Kagga Logo

Measurable-immeasurable

99

103

99

ಜಲಧಿತೀರದಿ ನಿಂತು ವೀಕ್ಷಿಸಿಕ್ಕೆಲಗಳಲಿ ।
ಚಲವೊಂದಚಲವೊಂದು ಸಮವದಸಮವಿದು ॥
ಕಲೆತಿರ್ಪುವಂತು ಮೇಯಾಮೇಯಗಳು ಜಗದಿ ।
ಮಿಲಿತತೆಯಿನೀ ರುಚಿಯೊ - ಮಂಕುತಿಮ್ಮ ॥ ೯೯ ॥

ಸಮುದ್ರದ ತೀರದಲ್ಲಿ ನಿಂತು ಎರಡೂ ಬದಿಯಲ್ಲಿ ನೋಡಿದರೆ ಒಂದು ಕಡೆ ಸಮವಾಗಿರುವ ಕಡಲೂ ಇನ್ನೊಂದು ಬದಿಯಲ್ಲಿ ಅಸಮವಾಗಿರುವ ಭೂಮಿ, ಬೆಟ್ಟ ಗುಡ್ಡಗಳೂ ಕಾಣುತ್ತದೆ. ಇದರಂತೆ ಈ ಜಗತ್ತಿನಲ್ಲಿ ಹಲವು ಸಮವಾಗಿ ಮತ್ತೆ ಹಲವು ಅಸಮವಾಗಿಯೂ ಇವೆ. ಹೀಗೆ ಸಮತೆ ಮತ್ತು ಅಸಮತೆಯಿಂದ ಕೂಡಿ ಇರುವುದೇ ಜಗತ್ತು . ಕೆಲವು ನಮಗೆ ಅರ್ಥವಾಗುತ್ತದೆ. ಕೆಲವು ನಮ್ಮ ಅರಿವಿನ ಪರಿಧಿಯಿಂದಾಚೆಗೆ ಇದೆ. ಹೀಗಿರುವುದೇ, ಈ ಜಗತ್ತಿಗೆ ಸೊಬಗನ್ನು ನೀಡಿದೆಯೋ? ಎಂದು ಕೇಳುತ್ತಾ ಒಂದು ಗಹನವಾದ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು. 

100

ಅವಿದಿತಾಖಂಡಸತ್ತ್ವದಪಾರ ಜಲಧಿಯಲಿ ।
ಭುವನದ ದ್ವೀಪ ಕಿಂಚಿನ್ಮಾತ್ರವಿದಿತ ॥
ಪವಿತಾಂತರಕ್ಷಿಗಾಯೆರಡುಮೊಂದೇ ವಸ್ತು ।
ವವಗುಂಠಿತ ಬ್ರಹ್ಮ - ಮಂಕುತಿಮ್ಮ ॥ ೧೦೦ ॥

ಇಡೀ ಬ್ರಹ್ಮಾಂಡದಲ್ಲಿ ನಮ್ಮ ಭೂಮಿ ಬಹಳ ಸಣ್ಣದು. ಏಕೆಂದರೆ ನಮಗೆ ಕಾಣುವ ಸೂರ್ಯನ ಗಾತ್ರ ಭೂಮಿಯ ಗಾತ್ರಕ್ಕಿಂತ ೧೩ ಲಕ್ಷ ಪಟ್ಟು ದೊಡ್ಡದು. ಅಬ್ಬಾ!!!  ನಮ್ಮ ಅರಿವಿಗೆ ನಿಲುಕ್ಕದ್ದು. ಹಾಗಾದರೆ ಇಡೀ ಬ್ರಹ್ಮಾಂಡಕ್ಕೆ ಹೋಲಿಸಿದರೆ ನಮ್ಮ ಭೂಮಿಯೆಷ್ಟರದ್ದು?   ಈ ಭೂಮಿಯಮೇಲೂ,  ಒಂದು ಪಾಲು ನೆಲ ಮತ್ತು ಮೂರು ಪಾಲು ನೀರು. ಹಾಗಾಗಿ ನಾವು ನಿಂತಿರುವ  ನೆಲ ಈ ಜಗತ್ತಿನ ವ್ಯಾಪಕತ್ವಕ್ಕೆ ಹೋಲಿಸಿದರೆ ಒಂದು ಸೂಜಿ ಮೊನೆಯಷ್ಟೂ ಅಲ್ಲ. ಇದನ್ನೇ ನಮಗರಿವಿಲ್ಲದ ಮತ್ತು ಅಖಂಡವಾದ ಇಡೀ ಜಗತ್ತಿನಲ್ಲಿ ಭೂಮಿಯಪಾಲು ಕಿಂಚಿನ್ಮಾತ್ರವೆಂದರು ಮಾನ್ಯ ಗುಂಡಪ್ಪನವರು. 

