Kagga Logo

Nature is eternal cultivation

139

143

139

ಸೃಷ್ಟಿಕಥೆ ಕಟ್ಟುಕಥೆ; ವಿಲಯಕಥೆ ಬರಿಯ ಕಥೆ ।
ಹುಟ್ಟುಸಾವುಗಳೊಂದೆ ಪುರುಳಿನೆರಡು ದಶೆ ॥
ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯೆ ।
ಸತ್ಯ ಜಗದಲಿ ಕಾಣೊ - ಮಂಕುತಿಮ್ಮ ॥ ೧೩೯ ॥

ಸೃಷ್ಟಿ ಎನ್ನುವುದು,  ಲಯ ಎನ್ನುವುದು,  ಹುಟ್ಟು ಸಾವು ಎನ್ನುವುದು ಕೇವಲ ಕಲ್ಪನಾ ಕಥೆಗಳಷ್ಟೇ, ಪ್ರತಿನಿತ್ಯ ಪರಿವರ್ತನೆಯಾಗುವುದೇ ಸತ್ಯ ಈ ಜಗದಲ್ಲಿ. ಅದ್ದನ್ನು ಕಾಣು ಎಂದು ಮಾನ್ಯ ಗುಂಡಪ್ಪನವರು ಒಂದು ಆದೇಶವನ್ನು ನಮಗೆ ಕೊಡುತ್ತಾರೆ ಈ ಕಗ್ಗದಲ್ಲಿ.

140

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ॥
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ - ಮಂಕುತಿಮ್ಮ ॥ ೧೪೦ ॥

ಋತುಗಳ ಚಕ್ರ ತಿರುಗುತ್ತಲೇ ಇರುತ್ತದೆ. ಕಾಲನು ತನ್ನ ಪದಾಘಾತದಲ್ಲಿ ಮೃತರಾಗುವವರ ನೆನೆದು ಮರುಗುತ್ತಾನೆ . ಹಾಗೆ ಮೃತರಾದವರು ಮಣ್ಣಾದ ಮೇಲೆ ಆ ಭೂಮಿಯಮೇಲೆ ಮತ್ತೆ ಹೊಸ ಹುಲ್ಲು ಹುಟ್ಟುತ್ತದೆ..ಈ ಧರೆ ಮತ್ತೆ ಮತ್ತೆ ಗರ್ಭ ಧರಿಸಿ ಹೊಸ ಹೊಸ ಪಲ್ಲವಗಳಿಗೆ ಎಡೆಮಾಡಿ ಕೊಡುತ್ತಾಳೆ, ಮತ್ತೆ ಮತ್ತೆ ಹೊಸ ಜೀವ ಉದಯಿಸುವುದು. ನಿರಂತರವಾಗಿ ನಡೆಯುವ ಕೃಷಿಯೇ ಈ ಪ್ರಕೃತಿ ಎಂದು ಒಂದು ಸುಂದರ ವಿಷಯವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.

141

ಹಳೆ ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು ।
ಹಳೆ ಹಿಮಾಚಲ ಗಂಗೆ ಹಳೆ ವಂಶಚರಿತೆ ॥
ಹಳೆಯವಿವು ನೀನದರೊಳಾವುದನು ಕಳೆದೀಯೊ? ।
ಹಳದು ಹೊಸತರೊಳಿರದೆ? - ಮಂಕುತಿಮ್ಮ ॥ ೧೪೧ ॥

ನಾವು ನೋಡುವ ಸೂರ್ಯ, ಚಂದ್ರ ಈ ಭೂಮಿ ನಮ್ಮ ದೇಶದ ಹೆಮ್ಮೆಯ ಹಿಮಾಲಯ ಹಿಂದೆ ಆಗಿಹೋದ ವಂಶಗಳ ಚರಿತ್ರೆ ಎಲ್ಲವೂ ಹಳೆಯದೇ ಅಲ್ಲವೇ? ಅವರಲ್ಲಿ ನೀನು ಯಾವುದನ್ನು ತೆಗೆದು ಹಾಕಬೇಕು ಅಥವಾ ಅಳಿಸಿಹಾಕಬೇಕು ಎಂದುಕೊಂಡಿದ್ದೀಯೇ? ಹಳತು ಹೊಸತರಲ್ಲಿ ಇರಲು ಸಾಧ್ಯವಿಲ್ಲವೇ? ಎಂದು ಒಂದು ವಿಷಯವನ್ನು ಪ್ರಶ್ನಾರೂಪದಲ್ಲಿ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.

