Kagga Logo

Center of the universe

134

138

134

ಏಕದಿಂದಲನೇಕ ಮತ್ತನೇಕದಿನೇಕ ।
ವೀ ಕ್ರಮವೆ ವಿಶ್ವದಂಗಾಂಗಸಂಬಂಧ ॥
ಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ ।
ಸಾಕಲ್ಯದರಿವಿರಲಿ - ಮಂಕುತಿಮ್ಮ ॥ ೧೩೪ ॥

ಏಕದಿಂದ ಅನೇಕ ಮತ್ತು ಅನೇಕದಿಂದ ಏಕ. ಇದೆ ಕ್ರಮವೇ ವಿಶ್ವದ ಎಲ್ಲಾ ಅಂಗಗಳ ಸಂಬಂಧ. ಹಾಗಿರುವಾಗ ಲೋಕದಲ್ಲಿ ಜಾತಿಯಲಿ ವ್ಯಕ್ತಿಯಲಿ ಮತ್ತು ಈ ಜಗತ್ತಿನ ಎಲ್ಲ ಸಂಸ್ಥೆಗಳಲ್ಲಿ ಸಕಲದಲ್ಲೂ, ಈ ಒಂದು ವಿಧಿ, ಕ್ರಮ ಅಥವಾ ವ್ಯವಸ್ಥೆ ಇರಬೇಕು ಎಂದು ಮಾನ್ಯ ಗುಂಡಪ್ಪನವರು ಆದೇಶಿಸುತ್ತಿದ್ದಾರೆ, ಈ ಕಗ್ಗದಲ್ಲಿ.

135

ಸಂಪೂರ್ಣಗೋಳದಲಿ ನೆನೆದೆಡೆಯೆ ಕೇಂದ್ರವಲ ।
ಕಂಪಿಸುವ ಕೇಂದ್ರ ನೀಂ ಬ್ರಹ್ಮಕಂದುಕದಿ ॥
ಶಂಪಾತರಂಗವದರೊಳು ತುಂಬಿ ಪರಿಯುತಿದೆ ।
ದಂಭೋಳಿ ನೀನಾಗು - ಮಂಕುತಿಮ್ಮ ॥ ೧೩೫ ॥

ಈ ಭೂಮಿಯಲ್ಲಿ ಪ್ರತಿಯೊಂದು ಕಣ ಕಣವೂ ಮಿಂಚಿನ ತರಂಗಗಳ ಕೇಂದ್ರ ಬಿಂದುವಿನನತೆ. ಬ್ರಹ್ಮ ಸೃಷ್ಟಿಮಾಡಿದ ಈ ಭೂಮಂಡಲದಲ್ಲಿ ನೀನೂ ಸಹ ಒಂದು ಕೇಂದ್ರ ಬಿಂದು. ನಿನ್ನಲ್ಲೂ ಮಿಂಚಿನ ತರಂಗಗಳು ಹರಿಯುತ್ತಿವೆ. ಹೀಗೆ ಹರಿಯುವ ಎಲ್ಲ ತರಂಗಗಳನ್ನೂ ಒಟ್ಟುಮಾಡಿ ನಿನ್ನ ಬುಧ್ದಿಯನ್ನು ವಜ್ರಾಯುಧವನ್ನಾಗಿಸಿಕೊಂಡು ಸಾಧನೆಯನ್ನು ಮಾಡು ಎಂದು ವಾಚಕರೆಗೆ ಒಂದು ಸೂಚನೆಯನ್ನು ನೀಡಿದ್ದಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.

