Scientist
114
—
118
114
ಸೃಷ್ಟಿರೂಪಂಗಳವತಾರದೊಳ್ ಕ್ರಮಲಕ್ಷ್ಯ ।
ಪುಷ್ಟವಾಗಿರ್ದೊಡೇನಿಲ್ಲದೊಡದೇನು? ॥
ಶಿಷ್ಟಮಾದುದು ಸತ್ತ್ವವದನು ಸೋಕದು ರೂಪ ।
ದೃಷ್ಟಿ ಸತ್ತ್ವದೊಳಿರಲಿ - ಮಂಕುತಿಮ್ಮ ॥ ೧೧೪ ॥
ಈ ಜಗತ್ತಿನ ಸೃಷ್ಟಿಯಲ್ಲಿ ಎಲ್ಲವೂ ಆ ಪರಮಾತ್ಮನ ಅವತಾರವೆಂದು ನಾವು ನಂಬಿದ್ದೇವೆ. ಆದರೆ ಇಡೀ ಸೃಷ್ಟಿಯಲ್ಲಿ ಒಂದು ಕ್ರಮವಿದ್ದರೆಷ್ಟು ಅಥವಾ ಇಲ್ಲದಿದ್ದರೆಷ್ಟು. ಹೊರ ರೂಪ ಶಿಷ್ಟವೋ ಅಲ್ಲವೋ ಆದರೆ ಅಂತರ್ಯದಲ್ಲಿರುವ ಆ ಪರಮಾತ್ಮ ತತ್ವವು ಹೊರರೂಪಗಳಿಗೆ ಅತೀತವಾಗಿ ವಿಕಾರಗೊಳ್ಳುವುದಿಲ್ಲ. ಹಾಗಾಗಿ ನಾವು ನಮ್ಮ ದೃಷ್ಟಿಯನ್ನು ಆ ಪರತತ್ವದಲ್ಲಿ ಕೇಂದ್ರೀಕರಿಸಬೇಕು ಎನ್ನುವುದೇ ಈ ಕಗ್ಗದ ಹೂರಣ.
115
ಕ್ರಮದ ನಭವಿಕೃತಿ ವಾಯ್ವಾದಿ ರೂಪಗಳಂತೆ ।
ಕೃಮಿ ಬೀಜದಿಂ ಮತ್ಸ್ಯ ಮೃಗ ಮನುಜರಂತೆ ॥
ಕ್ರಮ ವಿವರವೇನಿರಲಿ ಸೃಷ್ಟಿಯ ವಿಧಾನದಲಿ ।
ಸಮಸದದು ಸತ್ತ್ವವನು - ಮಂಕುತಿಮ್ಮ ॥ ೧೧೫ ॥
ಪಂಚಭೂತಗಳಿಗೆ ಒಂದು ಕ್ರಮವಿದೆ. ಸೃಷ್ಟಿಗೆ ಒಂದು ಕ್ರಮವಿದೆ ಅದು ಬದಲಾಗುವ ಕ್ರಮ. ಹೊಸ ಹೊಸ ಆವಿಷ್ಕ್ರುತ ರೂಪಗಳಲ್ಲಿ ಅದು ಕಾಣುತ್ತಲೇ ಇರುತ್ತದೆ. ಆಕಾಶ, ಭೂಮಿ ಗಾಳಿ ನೀರು ಇವೆಲ್ಲವೂ ಅವುಗಳದೇ ಆದ ಕ್ರಮದಲ್ಲಿ ಇದ್ದರೂ, ಒಂದೇ ಕ್ರಮವಿಲ್ಲದಂತೆ ಕಾಣುವುದು. ಈ ಜಗತ್ತಿನಲ್ಲಿ ಹುಟ್ಟುವ ಕ್ರಿಮಿಗಳು, ಪ್ರಾಣಿ, ಪಕ್ಷಿ, ಜಲಚರಗಳಿಗೂ ಒಂದೊಂದು ಕ್ರಮವಿದೆ. ಆಕಾರವಿದೆ, ರೂಪಗಳಿವೆ. ಆ ರೂಪಗಳು ಕಾಲಾನುಕಾಲಕ್ಕೆ ಬದಲಾಗುತ್ತಲೇ ಇರುತ್ತವೆ. ಆದರೆ ಈ ಬದಲಾವಣೆಗಳಿಗೆ ಅತೀತವಾಗಿ ಇರುವುದೇ ಆ ಪರಮ ಚೇತನ, ಪರಮಾತ್ಮ ಶಕ್ತಿ ಅಥವಾ ಆತ್ಮವೆನ್ನುತ್ತಾರೆ ಮಾನ್ಯ ಗುಂಡಪ್ಪನವರು.
