Kagga Logo

Infinite frame, finite picture

104

108

104

ಕಾಲವಕ್ಷಯದೀಪವದರ ಪಾತ್ರೆಯಪಾರ ।
ಬಾಳ್ ಅದರಿನಾದೊಂದು ಕಿರುಹಣತೆ ಮಿಣಕು ॥
ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು ।
ತೈಲಧಾರೆಯಖಂಡ - ಮಂಕುತಿಮ್ಮ ॥ ೧೦೪ ॥

ಕಾಲವೆಂಬುದು ಅವ್ಯಾಹತವಾಗಿ, ನಿರಂತರ ಉರಿಯುವ ದೀಪ. ಅದರ ಪಾತ್ರ ಬಹಳ ದೊಡ್ಡದು. ಒಂದು ಕ್ಷಣ ಮುಗಿದರೆ ಮತ್ತೊಂದು ಕ್ಷಣ ನಮ್ಮ ಬಾಳು ಕಾಲದ ಈ ಅವ್ಯಾಹತ ಪ್ರವಾಹದಲ್ಲಿ ಉರಿಯುವ ಒಂದು ಸಣ್ಣ ಹಣತೆಯಂತೆ. ಗಾಳಿಯು ಒಂದು ಹಣತೆಯನ್ನು ಆರಿಸಿದರೆ ಇನ್ನೊಂದು ದೀಪ ಹೊತ್ತಿಕೊಳ್ಳುವುದು. ಜೀವನದ ತೈಲಧಾರೆಗೆ ಅಂತ್ಯವೇ ಇಲ್ಲವೆಂಬುದೆ ಈ ಕಗ್ಗದ ಹೂರಣ.

105

ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು? ।
ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು? ॥
ನಿತ್ಯ ಸತ್ತ್ವವೆ ಭಿತ್ತಿ, ಜೀವಿತ ಕ್ಷಣಚಿತ್ರ ।
ತತ್ತ್ವವೀ ಸಂಬಂಧ - ಮಂಕುತಿಮ್ಮ ॥ ೧೦೫ ॥

ಒಂದು ಚಿತ್ರ ಬರೆಯಲು ಗೋಡೆಯೊಂದು ಬೇಕು. ಗೋಡೆಯಿಲ್ಲದೆ ಚಿತ್ರವಿರಲು ಸಾಧ್ಯವಿಲ್ಲ. ಹಾಗೆಯೇ ಚಿತ್ರವಿಲ್ಲದ ಗೋಡೆಗೆ ಸೊಗಸೂ ಇರುವುದಿಲ್ಲ. ಈ ಜಗತ್ತಿನ ಗೋಡೆಯಾದ ಆ ಪರಮಾತ್ಮ ಸತ್ವವು ನಿತ್ಯ ಮತ್ತು ಸತ್ಯವಾದ ಗೋಡೆಯಾಗಿರಲು, ನಮ್ಮ ಜೀವನವು ಆ ಗೋಡೆಯಮೇಲೆ ಬರೆದ ಒಂದು ಚಿತ್ರವಷ್ಟೇ. ಈ ತತ್ವದಿಂದಲೇ ನಮ್ಮ ಮತ್ತು ಪರಮಾತ್ಮನ ಸಂಬಂಧವಿರುತ್ತದೆ ಎನ್ನುವುದೇ ಗುಂಡಪ್ಪನವರ, ಈ ಕಗ್ಗದ ಹೂರಣ.

106

ಚೌಕಟ್ಟನಂತವದರೊಳು ಚಿತ್ರಪಟ ಸಾಂತ ।
ಸಾಕಾರ ಘನತತಿ ನಿರಾಕಾರ ನಭದಿ ॥
ಲೌಕಿಕದ ಮೌಲ್ಯ ನಿರ್ಲೌಕಿಕದ ನಾಣ್ಯದಲಿ ।
ಲೆಕ್ಕ ತಾತ್ತ್ವಿಕನಿಗಿದು - ಮಂಕುತಿಮ್ಮ ॥ ೧೦೬ ॥

