Māyā is Kaikeyi
144
—
148
144
ವಾಯುವಂ ಕಾಣ್ಬನಾರ್? ತತ್ಕ್ರಿಯೆಯ ಕಾಣನಾರ್? ।
ಮಾಯೆಯಂತಪರೀಕ್ಷ್ಯಸತ್ತ್ವದೀಕ್ಷ್ಯಕೃತಿ ॥
ರಾಯನಂ ಕಾಣಲಾಗದೆ ಮಂತ್ರಿಯೆಡೆಸಾರ್ವ ।
ದೇಯಾರ್ಥಿಯೊಲು ನೀನು - ಮಂಕುತಿಮ್ಮ ॥ ೧೪೪ ॥
ಗಾಳಿಯನ್ನು ನೋಡಿದವರು ಯಾರು. ಆದರೆ ಅದರ ಕ್ರಿಯೆಯನ್ನು ಅನುಭವಿಸದವರಾರು. ಮಾಯೆಯನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಆದರೆ ಆ ಪರಮಾತ್ಮನ ಕ್ರಿಯೆಯನ್ನು ನಾವು ನೋಡಬಹುದು ಆದರೆ ರಾಜನನ್ನು ನೋಡಲಾಗದೆ ಅವನ ಸೇವಕ ಮಂತ್ರಿಯ ಬಳಿ ಹೋಗಿ ಬೇಡುವವನಂತೆ ನೀ ಇದ್ದೀಯೇ ಎಂದು ಮಾನ್ಯ ಗುಂಡಪ್ಪನವರು ತಮ್ಮನ್ನೇ ತಾವು ಹೇಳಿಕೊಳ್ಳುತ್ತಾ ನಮ್ಮ ಸ್ಥಿತಿಯೂ ಹಾಗೆ ಇದೆ ಎಂದು ಸೂಚ್ಯವಾಗಿ ಹೇಳುತ್ತಾರೆ.
145
ಮಾಯೆಯೇ ಸರಸಿ; ನಿರ್ಗುಣ ಸತ್ತ್ವದಿಂದೇನು? ।
ಮಾಯೆ ಬಿಡೆ ಜಗವೆತ್ತ? ಜೀವಕಥೆಯೆತ್ತ? ॥
ಮೇಯವಲ್ಲದ ಮಹಿಮೆ ಛಾಯೆಯಾ ಬ್ರಹ್ಮನದು ।
ತಾಯವಳು ನೀಂ ಮಗುವು - ಮಂಕುತಿಮ್ಮ ॥ ೧೪೫ ॥
ನಮ್ಮ ಜೀವನದ ಜೊತೆಗೆ ಸರಸವಾಡುವ ಆ ಸರಸಿಯೇ ಈ ಮಾಯೆ. ಗುಣ ರಹಿತವಾದ ಸತ್ವದಿಂದ ಏನು ಪ್ರಯೋಜನ. ಈ ಮಾಯೆಯೇ ಇಲ್ಲದೆ ಹೋದರೆ ಈ ಜಗತ್ತಿನಲ್ಲಿ ವೈವಿಧ್ಯತೆ ಇಲ್ಲದೆ ಸ್ವಾರಸ್ಯವೇ ಇಲ್ಲದೆ ಹೋಗುತ್ತಿತ್ತು. ಅರ್ಥವಾಗದ ( ಮೇಯವಲ್ಲದ) ಈ ಮಾಯೆಯಾ ಮಹಿಮೆ ಆ ಸೃಷ್ಟಿಕರ್ಣ ಬ್ರಹ್ಮನ ಛಾಯೆ (ನೆರಳು) ಈ ಮಾಯೆ ತಾಯಿ ಇದ್ದ ಹಾಗೆ ನಾವೆಲ್ಲಾ ಅವಳ ಮಕ್ಕಳಂತೆ ಎಂದು ಒಂದು ಸ್ವಾರಸ್ಯಕರ ವಿಷಯವನ್ನು ಈ ಕಗ್ಗದಲ್ಲಿ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.