101

ಹಾಲಿನೊಳು ಬೆಣ್ಣೆ ಕಡಲೊಳಗೆ ನೀರ್ಗಲ್ಲವೊಲು ।
ತೇಲುವುದಮೇಯಸತ್ತ್ವದಲಿ ಮೇಯ ಜಗ ॥
ಮೂಲದಶೆಯೊಳಗೊಂದು, ಮಾಪನದ ಬಗೆಗೆರಡು ।
ಗಾಳಿಯುಸಿರುಗಳಂತೆ - ಮಂಕುತಿಮ್ಮ ॥ ೧೦೧ ॥

ಹಾಲಿನಲ್ಲಿ ಬೆಣ್ಣೆ ತೇಲುವಂತೆ, ಕಡಲಿನಲ್ಲಿ ಮಂಜಿನಗಡ್ಡೆ ತೇಲುವಂತೆ, ಅಗಾಧ ಅಜ್ಞಾನದ ಕಡಲಲ್ಲಿ ಜ್ಞಾನ ತೇಲುತ್ತಿದೆ. ಹೀಗೆ ಮೂಲ ರೂಪದಲ್ಲಿ ಒಂದರಂತೆ ಕಂಡರೂ ಅರ್ತೈಸಿದರೆ, ಸತ್ಯರೂಪದ ಅರಿವಾಗುತ್ತದೆ. ಹೇಗೆ ಹೊರಗಿರುವುದು ಗಾಳಿಯಾದರೆ ನಮ್ಮಜೀವನಕ್ಕೆ ಹೇತುವಾದದ್ದನ್ನು “ಉಸಿರು” ಎಂದು ಕರೆಯುತ್ತೇವೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ವ್ಯಾಖ್ಯಾನಮಾಡಿದ್ದಾರೆ .

102

ಕಾಯ ನಿರ್ಣೇಯವದರೊಳು ಮನವನಿರ್ಣೇಯ ।
ಸ್ನಾಯು ಸಂಖ್ಯೇಯ ಜೀವಳಮಸಂಖ್ಯೇಯ ॥
ಮೇಯಾಪ್ರಮೇಯಮಿಶ್ರಣವಿಂತು ನರಜಂತು ।
ನೇಯವದು ವಿಶ್ವಕಂ - ಮಂಕುತಿಮ್ಮ ॥ ೧೦೨ ॥

ನಮ್ಮ ಶರೀರದ ರಚನೆಯನ್ನು” ಇದು ಹೀಗೇ ಇದೆ ” ಎಂದು ನಿರ್ಣಯಿಸಬಹುದು. ಆದರೆ ಮನದ ರಚನೆ ಮತ್ತು ಮನದ ಇಂಗಿತವನ್ನು ನಿರ್ಣಯಿಸುವುದು ಸಾಧ್ಯವೇ ಇಲ್ಲ. ಶರೀದಲ್ಲಿ ಎಷ್ಟು ಮಾಂಸಖಂಡಗಳಿವೆ ಎಂದು ಲೆಕ್ಕ ಹಾಕಿಬಿಡಬಹುದು, ಆದರೆ ಜೀವನನ್ನು ಅಳೆಯುವುದು ಮತ್ತು ಲೆಕ್ಕಹಾಕುವುದು ಸಾಧ್ಯವಿಲ್ಲ. ಹೀಗೆ ಮನುಷ್ಯ ಪ್ರಾಣಿ ಮೇಯ, ಅಂದರೆ ನಿಖರವಾಗಿ ನೋಡಿ ಹೇಳಬಹುದಾದ ಮತ್ತು ಅಪ್ರಮೇಯ, ಎಂದರೆ ಹೇಳಲು, ಊಹಿಸಲು, ಅಳೆಯಲು ಅಸಾಧ್ಯವಾದದವುಗಳಿಂದ ಕೂಡಿದ್ದಾನೆ ಎಂದು ಹೇಳುತ್ತಾ, ಈ ರೀತಿಯ ವರ್ಣನೆ ಇಡೀ ಜಗತ್ತಿಗೂ ಅನ್ವಯಿಸುತ್ತದೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ,

103

ಜ್ಞೇಯದ ದ್ವೀಪಕಜ್ಞೇಯಾಬ್ಧಿಯಾವರಣ ।
ಕಾಯಕದ ಗಿರಿಗೆ ಮಾನಸದಭ್ರಪಟಲ ॥
ಮೇಯವನು ಬಗೆದೇನ್ ಅಮೇಯ ಸುತ್ತಲುಮಿರಲು? ।
ಮಾಯೆಯೀ ಮಿಶ್ರಣವೊ - ಮಂಕುತಿಮ್ಮ ॥ ೧೦೩ ॥

ಜ್ಞಾನಕ್ಕೆ ಅಜ್ಞಾನದ ಆವರಣ ಸುತ್ತಿಕೊಂಡಿದೆ. ಮಹತ್ತರ ಕಾರ್ಯಗಳನ್ನು ಸಾಧಿಸ ಹೊರಟಾಗ, ಅಜ್ಞಾನ ನಮ್ಮ ಮನಸ್ಸನ್ನು ಮೋಡದಂತೆ ಮುಸುಕಿಬಿಡುತ್ತದೆ. ಅಜ್ಞಾನ ನಮ್ಮನ್ನು ಸುತ್ತಿಕೊಂದಿರುವಾಗ, ಜ್ಞಾನವನ್ನು ಬೆದಕಿ, ಕೆದಕಿ ತೆಗೆಯುವುದು ಬಲು ಕಷ್ಟ. ಇಡೀ ಜಗತ್ತೇ ಜ್ಞಾನಾಜ್ಞಾನಗಳ ಮಿಶ್ರಣವೆಂಬುದೆ ಗುಂಡಪ್ಪನವರ ಈ ಕಗ್ಗದ ಹೂರಣ.