ಹಿಂದಿನ ಕಗ್ಗದ ವಿವರಣೆಯನ್ನೇ ಮುಂದುವರೆಸಿ ನೋಡಿದರೆ, ಈ ಪರಮ ಚೇತನದ ಚೌಕಟ್ಟು, ಅನಂತ,ಅಂದರೆ ಅಂತವೇ ಇಲ್ಲದ್ದು . ಹಾಗೆ ಅನಂತವಾಗಿರುವ ಚೌಕಟ್ಟಿನಲ್ಲಿ ಅಂತ್ಯಗೊಳ್ಳುವ ಚಿತ್ರ. ಹೇಗೆ ಅನಂತ ಆಕಾಶದಲ್ಲಿ ಹಲವು ಆಕಾರಗಳ, ಆದರೆ ತನ್ನ ಆಕಾರವನ್ನು ಘಳಿಗೆ ಘಳಿಗೆಗೆ ಬದಲಾಯಿಸಿಕೊಳ್ಳುವ ಮೋಡಗಳಂತೆ, ನಮ್ಮ ಲೌಕಿಕ ಜೀವನವೂ ಈ ಅನಂತ ವಿಶ್ವದ ಭಿತ್ತಿಯಲ್ಲಿ ಸಾಂತ, ಅಂದರೆ ಬದಲಾಗುವ ಜೀವನದ ಚಿತ್ರ. ಆದರೆ ಈ ಲೌಕಿಕದ ಜೀವನದ ಮೌಲ್ಯಗಳನ್ನು, ಪಾರಮಾರ್ಥದ ಒರೆಗೆಹಚ್ಚಿ ನೋಡುವವನೆ ತತ್ವಜ್ಞಾನಿ, ಎಂದು ಆ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.

107

ಅಜ್ಞಾತವಾದುದನಭಾವವೆನೆ ನಾಸ್ತಿಕನು ।
ಅಜ್ಞೇಯವೆಂದದಕೆ ಕೈ ಮುಗಿಯೆ ಭಕ್ತ ॥
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ ।
ಸ್ವಜ್ಞಪ್ತಿಶೋಧಿ ಮುನಿ - ಮಂಕುತಿಮ್ಮ ॥ ೧೦೭ ॥

ನಮ್ಮ ಅರಿವಿಗಿಲ್ಲದ್ದು, ಗೊತ್ತಿಲದ್ದು, ತಿಳಿಯದಿರುವುದು ಎಂದು “ನಾಸ್ತಿಕ” ದೇವರನ್ನು ನಂಬುವುದಿಲ್ಲ. ಅವನಿಗೆ ದೇವರಲ್ಲಿ ನಂಬಿಕೆ ಇಲ್ಲ. ಏಕೆಂದರೆ ಅವನಿಗೆ ಗೋಚರವಾಗುವುದಿಲ್ಲ ಮತ್ತು ಅನುಭವಕ್ಕೂ ಬರುವುದಿಲ್ಲ. ಆದರೆ ಅದರ ಅರಿವಿಲ್ಲದಿದ್ದರೂ ಅದರಲ್ಲಿ ನಂಬಿಕೆ ಇಟ್ಟಿರುವವನು ಭಕ್ತ. ಇರಲಿ ನಾನು ಇದನ್ನು ವಿಚಾರಕ್ಕೆ ಒರೆ ಹಚ್ಚಿ ನಿರ್ಣಯಿಸಬೇಕು,ಪರಿಕಿಸಿ ನೋಡಬೇಕು ಎಂದು ಹೇಳುವವನೇ ವಿಜ್ಞಾನಿ. ನಂಬಿದ್ದನ್ನು ಅಂತರ್ಯದಲ್ಲಿ ಚಿಂತನ, ಮನನ , ಧ್ಯಾನ , ತಪಸ್ಸು ಮಾಡಿ ಆ ಪರಮಾತ್ಮ ವಸ್ತುವನ್ನು ಅರಿತುಕೊಳ್ಳಲು ಪ್ರಯತ್ನಪಡುವವನೆ ಮುನಿ ಅಥವಾ ಋಷಿ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

108

ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು ।
ವೆಡೆಯೆಲ್ಲ ಜಡಲೋಕ ಕಲ್ಲು ಕಡ್ಡಿ ಕಸ ॥
ಅಡಗಿರ್ಪ ಚೈತನ್ಯವೆಚ್ಚರಲು ಜಂತು ಜಗ ।
ಜಡವೆ ಜೀವದ ವಸತಿ - ಮಂಕುತಿಮ್ಮ ॥ ೧೦೮ ॥

ಜಡವೇನು? ಜೀವವೇನು? ಚೈತನ್ಯ ಎಲ್ಲೆಲ್ಲಿ ನಿದ್ರಿಸಿದೆಯೋ ಅದೆಲ್ಲ ಜಡ. ಕಲ್ಲು ಕಡ್ಡಿ ಕಸ ಹೀಗೆ. ಹಾಗೆ ಅಡಗಿರುವ ಅಥವಾ ಸುಪ್ತವಾಗಿರುವ ಚೈತನ್ಯ ಎಚ್ಚರವಾದರೆ ಆ ವಸ್ತು ಜೀವಂತವಾಗುತ್ತದೆ. ಹಾಗಾಗಿ ಜಡವೆ ಜೀವಕ್ಕೆ ಮನೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.