಸತ್ತ್ವ ।
ತ್ರೈವಿಧದೊಳಿರುತಿಹುದು - ಮಂಕುತಿಮ್ಮ ॥ ೧೫೧ ॥

ಪರಮಾತ್ಮ ಈ ಜಗತ್ತನ್ನು ಸೃಷ್ಟಿಸಿ ಪ್ರಕೃತಿಯ ಮೂಲಕ ಇದನ್ನು ನಡೆಸುತ್ತಾನೆ. ಈ ಜಗದ ಜೀವಿಗಳು, ತಮ್ಮ ಪೂರ್ವ ಮತ್ತು ಪೂರ್ವಜನ್ಮದ ವಾಸನಾ ಪ್ರೇರಿತ ಕರ್ಮಗಳ ಅನುಸಾರವಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ. ಜೀವಿಗಳು ತಮ್ಮ ತಮ್ಮ ಪೂರ್ವಕರ್ಮಗಳನ್ನು ತಿದ್ದಿಕೊಂಡು ಮುನ್ನಡೆಯಲು “ಧೀ” ಅಂದರೆ ವಿವೇಚನಾ ಶಕ್ತಿಯನ್ನೂ ಕೊಟ್ಟಿದ್ದಾನೆ. ಹೀಗೆ ಪರಮಾತ್ಮ, ಪ್ರಕೃತಿ ಮತ್ತು ಜೀವಿಗಳ ಧೀ ಶಕ್ತಿಗಳ ಬಲದಿಂದಲೇ ಈ ಜಗದ್ವ್ಯಾಪಾರ ನಡೆಸುತ್ತಾನೆ ಎಂದು ಪ್ರಸ್ತಾಪಸಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

152

ಪುಣ್ಯಪಾಪ ಋಣಾನುಬಂಧ ವಾಸನೆಗಳಿವು ।
ಜನ್ಮಾಂತರದ ಕರ್ಮಶೇಷದಂಶಗಳು ॥
ಎಣ್ಣಿಕೆಗೆ ಸಿಲುಕದಾಕಸ್ಮಿಕ ಯದೃಚ್ಛೆಗಳು ।
ಸನ್ನಿಹಿತ ದೈವಿಕದೆ - ಮಂಕುತಿಮ್ಮ ॥ ೧೫೨ ॥

ಒಂದು ಬೀಜ ತನ್ನ ತಾಯಿ ಮರದಿಂದ ಬೇರ್ಪಟ್ಟು, ಮುಂದೆ ಭೂಮಿ, ನೀರು ಮತ್ತು ಬೆಳಕಿನ ಸಂಸರ್ಗದಿಂದ ತಾನೂ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ ಮರವಾಗಿ ಬೆಳೆದಾಗ, ತನ್ನ ತಾಯಿಮರದಿಂದ ಪಡೆದುಕೊಂಡಬಂದ ಎಲ್ಲ ಗುಣಗಳನ್ನೂ “ನಾವು ಕಾಣಲಾಗದಿದ್ದರೂ” ಆ ಮರದಲ್ಲಿ ಪ್ರಕಟಿಸುವಂತೆ, ಪ್ರಕಾಶಿಸುವಂತೆ, ಎಲ್ಲ ಜೀವಿಗಳೂ ತಮ್ಮ ತಮ್ಮ ಪೂರ್ವಜನ್ಮದಲ್ಲಿ ಆರ್ಜಿಸಿದ ಗುಣಗಳು ಮತ್ತು ಅಂಟಿಸಿಕೊಂಡ ವಾಸನೆಗಳನ್ನು ಒಂದು ” ಸೂಕ್ಷ್ಮ ಶರೀರದಲ್ಲಿ ಹೊತ್ತು ತಂದು ಮತ್ತೊಂದು ಶರೀರ ( ಬೀಜಕ್ಕೆ, ಭೂಮಿ ಮತ್ತು ನೀರಂತೆ) ಸಿಕ್ಕಾಗ ಆ ಗುಣಗಳನ್ನು ಮತ್ತು ವಾಸನೆಗಳನ್ನು ಪ್ರಕಾಶಗೊಳಿಸುತ್ತಾ ಅನುಭವಿಸುತ್ತವೆ ಎನ್ನುವುದು ಭಾರತೀಯ ಸನಾತನ ಸಿದ್ಧಾಂತದ ಸಾರ. ಇದನ್ನೇ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖ ಮಾಡಿದ್ದಾರೆ.

153

ಪ್ರಾರಾಬ್ಧಕರ್ಮಮುಂ ದೈವಿಕದ ಲೀಲೆಯುಂ ।
ತೋರುವುವದೃಷ್ಟವಿಧಿಯೆಂಬ ಪೆಸರುಗಳಿಂ ॥
ಆರುಮಳೆವವರಿಲ್ಲವವುಗಳಾವೇಗಗಳ ।
ಪೌರುಷವು ನವಸತ್ತ್ವ - ಮಂಕುತಿಮ್ಮ ॥ ೧೫೩ ॥

ಪೂರ್ವ ಮತ್ತು ಪೂರ್ವಜನ್ಮ ಕರ್ಮವು ನಮಗೆ ಪ್ರಾಪ್ತವಾಗುವುದು ಒಂದು ದೈವೀ ಕ್ರಿಯೆ. ಕಾಣಲು ಸಾಧ್ಯವಿಲ್ಲವಾದ್ದರಿಂದ ಇದನ್ನು ದೈವಲೀಲೆಯನ್ನಬೇಕು. ಅದನ್ನು ಅದೃಷ್ಟ( ಕಣ್ಣಿಗೆ ಕಾಣದ್ದು ಎಂದು ಅರ್ಥ) ಅಥವಾ ವಿಧಿ ಎಂದು ಕರೆಯಲ್ಪಡುತ್ತದೆ. ಅವುಗಳ ಚಲನೆ ಮತ್ತು ವೇಗವನ್ನು ಯಾರಿಂದಲೂ ಅಳೆಯಲು ಸಾಧ್ಯವಿಲ್ಲ. ಸ್ವಪ್ರಯತ್ನದಿಂದ ಹೊಸತನವನ್ನು ಕಂಡುಕೊಳ್ಳಬಹುದು ಎಂದು ಈ ಕಗ್ಗದ ಹೂರಣ.