142

ಮೂಲವಸ್ತುವದೊಂದು ಲೀಲೆಗೋಸುಗ ನೂರು ।
ಕಾಲದೃಷ್ಟಿಗೆ ಬಹುಳ ಕೇವಲದೊಳೇಕ ॥
ಸ್ಥೂಲವಿವಿಧದಿ ಬಾಳಿ ಸೂಕ್ಷ್ಮಸಾಮ್ಯವ ತಾಳಿ ।
ಆಳುತಿರು ಜೀವನವ - ಮಂಕುತಿಮ್ಮ ॥ ೧೪೨ ॥

ಇಡೀ ಜಗತ್ತಿನ ಮೂಲ ವಸ್ತುವು ಒಂದೇ. ಆ ಪರಮಾತ್ಮ ತನ್ನ ಲೀಲಾ ವಿನೋದಕಾಗಿ ತನ್ನನ್ನೇ ತಾನು ಹಲವಾಗಿಸಿಕೊಂಡಿದ್ದಾನೆ. ಕಾಲದ ನೋಟಕ್ಕೆ ಬಹಳವಾಗಿ ಕಂಡರೂ ಅದು ಕೇವಲ ಒಂದೇ. ಸ್ಥೂಲವಾಗಿ ನೋಡಿದಾಗ ಹಲವಾಗಿ ಬಾಳಿದರೂ ಸೂಕ್ಷ್ಮ ರೂಪದಿ ನೋಡಿದಾಗ ಜಗತ್ತಿನ ಎಲ್ಲ ವಸ್ತುಗಳಲ್ಲೂ ಸಾಮ್ಯತೆಯನ್ನು ತೋರುತ್ತಾ ಆ ಆತ್ಮನೇ ಆಳುತ್ತಿದ್ದಾನೆ, ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. 

143

ಧಾತ್ರಿಯನು ಮದುವೆಮಂಟಪದವೊಲು ಸಿಂಗರಿಸಿ ।
ಕ್ಷಾತ್ರದಗ್ನಿಗಳ ನರಹೃದಯಗಳೊಳಿರಿಸಿ ॥
ಕೃತ್ರಿಮವನೆಡೆಬಿಡದೆ ನೆಡಸಿ ನಗುವ ವಿಲಾಸಿ ।
ಚಿತ್ರಕಾರಿಯೊ ಮಾಯೆ - ಮಂಕುತಿಮ್ಮ ॥ ೧೪೩ ॥

ಈ ಧರಣಿಯನ್ನು ಮನುಷ್ಯನ ಕಣ್ಣಿಗೆ ಸುಂದರವಾಗಿ ಕಾಣುವಂತೆ, ಮದುವೆ ಮಂಟಪದಂತೆ ಸಿಂಗರಿಸಿ, ಇದರೊಳಗೆ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಬೇಕಾದ ಆಸ್ಥೆ ಮತ್ತು ಆಸೆಯನ್ನು ಅವನ ಹೃದಯದಲ್ಲಿ ತುಂಬಿ ಸತ್ಯವನ್ನು ಮರೆಸಿ ಕೇವಲ ಅಸಹಜತೆಯನ್ನು ಮೆರೆಯುವಂತೆ ಮಾಡಿರುವ ಮತ್ತು ನೋಡಿ ನಗುತ್ತಿರುವ “ಮಾಯೆ” ಒಂದು ಸುಂದರ ಚಿತ್ರಕಾರಿಯೋ ಎಂದು ಒಂದು ಗಹನವಾದ ವಿಷಯವನ್ನು ಪ್ರಸ್ತಾಪಿಸುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.