Kagga Logo

Forever ancient, forever new

129

133

129

ಧರೆಯ ನೀರ್ಗಾಗಸದ ನೀರಿಳಿದು ಬೆರವಂತೆ ।
ನರನ ಪ್ರಾಕ್ತನಕೆ ನೂತನಸತ್ತ್ವ ಬೆರೆತು ॥
ಪರಿವುದೀ ವಿಶ್ವಜೀವನಲಹರಿಯನವರತ ।
ಚಿರಪ್ರತ್ನನೂತ್ನ ಜಗ - ಮಂಕುತಿಮ್ಮ ॥ ೧೨೯ ॥

ಭೂಮಿಯ ನೀರಿಗೆ ಆಗಸದ ಮಳೆಯ ನೀರು ಇಳಿದು ಬೆರಯುವಂತೆ, ಮನುಷ್ಯನ ಪುರಾತನತೆಗೆ ನೂತನತ್ವ ಬೆರೆತು ನಿರಂತರವಾಗಿ ಹರಿಯುವುದು ಈ ಜೀವನ ಲಹರಿ, ಹಾಗಾಗಿ ಹಳತು ಮತ್ತು ಹೊಸತದರ ನಿರಂತರ ಸಮ್ಮಿಲನವೇ ಈ ಜಗತ್ತು ಎಂದು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ ಈ ಕಗ್ಗದಲ್ಲಿ.

130

ರಾಮನಡಿಯಿಟ್ಟ ನೆಲ,ಭೀಮನುಸಿರಿದ ಗಾಳಿ ।
ವ್ಯೋಮದೆ ಭಗೀರಥಂ ತಂದ ಸುರತಟಿನಿ ॥
ಸೋಮನಂ ಪೆತ್ತ ಕಡಲೀ ಪುರಾತನಗಳಿರೆ ।
ನಾಮೆಂತು ಹೊಸಬರೆಲೊ - ಮಂಕುತಿಮ್ಮ ॥ ೧೩೦ ॥

ರಾಮನು ನಡೆದಾಡಿದ ನೆಲ, ಭೀಮನು ಉಸಿರಾಡಿದ ಈ ಭೂಮಿ, ದಿವಿಯಿಂದ ಭಗೀರಥ ಈ ಭೂಮಿಗೆ ತಂದ ಆಕಾಶ ಗಂಗೆ, ಸಮುದ್ರ ಮಂಥನದಲ್ಲಿ ಕ್ಷೀರಸಾಗರದಲ್ಲಿ ಹುಟ್ಟಿದ ಆ ಚಂದ್ರ ಇವೆಲ್ಲವೂ ಪುರಾತನವೇ ಆಗಿರಲು, ನಾವು ಹೇಗೆ ಈ ಭೂಮಿಯಲ್ಲಿ ಹೊಸಬರಾಗುತ್ತೇವೆ ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.

131

ಪುಲಿ ಸಿಂಗದುಚ್ಛ್ವಾಸ,ಹಸು ಹುಲ್ಲೆ ಹಯದುಸಿರು ।
ಹುಳು ಹಾವಿಲಿಯ ಸುಯ್ಲು, ಹಕ್ಕಿ ಹದ್ದುಯ್ಲು ॥
ಕಲೆತಿರ್ಪುವೀಯೆಲ್ಲ ನಾಮುಸಿರ್ವೆಲರಿನಲಿ ।
ಕಲಬರಿಕೆ ಜಗದುಸಿರು - ಮಂಕುತಿಮ್ಮ ॥ ೧೩೧ ॥

ಹುಲಿ, ಸಿಂಹ, ಹಸು, ಜಿಂಕೆ, ಕುದುರೆ, ಹುಳು, ಹಾವು, ಇಲಿ , ಹಕ್ಕಿ, ಹದ್ದು ಈ ಎಲ್ಲ ಪ್ರಾಣಿ ಪಕ್ಷಿಗಳು ಉಸಿರಾಡುವ ಗಾಳಿಯೇ ನಾವು ಉಸಿರಾಡುವ ಗಾಳಿಯಲ್ಲಿ ಕಳೆತುಹೋಗಿದೆ. ಹಾಗಾಗಿ ಈ ಜಗತ್ತಿನ ಉಸಿರು ಕಲಬೆರಕೆ ಉಸಿರು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

132

ರಾಮನುಚ್ಛ್ವಾಸವಲೆದಿರದೆ ರಾವಣನೆಡೆಗೆ? ।
ರಾಮನುಂ ದಶಕಂಠನೆಲರನುಸಿರಿರನೆ? ॥
ರಾಮರಾವಣರುಸಿರ್ಗಳಿಂದು ನಮ್ಮೊಳಗಿರವೆ? ।
ಭೂಮಿಯಲಿ ಪೊಸತೇನೊ? - ಮಂಕುತಿಮ್ಮ ॥ ೧೩೨ ॥

ರಾಮನು ಉಸಿರಾಡಿದ ಉಸಿರ ರಾವಣ ಉಸಿರಾಡಲಿಲ್ಲವೇ? ಹಾಗೆಯೇ ರಾಮನೂ ಸಹ ರಾವಣನ ಉಸಿರ ಉಸಿರಾಡಿರಬಹುದಲ್ಲವೇ. ಅಂದು ಬೀಸಿದ ಪವನನು ಇಂದೂ ಇರುವುದರಿಂದ ಅಂದು ರಾಮ ರಾವಣರು ಉಸಿರಾಡಿದ ಉಸಿರು ನಮ್ಮೊಳಗೂ ಇರುವಾಗ ಈ ಭೂಮಿಯಲಿ ಹೊಸತು ಯಾವುದು ಎಂದು ಒಂದು ಪ್ರಶ್ನೆ ಎತ್ತುತ್ತಾರೆ ಮಾನ್ಯ ಗುಂಡಪ್ಪನವರು.

133

ಬಹಿರಂತರಗಳೊಂದು ಭೂತಭವ್ಯಗಳೊಂದು ।
ಇಹಪರಂಗಳುಮೊಂದು ಚೈತನ್ಯವೊಂದು ॥
ಬಹುಪಾತ್ರನಾಟಕದಿ ಮಾಯೆ ಶತವೇಷಗಳ ।
ವಹಿಸಲೀವಳು ಪತಿಗೆ - ಮಂಕುತಿಮ್ಮ ॥ ೧೩೩ ॥

ಒಳಗೂ ಹೊರಗುಗಳು ಒಂದೇ. ಭೂತ ಭವಿತವ್ಯಗಳು ಒಂದೇ. ಇಹ ಪರಗಳು ಒಂದೇ ಏಕೆಂದರೆ ಇವೆಲ್ಲವೂ ಆಗಿರುವುದು , ಆಗುತ್ತಿರುವುದು ಎಲ್ಲವೂ ಒಂದೇ ಚೈತನ್ಯದಿಂದ. ಆದರೆ ಈ ಜಗತ್ತನ್ನು ಆವರಿಸಿರುವ ಮಾಯೆಯೆಂಬ ಮಾಯಾಂಗನೆ ಆ ಚೈತನ್ಯಕ್ಕ್ಕೆ ಹಲವಾರು ರೂಪಗಳನ್ನು ವಹಿಸಲು ಕೊಡುತ್ತಾಳೆ, ಎಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.