Kagga Logo

Inanimate, animate

109

113

109

ಶಿಲೆಯಾಗಿ ನಿದ್ರಿಸುತ್ತಿರ್ದಾಕೆ ರಾಮಪದ ।
ತಲದ ಸಂಸ್ಪರ್ಶದಿಂದೆದ್ದು ನಿಂತಂತೆ ॥
ಚಲಿಸದೆನಿಸಿದ ಜಡವನಾವ ಗಾಳಿಯೊ ಸೋಕೆ ।
ಬಲ ತೀವಿ ಚಲಿಪುದದು - ಮಂಕುತಿಮ್ಮ ॥ ೧೦೯ ॥

ಶಾಪಗ್ರಸ್ತಳಾಗಿ, ಕಲ್ಲಾಗಿ ನಿದ್ರಿಸುತ್ತಿದ್ದ ಋಷಿಯ ಪತ್ನಿ ಅಹಲ್ಯೆ, ರಾಮನ ಪದ ಸೋಕಿ ಜೀವಂತವಾದಂತೆ, ಇದು ಚಲಿಸದು, ಇದು ಜಡ ಎಂದು ಯಾವುದು ಕರೆಯಲ್ಪಡುತ್ತದೋ ಅದು ಸತ್ವದ, ಚೈತನ್ಯದ, ಜೀವ ಶಕ್ತಿಯ ಸಂಸರ್ಗದಿಂದ, ಶಕ್ತಿಯನ್ನು ಪಡೆದು ಜೀವಂತವಾಗುತ್ತದೆ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

110

ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆಯದೇನು? ।
ಕ್ರಿಮಿಗೆ ಹಸಿವುಂಟಿನಿತು ಬೆದಕಾಟವುಂಟು ॥
ಅಮಿತ ಸಂತತಿಯುಂಟು ಹಿಮಗಿರಿಯ ಸಮಯುಗದ ।
ಕ್ರಿಮಿಪಂಕ್ತಿ ಕಿರಿದಹುದೆ? - ಮಂಕುತಿಮ್ಮ ॥ ೧೧೦ ॥

ಹಿಮಾಲಯ ಪರ್ವತವನ್ನು ಕಂಡವನಿಗೆ ಒಂದು ಸಣ್ಣ ಕ್ರಿಮಿ ಯಾವ ಲೆಕ್ಕ? ಆದರೆ ಕ್ರಿಮಿಗೆ ಸಂತತಿ ಉಂಟು, ಹಸಿವುಂಟು, ಬೆದಕಾಟವುಂಟು. ಹಿಮಾಲಯವು ಎಂದಿನಿಂದ ಇದೆಯೋ ಅಂದಿನಿಂದ ಕ್ರಿಮಿಯ ಅನಂತ ಸಂತತಿಯೂ ಉಂಟು. ಕ್ರಿಮಿಗಳು ಎಷ್ಟಿವೆಯೆಂದರೆ ಕ್ರಿಮಿ ಸಂತತಿಯನ್ನು ಒಟ್ಟು ಮಾಡಿದರೆ , ಅದು ಹಿಮಾಲಯಕ್ಕಿಂತ ದೊಡ್ಡದಾಗಬಹುದು. ಹಾಗಾಗಿ ಕ್ರಿಮಿ ಪಂಕ್ತಿ ಕಿರಿಯದಲ್ಲವೆಂದು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

111

ಜಡವೆಂಬುದೇನು? ಸೃಷ್ಟಿಯಲಿ ಚೇತನ ಸುಪ್ತಿ ।
ಅಡಗಿ ನಿದ್ರಿಪುದಲ್ಲಿ ಚೈತನ್ಯದಗ್ನಿ ॥
ಮಿಡಿಯೆ ಪರಸತ್ತ್ವ ವಿದ್ಯುದ್ದೀಪ್ತಿಯದನಾಗ ।
ನೆಡೆವುದದು ಜೀವಿವೊಲು - ಮಂಕುತಿಮ್ಮ ॥ ೧೧೧ ॥