116
ಪರಮಾಣುಮಿಂ ಪ್ರಪಂಚಗಳ ಸಂಯೋಜಿಪುದು ।
ಮರೆಯಿಂದ ಸೃಷ್ಟಿಯಂತ್ರವ ಚಾಲಿಸುವುದು ॥
ಚರಲೀಲೆಯಲಿ ಜೀವವೆನಿಪ ಚೈತನ್ಯವದು ।
ಪರಸತ್ತ್ವ ಶಕ್ತಿಯಲೊ - ಮಂಕುತಿಮ್ಮ ॥ ೧೧೬ ॥
ಇಡೀ ಜಗತ್ತನ್ನು ಪರಮಾಣುಗಳನ್ನು ಪೋಣಿಸುವ ಕ್ರಿಯೆಯಿಂದ ಈ ಜಗತ್ತಿನ ಎಲ್ಲವನ್ನೂ ಒಂದು ಸೂತ್ರದಲ್ಲಿ ಇರುವಂತೆ ಸೃಷ್ಟಿಸಿ, ಇದನ್ನು ನಡೆಸಲು ಒಂದು ಕ್ರಮವನ್ನು ಉಂಟುಮಾಡಿ , ಅದರ ಚಲನೆಗೆ ತಾನೇ ಕಾರಣವಾಗಿ, ಈ ಜಗತ್ತಿನ ಲೀಲಾವಿನೋದವನ್ನು ನಡೆಸುವ ಜೀವವೆಂದು ಹೆಸರು ಪಡೆದ ಅದೇ ಚೈತನ್ಯ. ಆ ಚೈತನ್ಯವೇ, ಪರಮಾತ್ಮ, ಪರಮ ಶಕ್ತಿ ಮತ್ತು ಪರ ಸತ್ವ ಎನ್ನುತ್ತಾರೆ ಮಾನ್ಯ ಡಿ ವಿ.ಜಿ ಯವರು ಈ ಕಗ್ಗದಲ್ಲಿ.
117
ಸ್ಥಾಪಿತವೆ ಜೀವ ನಿನ್ನೊಡಲಿನೊಂದಂಗದಲಿ? ।
ಆಪಾದಶಿರವುಮದು ತುಂಬಿರುವುದಲ್ತೆ? ॥
ವ್ಯಾಪಿಸಿಹುದಂತೊಂದು ಚೈತನ್ಯ ವಿಶ್ವದಲಿ ।
ಲೇಪಗೊಳ್ಳದ ಸತ್ತ್ವ - ಮಂಕುತಿಮ್ಮ ॥ ೧೧೭ ॥
ಆ ಜೀವವೆನ್ನುವ ಚೈತನ್ಯ ಕೇವಲ ನಿನ್ನ ಯಾವೊದೋ ಒಂದು ಅಂಗದಲ್ಲಿ ತುಂಬಿದೆ ಎಂದು ಕೊಂಡಿದ್ದೀಯಾ? ಅದು ನಿನ್ನ ಅಡಿಯಿಂದ ಮುಡಿಯವರೆಗೆ ಅಂದರೆ ಪಾದದಿಂದ ಶಿರದವರೆಗೆ, ಇಡೀ ದೇಹವನ್ನು ವ್ಯಾಪಿಸಿಕೊಂಡಿದೆ. ಹೇಗೆ ಅದು ನಮ್ಮ ದೇಹದಲ್ಲಿ ವ್ಯಾಪಕವಾಗಿದೆಯೋ ಹಾಗೆಯೇ, ಇಡೀ ವಿಶ್ವದಲ್ಲಿ ಒಂದು ಅಂಗುಲವೂ ಬಿಡದೆ ಎಲ್ಲೆಡೆ ವ್ಯಾಪಿಸಿಕೊಂಡಿದೆ. ಹಾಗೆ ವ್ಯಾಪಿಸಿಕೊಂಡಿದ್ದರೂ, ಎಲ್ಲೂ ಯಾವುದಕ್ಕೂ ಅಂಟದೆ ಇರುವುದೇ ಆ ಚೈತನ್ಯದ ಗುಣ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
118
ರವಿಮಾತ್ರದಿಂದಲ್ಲ ಭುವಿಮಾತ್ರದಿಂದಲ್ಲ ।
ಭುವನಪೋಷಣೆಯುಭಯ ಸಹಕಾರದಿಂದ ॥
ವಿವಿಧ ಶಕ್ತಿರಸಂಗಳೇಕೀಭವಿಸೆ ಜೀವ ।
ಅವಿತರ್ಕ್ಯ ಸೂಕ್ಷ್ಮವದು - ಮಂಕುತಿಮ್ಮ ॥ ೧೧೮ ॥
ಕೇವಲ ಸೂರ್ಯನಿಂದಾಗಲೀ ಅಥವಾ ಕೇವಲ ಪ್ರುತ್ವೀತತ್ವದಿಂದಾಗಲೀ ಈ ಭೂಮಿಯು ಅಸ್ತಿತ್ವದಲ್ಲಿಲ್ಲ. ಈ ಭೂಮಿಯ ಅಸ್ಥಿಸ್ತ್ವಕ್ಕೆ ಈ ಎರಡರ ಸಹಕಾರವೂ ಬೇಕು. ಅಷ್ಟೇ ಅಲ್ಲ ಇವೆರಡರ ಸಹಕಾರದಿಂದ ಈ ಭೂಮಿಯ ಮೇಲ್ಮೈಯಲ್ಲಿ ಮತ್ತು ಅಂತರ್ಯದಲ್ಲಿ ಉತ್ಪತ್ತಿಯಾಗುವ ಹಲವಾರು ಜೀವರಸಗಳ ಸಮ್ಮಿಲನದಿಂದ ಇಲ್ಲಿ ಜೀವಿಗಳ ಜೀವಿಕೆ ಸಾಧ್ಯ. ಆದರೆ ಇದು ಏಕೆ ಹೀಗೆ? ಹಾಗೆ ಯಾಕಿರಬಾರದು? ಇದು ಹೀಗೇ ಏಕಾಗುತ್ತದೆ ಹಾಗೇಕಿರಬಾರದು, ಇದು ಸರಿ, ಅದು ಸರಿಯಿಲ್ಲ ಎನ್ನುವಂತಾ ತರ್ಕ ಕುತರ್ಕಗಳಿಗೆ ಸಿಗದ ಸೂಕ್ಷ್ಮವಿಚಾರವಿದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.