146
ರಾಯ ಮುದಿದಶರಥನಾಡಿಸುತ ಕೈಕೇಯಿ ।
ಸ್ವೀಯ ವಶದಲಿ ಕೋಸಲವನಾಳಿದಂತೆ ॥
ಮಾಯೆ ಬೊಮ್ಮನ ಬಿನದವಡಿಸಿ ನಮ್ಮೀ ಜಗವ ।
ಕಾಯುವಳು ತನ್ನಿಚ್ಛೆ - ಮಂಕುತಿಮ್ಮ ॥ ೧೪೬ ॥
ಇಲ್ಲಿ ಮಾನ್ಯ ಗುಂಡಪ್ಪನವರು ರಾಮಾಯಣದ ಒಂದು ಪ್ರಸಂಗವನ್ನು ತರುತ್ತಾರೆ. ದಾಸಿ ಮಂಥರೆಯ ಮಾತ ಕೇಳಿ, ತಾನು ಪಡೆದ ವರಗಳ ಬಲದಿಂದ, ತನ್ನ ಗಂಡನಾದ ಮುದುಕ ದಶರಥನನ್ನು, ಯುವರಾಜ ರಾಮನು ಪಟ್ಟಕ್ಕೇರದೆ ತನ್ನ ಮಗನಾದ ಭರತನು ರಾಜನಾಗಬೇಕೆಂಬ ಬಯಕೆಯ ಮುಂದಿಟ್ಟು, ತನ್ನ ಮೋಹದ ಬಲೆಯನ್ನು ಬೀಸಿ, ಅವನನ್ನು ಒಪ್ಪಿಸುತ್ತಾಳೆ. ದುಃಖಿತನಾದಾಗ್ಯೂ, ಅವಳ ಮೋಹದಲ್ಲಿ, ಅವಳಿಚ್ಚೆಯಂತೆ ರಾಜ್ಯಬಾರ ಮಾಡಲು ಬಿಡುತ್ತಾನೆ. ಹಾಗೆಯೆ ಪರಬ್ರಹ್ಮನನ್ನು ಆನಂದ ಪಡಿಸುತ್ತಾ, ಈ ಮಾಯೆಯಂಬ ಮಾಯಾಂಗನೆ ತನ್ನ ಇಚ್ಚೆಯಂತೆ ಈ ಜಗವನಾಳುತ್ತಿದ್ದಾಳೆ, ಎಂದು ಮಾಯೆಯ ಪ್ರಭಾವವನ್ನು ವಿವರಿಸುತ್ತಾರೆ, ಶ್ರೀ ಗುಂಡಪ್ಪನವರು. ಇರಲಿ ಅಮೇಯವಾದ ಮಾಯೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ನಮ್ಮನ್ನು ಭ್ರಮಾ ಲೋಕಕ್ಕೆ ತಳ್ಳುತ್ತದೆ. ಅಲ್ಲೂ ಸಹ ದಶರಥನು” ಇಲ್ಲ ಸಾಧ್ಯವಿಲ್ಲ” ಎಂದಿದ್ದಿದ್ದರೆ ರಾಮಾಯಣವೇ ನಡೆಯುತ್ತಿರಲಿಲ್ಲ. ಹಾಗೆಯೇ ನಮ್ಮ ಜೀವನಗಳಲ್ಲೂ ನಾವು ಎಷ್ಟೋ ಬಾರಿ ಅಂತಹ ಭ್ರಮೆಗಳಿಗೆ ತುತ್ತಾಗಿ, ಆ ಕ್ಷಣದಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡು ನಂತರ ಧೀರ್ಘಕಾಲ ಪರದಾಡು ವಂತಾ ಸ್ಥಿತಿಗೆ ಬೀಳುವುದಿಲ್ಲವೇ? ಹಾಗೆ.
