Kagga Logo

Being, Awareness, Bliss

122-128

122

ಜನಿಸಿದುದು ಮೃತಿಯನೆಳಸದೆ ಕುಲವ ಬೆಳಸುವುದು ।
ಒಣಗಿದಂತಿರುವ ತೃಣಮೂಲ ಮೊಳೆಯುವುದು ॥
ಮನುಜರಳಿವರು ಮನುಜಸಂತಾನ ನಿಂತಿಹುದು ।
ಅಣಗದಾತ್ಮದ ಸತ್ತ್ವ — ಮಂಕುತಿಮ್ಮ ॥

ಹುಟ್ಟಿದವರು ಯಾರೂ ಕೂಡಲೇ ಸಾಯಲು ಇಚ್ಚಿಸುವುದಿಲ್ಲ. ತಮ್ಮ ಕುಲವನ್ನು ಬೆಳೆಸಲು ಇಚ್ಚಿಸುತ್ತಾರೆ. ನೋಡಲು ಒಣಗಿದಂತೆ ಇದ್ದರೂ ಮಳೆಯಾದಾಗ, ಹೇಗೆ, ಮತ್ತೆ ತನ್ನ ಒಡಲಿಂದ ಜೀವಂತವಾಗಿ ಚಿಗುರು ಹಸಿರೊಡೆದು ನಲಿಯುವ ಹಸಿರು ಹುಲ್ಲಂತೆ, ಮನುಷ್ಯರು ಸತ್ತರೂ ಅವರ ಸಂತಾನ ಈ ಭೂಮಿಯಲ್ಲಿ ನಿಂತಿಹುದು. ಆತ್ಮದ ಸತ್ವ ಈ ಜಗತ್ತಿನಲ್ಲಿ ಎಂದಿಗೂ ಕಡಿಮೆಯಾಗದು ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡುತ್ತಾರೆ.

Those who are born desire not death. They expand their family line. The dry-looking grass sprouts roots. Humans die but their children stay. The essence of the Self never vanishes.

123

ಬನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು ।
ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ॥
ಸನ್ನಹಿಸುವಂ ಸುಮ್ಮನಿರಲೊಲದೆ ಮಾನವನು ।
ಚಿನ್ಮಯತೆಯಾತ್ಮಗುಣ — ಮಂಕುತಿಮ್ಮ ॥

ಮನುಷ್ಯ ಎಷ್ಟೊಂದು ಕಷ್ಟ ಅನುಭವಿಸಿದರೂ, ಸೋಲನ್ನು ಅನುಭವಿಸಿದರೂ, ತೊಂದರೆಗಳನ್ನು ಎದುರಿಸದರೂ, ಮತ್ತೆ ಮತ್ತೆ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾನೆ, ಹೊಸ ಹೊಸ ಸಾಹಸಗಳನ್ನು ಮಾಡುತ್ತಲೇ ಇರುತ್ತಾನೆ. ಸುಮ್ಮನಿರಲಾಗದಿರುವುದು ಮನುಷ್ಯನಲ್ಲಿರುವ ಜ್ಞಾನಸ್ವಾರೂಪವಾದ ಆತ್ಮದ ಗುಣವೆಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪ ಮಾಡುತ್ತಾರೆ.

In spite of adversities and troubles humans continue to seek out new adventures without staying quiet for even a moment. Relentless aliveness is our basic quality.

124

ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ ।
ಮಾನವಂ ಪ್ರಣಯದೊಳೊ ವೀರ ವಿಜಯದೊಳೋ ॥
ಎನೊ ಎಂತೋ ಸಮಾಧಾನಗಳನರಸುತಿಹ ।
ನಾನಂದವಾತ್ಮಗುಣ — ಮಂಕುತಿಮ್ಮ ॥

ನಾವು ಸದಾ ಕಾಲ ಮೌನವಾಗಿಯೋ, ಮಾತನಾಡುತ್ತಲೋ, ಹಾಸ್ಯವಾಡುತ್ತಲೋ, ಹಾಡುತ್ತಲೋ, ಕೋಪಗೊಳ್ಳುತ್ತಲೋ, ಪ್ರಣಯದಲ್ಲೋ, ವೀರತ್ವದಲ್ಲೋ ಅಥವಾ ಗೆಲುವಿನ ಸಂಭ್ರಮದಲೋ ಯಾವುದಾದರೂ ವಿಧದಿಂದ ಸಮಾಧಾನ ಸಂತೋಷಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ. ನಮ್ಮನ್ನು ಸದಾ ಕಾಲ ಸಕ್ರಿಯವಾಗಿಸಿರುವ ಆ ಪರಮ ಚೇತನವು ನಮ್ಮ ಮೂಲಕ ಈ ಎಲ್ಲ ಭಾವಗಳನ್ನೂ ಅನುಭವಿಸುತ್ತಾ ಇರುವುದೇ ಆತ್ಮನ ನಿಜವಾದ ಗುಣ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

In silence, in words, in humor, in song, in love, in valor, in victory, somehow or the other —humans are always in search of peace. Bliss is our basic quality.