ಒಂದೇ ಮೂಲದಿಂದ ಹೊರಟ ಎರಡು ವಸ್ತುಗಳು. ಒಂದು ಜಡ ಇನ್ನೊಂದು ಚೇತನ. ಅದರ ಅಸ್ಥಿತ್ವಕ್ಕೆ ಕಾರಣವೇ ಬೃಹಚ್ಚೇತನ. ಸೃಷ್ಟಿಯ ಆದಿಯಲ್ಲಿ ಆ ಚೇತನದ ವ್ಯಾಪಕತೆಯ ಸ್ವರೂಪವೇ ಬೇರೆ. ಕೋಟ್ಯಾಂತರ ವರ್ಷಗಳಿಂದ ಬದಲಾಗುತ್ತಾ ಬರುತ್ತಿದೆ. ಮೊದಲು ಪಂಚಭೂತಗಳಲ್ಲಿ ಮಾತ್ರ ಇದ್ದದ್ದು ಕಾಲಾನುಕಾಲಕ್ಕೆ ಗಿಡಮರಗಳಲ್ಲಿ ತದನಂತರ ಕ್ರಿಮಿ ಕೀಟಗಳಲ್ಲಿ, ನಂತರ ಪ್ರಾಣಿಗಳಲ್ಲಿ ಹೀಗೆ ಎಲ್ಲದರ ಅಸ್ಥಿತ್ವಕ್ಕೆ ಕಾರಣವಾದ ಚೇತನವು ತನ್ನ ಶರೀರವನ್ನು ರೂಪಾಂತರಗೊಳಿಸುತ್ತಾ ಹೋಯಿತು. ” ಅಕಾಶಾದ್ವಾಯು: ವಾಯೋರಗ್ನಿ: ಅಗ್ನೇರಾಪಃ ಅದ್ಭ್ಯಃ ಪೃಥಿವೀ ಪೃತಿವ್ಯಾ ಓಷದಯಃ ಒಷದೀಭ್ಯೋನ್ನಂ ಅನ್ನಾತ್ ಪುರುಷಃ ” ಹೀಗೆ ಚೇತನವು ತನ್ನ ಇರುವಿಕೆಯನ್ನು ಎಲ್ಲೆಡೆ ತೋರಿಸುತ್ತಾ ಜೀವಗಳಲ್ಲಿ ಚೇತನ ಸ್ವರೂಪದಿಂದ ” ಪುರುಷ” ನೆಂದು ಕರೆಯಲ್ಪಡುತ್ತಾ ಪೌರುಷದಿಂದ ಮೆರೆದಿದೆ.ಈ ಹಿಂದಿನ ಕಗ್ಗದಲ್ಲಿ ಉಲ್ಲೇಖಿಸಿದಂತೆ “ಜಡ” ವೆಂದರೆ ಚಲನೆ ಇಲ್ಲದ ವಸ್ತು. ಅದರಲ್ಲಿಯೂ ಚೈತನ್ಯವಿದೆ. ಆದರೆ ಆ ಚೈತನ್ಯಾಗ್ನಿ ನಿದ್ರಿಸುತ್ತಿದೆ ಎಂದರೆ ಸುಪ್ತವಾಗಿದೆ. ನಿದ್ರಿಸುತ್ತಿರುವ ಆ ಅಗ್ನಿಯ ಕಿಡಿ ಸಿಡಿದು ಮಿಡುಕಿದರೆ ಅದು ಜೀವಿಯಾಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

112

ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿಕಣ ।
ಸ್ತಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ ॥
ಶಮದ ಸುಂದರದ ಸಾತ್ತ್ವಿಕದ ಗಾಂಭೀರ್ಯವದು ।
ನಮಗೊಂದು ವೇದನಿಧಿ - ಮಂಕುತಿಮ್ಮ ॥ ೧೧೨ ॥

ಬೃಹತ್ತಾದ ಹಿಮಾಲಯ ಪರ್ವತದ ಗರ್ಭದಲ್ಲೂ ಸಹ ಒಂದು ಚೈತನ್ಯದ ಅಗ್ನಿ ಅಡಗಿದೆ. ಅದು ಸ್ಥಿರವಾಗಿ, ಸ್ಥಿಮಿತದಿಂದ, ನಿಂತಿದೆ. ಈ ಭೂಮಿಯನ್ನು ಕಾಪಾಡುವುದಕ್ಕಾಗಿಯೇ!! ಶಾಂತ, ಸುಂದರ ಮತ್ತು ಸಾತ್ವಿಕ ಗಾಂಭೀರ್ಯದ ನಿಲುವಿನಲ್ಲಿ ನಿಂತಿರುವ ಆ ಹಿಮಾಲಯವು ನಮಗೆ ಜ್ಞಾನದ ಪ್ರತೀಕವಾಗಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

113

ಅಣುಸಂಖ್ಯೆಯೆಣಿಸುವನು ವಿಶ್ವದಲಿ ವಿಜ್ಞಾನಿ ।
ಗುಣಿಸುವನು ಭೂತಶಕ್ತಿಗಳನದರಿಂದೇಂ? ॥
ಗಣಿತಸಾಧ್ಯದ ಹಿಂದಗಣ್ಯದ ಮಹತ್ತತ್ತ್ವ ।
ವಣಗಿಹುದು ಮೂಲವದು - ಮಂಕುತಿಮ್ಮ ॥ ೧೧೩ ॥

ಈ ಜಗತ್ತಿನ ಅತಿ ಸೂಕ್ಷ್ಮ ಜೀವಿ ಅಣುಗಳನ್ನು ವಿಜ್ಞಾನಿ ಲೆಕ್ಕ ಹಾಕಿಬಿಡಬಹುದು. ಭೌತಿಕ ಶಕ್ತಿಯನ್ನು ಗುಣಿಸಿ ಭಾಗಿಸಿ ಲೆಕ್ಕಹಾಕಿಬಿಡಬಹುದು. ಆದರೆ ಅದರಿಂದ ಏನು ಪ್ರಯೋಜನ. ಕೇವಲ ಭೌತಿಕ ರೂಪವಷ್ಟೇ ತಿಳಿಯುವುದು. ಈ ಗಣಿತ ಶಾಸ್ತ್ರಕ್ಕೂ ಮೀರಿ ಒಂದು ಮಹತತ್ವವು ಭೌತಿಕ ಶರೀರದೊಳಗೆ ಚೈತನ್ಯ ರೂಪದಲಿ ಅಡಗಿದೆ. ಅದೇ ಮೂಲ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.