136

ವಿಶ್ವಪರಿಧಿಯದೆಲ್ಲೊ ಸೂರ್ಯಚಂದ್ರರಿನಾಚೆ ।
ವಿಶ್ವಕೇಂದ್ರವು ನೀನೆ, ನೀನೆಣಿಸಿದೆಡೆಯೆ ॥
ನಿಃಶ್ವಸಿತ ಸಂಬಂಧ ನಿನಗಂ ದಿಗಂತಕಂ ।
ಪುಷ್ಪವಾಗಿರು ನೀನು - ಮಂಕುತಿಮ್ಮ ॥ ೧೩೬ ॥

ನೀನು ಒಂದು ಕೇಂದ್ರ ಬಿಂದು. ಇಡೀ ವಿಶ್ವದ ಪರಿಧಿಯಲ್ಲಿ, ಸೂರ್ಯ ಚಂದ್ರರಿಗೂ ಆಚೆ ನೀನು ಎಲ್ಲಿ ನಿಂತರೆ ಅಲ್ಲಿ ನೀನು ಒಂದು ಬಿಂದುವಾಗಿರುವೆ. ನಿನಗೂ ದಿಗಂತಕ್ಕೂ ನಿನ್ನ ಉಸಿರಾಟದ ಸಂಬಂಧವಿದೆ. ಹಾಗಾಗಿ ನೀನು ನಿನ್ನ ಶಕ್ತಿಯ ಸುಗಂಧವನ್ನು ಎಲ್ಲೆಡೆ ಹರಡು ಎಂದು ಒಂದು ಆದೇಶವನ್ನು ಕೊಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

137

ನಾನೆನುವವನೆ ವಿಶ್ವಚಕ್ರನಾಭಿಯವಂಗೆ ।
ಕಾಣಬಹ ದಿಗ್ವಲಯ ಚಕ್ರನೇಮಿಪಥ ॥
ಅನಂತ್ಯವೀ ಜಗಚ್ಚಕ್ರನಾಭಿಕ್ರಮತೆ ।
ತಾನೊಂದೆ ಸತ್ತ್ವವದು - ಮಂಕುತಿಮ್ಮ ॥ ೧೩೭ ॥

ನಾನು ಎಂದು ಯಾರಾದರೂ ಅಂದರೆ ಅವನು ಅವನ ಮಟ್ಟಿಗೆ ಅವನ ಒಂದು ಜಗಚ್ಚಕ್ರಕ್ಕೆ ನಾಭಿಯಂತಾಗುತ್ತಾನೆ. ಅವನು ನೋಡುತ್ತಿರುವುದು ಜಗತ್ತಿನ ಚಕ್ರದ ಅನಂತ ಉರುಳಾಟ. ಅದೊಂದೇ ಜೀವನದ ತಿರುಳು ಸತ್ವ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

138

ಬಾನಾಚೆಯಿಂ ವಿಶ್ವಸತ್ತ್ವ ತಾನಿಳಿದಿಳಿಗೆ ।
ನಾನೆನುವ ಚೇತನದಿ ರೂಪಗೊಂಡಿಹುದೊ? ॥
ನಾನೆನುವ ಕೇಂದ್ರದಿನೆ ಹೊರಟ ಸತ್ತ್ವದ ಪರಿಧಿ ।
ಬಾನಾಚೆ ಹಬ್ಬಿಹುದೊ? - ಮಂಕುತಿಮ್ಮ ॥ ೧೩೮ ॥

ಆಕಾಶದಾಚೆ ಅಂದರೆ ನಮಗಿಂತ ಬಹಳದೂರದಿ ಇರುವ ವಿಶ್ವ ಸತ್ವವು ತಾನು ಈ ಭೂಮಿಗೆ ಇಳಿದು ” ನಾನು” ಎನ್ನುವ ಚೇತನದ ರೂಪ ತಳೆದಿದೆಯೋ ಅಥವಾ ” ನಾನು” ಎನ್ನುವ ಒಂದು ಬಿಂದುವಿನಿಂದ ಹೊರಟ ಸತ್ವವು ಆಕಾಶದಾಚೆ ಹಬ್ಬಿಹುದೋ ಎಂದು ಒಂದು ಜಿಜ್ಞಾಸಾ ಭರಿತ ಉದ್ಗಾರವನ್ನು ಎತ್ತುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.