125

ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ ।
ಬಚ್ಚಿಡುವುದದನು ಜೀವಿತೆಯ ಮಾಯಿಕತೆ ॥
ಇಕ್ಷುವೊಲ್ ಜೀವ; ಗಾಣದವೊಲ್ ಜಗನ್ಮಾಯೆ ।
ನಿಚ್ಚವಿಳೆಯಾಲೆಮನೆ — ಮಂಕುತಿಮ್ಮ ॥

ಆತ್ಮದ ಗುಣ ಸಚ್ಚಿದಾನಂದ. ಆದರೆ ಈ ಇಂದ್ರಿಯ ಸಂಪರ್ಕದಿಂದ ಉಂಟಾದ ನಮ್ಮ ಬದುಕಿನ ಮಾಯೆ ಅದನ್ನು ಮುಚ್ಚಿಡುವುದು. ಜೀವ, ರಸ ತುಂಬಿದ ಕಬ್ಬಿಣ ಜಲ್ಲೆ ಇದ್ದಂತೆ. ಈ ಜಗತ್ತಿನ ಮಾಯೆ ಗಾಣದ ರೀತಿ. ಹೀಗೆ ಶುದ್ಧರಸ ತುಂಬಿದ ಆತ್ಮವನ್ನು ಮಾಯೆಯಂಬ ಗಾಣದಲ್ಲಿ ಇರುಕಿಸಿ ಹಿಂಡಿ ಹಿಂಡಿ ನಿತ್ಯ ನಡೆಯುವ ಈ ಜಗತ್ತಿನ ಆಲೆಯಮನೆಯಲ್ಲಿ ಪಾಕ ತೆಗೆಯುವುದೇ ಜೀವನ ಎನ್ನುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Being, awareness, and bliss are the natural flavors of the self. The maya of life hides it. Life is like a sugarcane. Maya of life is like a grinder. The world is the place where cane juice is made into sugar.

126

ಒಳಿತೆಂದು ಸೊಗಸೆಂದು ಜಗವು ಮೆಚ್ಚುವುದೆಲ್ಲ ।
ಕಲೆ ಕಣಂಗಳು ಮಾತ್ರ ಪೂರ್ಣಂಗಳಲ್ಲ ॥
ನಲಿವು ಚೆಲುವುಗಳ ಪರಿಪೂರ್ಣ ಮೂಲಾಕೃತಿಯೆ ।
ಪರಬೊಮ್ಮನೆನ್ನುವರು — ಮಂಕುತಿಮ್ಮ ॥

ಈ ಜಗತ್ತಿನಲ್ಲಿ ನಾವು ” ಇದು ಒಳ್ಳೆಯದು” ” ಇದು ಸೊಗಸು” ಎಂದು ಮೆಚ್ಚುವುದೆಲ್ಲ ಆ ಪರಮಾತ್ಮನ ಸಂಪೂರ್ಣ ರೂಪವಲ್ಲ, ಕೇವಲ ಪಾರ್ಶ್ವರೂಪ. ನಲಿವು ಚೆಲುವುಗಳ ಪರಿಪೂರ್ಣ ರೂಪವೇ ಆ ಪರಮಾತ್ಮ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

What the world appreciates as nice and beautiful is only a portion of the art. It is not complete. The source of the entirety of niceness and beauty is what we call brahman.

127

ಶಿವಸೌಖ್ಯಸೌಂದರ್ಯಗಳ ಪೂರ್ಣರವಿ ಬೊಮ್ಮ ।
ಭುವನಜೀವನಜಲಧಿಯೂರ್ಮಿಕೋಟಿಯಲಿ ॥
ಛವಿಕೋಟಿಯೆರಚಲ್ ಪ್ರತಿಚ್ಛಾಯೆ ವಿಲಸಿಪುದು ।
ಸವಿ ನಮ್ಮದದರ ಕಣ — ಮಂಕುತಿಮ್ಮ ॥

ಶುಭ ಸಂತೋಷ ಸೌಂದರ್ಯಗಳ ಪೂರ್ಣರೂಪವೇ ಆ ಪರಮಾತ್ಮ. ಈ ಜಗತ್ತಿನ ಜೀವನವೆಂಬ ಸಮುದ್ರದಲ್ಲಿರುವ ಕೋಟ್ಯಾನುಕೋಟಿ ಜೀವಬಿಂದುಗಳಲ್ಲಿ, ಆ ಪರಮ ಕಾಂತಿಯ ಛಾಯೆ ಕಾಣುವುದು ಅಥವಾ ವಿಲಾಸಿಸುವುದು. ನಾವೂ ಸಹ ಆ ಛಾಯೆಯ ಒಂದು ಕಣ ಮಾತ್ರವೆಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

Brahman is the sum of goodness, well-being, and beauty. Millions of waves arise in the ocean of worldly life. Millions of rays are scattered and their reflections glitter. What we enjoy is just a speck of it.

128

ಹೊರಗಾವುದೊಳಗಾವುದೀ ಸೃಷ್ಟಿಚಕ್ರದಲಿ ।
ಎರಡನೊಂದಾಗಿಪುದು ಹರಿವ ನಮ್ಮುಸಿರು ॥
ಇರುವುದುಳಿದಿನಿತು ಹೊರಗಾಳಿ ಯೋಗಿಗಳೊಳಂ ।
ಬರಿ ಸುಷಿರಪಿಂಡ ಜಗ — ಮಂಕುತಿಮ್ಮ ॥

ಈ ಸೃಷ್ಟಿಯಲಿ ಹೊರಗೆ ಯಾವುದು, ಒಳಗೆ ಯಾವುದು ? ಹೊರ ಒಳಗನ್ನು ಒಂದೇ ಆಗಿಪುದು ಹರಿವ ನಮ್ಮುಸಿರು. ಯೋಗಿಗಳು ಮಾತ್ರ ತಮ್ಮ ಸಾಧನೆಯಿಂದ ಉಸಿರುಬಿಗಿ ಹಿಡಿದು ಬಿಟ್ಟ ಉಸಿರನ್ನು ತಡೆಯಬಹುದು. ಆದರೆ ಈ ಜಗವೆಲ್ಲ ಒಂದು ಕೊಳಲುಗಳ ಸಮೂಹ ಎಂದು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.

What is inside and what is outside this wheel of creation? The air we breathe unites these two. Even in a sage, a little of the outside air remains. The world is merely a hollow ball.