147
ಮಾಯೆಯೊಮ್ಮೊಮ್ಮೆ ತೋರುವಳು ಮಿಗಿಲಕ್ಕರೆಯ ।
ಮಾಯಿಪಳು ಗಾಯಗಳನೀವಳಿಷ್ಟಗಳ ॥
ಮೈಯ ನೀಂ ಮರೆಯೆ ನೂಕುವಳಾಗ ಪಾತಾಳಕೆ ।
ಪ್ರೇಯ ಪೂತನಿಯವಳು - ಮಂಕುತಿಮ್ಮ ॥ ೧೪೭ ॥
ನಮಗೆ ಅರ್ಥವೇ ಆಗದ ಈ ಮಾಯೆಯ ಮತ್ತೊಂದು ಸ್ವರೂಪವನ್ನು ವಿವರಿಸುತ್ತಾ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ, ” ಆಗಾಗ ಈ ಮಾಯೆ ನಮ್ಮ ಮೇಲೆ ಅತೀ ಪ್ರೀತಿಯನ್ನು ತೋರಿ ನಮ್ಮ ದುಃಖಗಳನ್ನು ತೀರಿಸುವಂತೆ ಮಾಡಿ ನಮ್ಮ ಅಭೀಷ್ಟಗಳನ್ನು ತೀರಿಸುತ್ತಾಳೆ. ಆದರೆ ಆ ಸಂತೋಷದಲ್ಲಿ ನಾವೇನಾದರೂ ಮೈ ಮರೆತು ನಡೆದುಕೊಂಡೆವೋ, ತಕ್ಷಣವೇ ನಮ್ಮನ್ನು ಪಾತಾಳಕ್ಕೆ ತಳ್ಳಿ ಬಿಡುತ್ತಾಳೆ. “ಮೂಲತಃ ರಾಕ್ಷಸ ಗುಣವನ್ನು ಹೊಂದಿದವಳಾದರೂ ತಾನು ಸುಂದರ ರೂಪ ಧರಿಸಿ “ಕೃಷ್ಣ”ನಿಗೆ ವಿಷಪೂರಿತ ಹಾಲನ್ನು ಕುಡಿಸಲು ಪ್ರಯತ್ನಿಸಿದ ” ಪೂತನೆ”ಯಂತೆ” ಎಂದು ಬಹಳ ಸುಂದರವಾಗಿ ಒಂದು ಗಹನವಾದ ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ.
148
ಪ್ರಕೃತಿಯಿಂ ಪೊರಗಿರುವ ನರನಾರು ಸೃಷ್ಟಿಯಲಿ? ।
ಸ್ವಕೃತಿಯೆಂದವನೆನುವುದವಳಿರದೊಡಿರದು ॥
ಸುಕೃತವೆನಿಸುವುದವಳ ನೀಂ ವಶಕೆ ಕೊಳುವ ನಯ ।
ವಿಕೃತಿಗೆಡೆಯಾಗದಿರೊ - ಮಂಕುತಿಮ್ಮ ॥ ೧೪೮ ॥
ಈ ಜಗತ್ತಿನ ಪ್ರಕೃತಿಯ ಪ್ರಭಾವದಿಂದ ಹೊರೆಗೆ ಇರುವ ಮನುಷ್ಯ ಯಾರು. ಯಾರಾದರೂ ಇದನ್ನು ನಾನು ಮಾಡಿದ್ದು ಎಂದರೂ ಸಹ ಪ್ರಕೃತಿಯ ಪ್ರಭಾವದಲ್ಲೇ ಮಾಡಿರಬೇಕಲ್ಲವೇ? ಆದರೆ ಪ್ರಕೃತಿಯ ಪ್ರಭಾವದಲ್ಲಿ ಇದ್ದರೂ ಸಂಪೂರ್ಣ ಅದರ ವಶವಾಗದೆ, ತನ್ನ ಪ್ರತಿಭೆಯಿಂದ ಮಾಡುವ ಕೆಲಸವನ್ನು ಒಳ್ಳೆಯಕೆಲಸವೆನ್ನುತ್ತಾರೆ. ಆದರೆ ಕೆಲಸಮಾಡುವಾಗ ಸಂಪೂರ್ಣ ಪ್ರಕೃತಿಯ ಪ್ರವಾಕ್ಕೆ ಒಳಗಾಗಿ, ಕೆಲಸ ಕೆಡಿಸಿಕೊಳ್ಳದೆ ಅಂದರೆ ಅದನ್ನು ವಿಕ್ರುತಗೊಳಿಸದೆ ಕೆಸಲವನ್ನು ಮಾಡೋ ಎಂದು ನಮಗೆ ಒಂದು ಎಚ್ಚರಿಕೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.