Kagga Logo

Machinery of earth and sky

119

121

119

ನಾವುಣ್ಣುವನ್ನಗಳು ನಾವು ಕುಡಿವುದಕಗಳು ।
ನಾವುಸಿರುವೆಲರುಗಳು ನಾವುಡುವ ವಸ್ತ್ರ ॥
ಭೂವ್ಯೋಮಗಳ ಯಂತ್ರ ಸಂಘದುತ್ಪನ್ನಗಳು ।
ಜೀವವೆರಡರ ಶಿಶುವು - ಮಂಕುತಿಮ್ಮ ॥ ೧೧೯ ॥

ನಾವು ತಿನ್ನುವ ಆನ್ನ, ನಾವು ಕುಡಿಯುವ ನೀರು ನಾವು ಉಸಿರಾಡುವ ಗಾಳಿ ನಾವು ಉಡುವ ಬಟ್ಟೆ ಎಲ್ಲವೂ ಆಕಾಶ ಮತ್ತು ಭೂಮಿಯ ಪರಸ್ಪರ ಸಮ್ಮಿಲನದಿಂದ ತಯಾರಿಸಲ್ಪಡುವ ಉತ್ಪನ್ನಗಳು. ನಮ್ಮಲ್ಲಿ ಇರುವ ಚೇತನವೂ ಸಹ ಈ ಭೂಮಿ ಮತ್ತು ಆಕಾಶಗಳ ಶಿಶುವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

120

ಪಾಕ ನಿನ್ನೊಳದೊಂದು ಸಾಗುತಿಹುದೆಡೆಬಿಡದೆ ।
ಲೋಕದೆಲ್ಲವು ಸೂಕ್ಷ್ಮಗತಿಯಿನೊಳವೊಕ್ಕು ॥
ಸಾಕುಬೇಕುಗಳೆಲ್ಲವದರಿನಾ ಯಂತ್ರವನು ।
ಏಕೆ ರಚಿಸಿದನೊ ವಿಧಿ! - ಮಂಕುತಿಮ್ಮ ॥ ೧೨೦ ॥

ಒಂದು ಪಾಕ ಸಿದ್ಧವಾಗುವ ರೀತಿಯಲ್ಲಿ ಮನಸ್ಸು ಬುದ್ಧಿಗಳು ದೇಹದೊಡನೆ ಸೇರಿ ನಿನ್ನೊಳು ಸೂಕ್ಷ್ಮಗತಿಯಲ್ಲಿ ಈ ಜಗದ್ವ್ಯಾಪಾರವೇ ನಡೆಯುತ್ತಿದೆ. ಕೆಲವನ್ನು ಬೇಕೆನ್ನುವ ಕೆಲವನ್ನು ಸಾಕೆನ್ನುವ. ಇಂದು ಬೇಡವೆಂದದ್ದನ್ನು ನಾಳೆ ಬೇಕೆನ್ನುವ ಎಂದೋ ಇಷ್ಟಪಟ್ಟದ್ದನ್ನು ಇಂದು ಅಸಹ್ಯಿಸಿಕೊಳ್ಳುವ , ಈ ಮನುಷ್ಯದೇಹದ ಯಂತ್ರವನ್ನು ಹೀಗೇಕೆ ರಚಿಸಿದನೋ ವಿಧಿ ಎಂದು ಒಂದು ಪ್ರಶ್ನೆಯನ್ನು ಹಾಕುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

121

ತನುವೇನು? ಮನವೇನು? ಪರಮಾಣು ಸಂಧಾನ ।
ಕುಣಿಸುತಿಹುದುಭಯವನು ಮೂರನೆಯದೊಂದು ॥
ತೃಣದ ಹಸಿರಿನ ಹುಟ್ಟು ತಾರೆಯೆಸಕದ ಗುಟ್ಟು ।
ದಣಿಯದದನರನು ನೀಂ - ಮಂಕುತಿಮ್ಮ ॥ ೧೨೧ ॥

ದೇಹವೇನು ಮನಸ್ಸೇನು, ಎರಡೂ ಸಹ ಪರಮಾಣುಗಳ ಅನುಸಂದಾನದಿಂದ ಕಾರ್ಯಪ್ರವೃತ್ತವಾಗಿವೆ. ಆದರೆ ಇವರೆಡನ್ನೂ ಸಂಧಿ ಮಾಡಿ ಆಡಿಸುತಿರುವುದು ಆ ಮೂರನೆಯ ಪರಮ ಶಕ್ತಿ. ಹುಲ್ಲಿನ ಹಸಿರಿಗೂ, ತಾರೆಯ ಮಿನುಗುವಿಕೆಗೂ ಕಾರಣವೇನೆಂಬುದನ್ನು ನೀ ಹುಡುಕು ಎಂದು ಒಂದು ಆದೇಶವನ್ನು ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ ಕೊಟ್ಟಿದಾರೆ.