Way of fate
154
—
158
154
ಪೊಸರಸಂ ಬೇರಿಗನುದಿನಮೊದವಿ ಧರೆಯಿಂದ ।
ಸಸಿಗೆ ಹೊಸತಳಿರ ತಲೆಯಲಿ ಮುಡಿಸುವಂತೆ ॥
ಹೊಸ ಸೃಷ್ಟಿಸತ್ತ್ವಮೆತ್ತಣಿನೊ ಬರುತನುದಿನಂ ।
ಪೊಸತಾಗಿಪುದು ಜಗವ - ಮಂಕುತಿಮ್ಮ ॥ ೧೫೪ ॥
ಒಂದು ಗಿಡದ ಬೇರಿಗೆ ಹೊಸ ರಸವನ್ನು ಸತ್ವವಾಗಿ ಪೂರೈಸಿ, ಆ ಬೇರಿನ ಗಿಡದಲ್ಲಿ ಹೊಸ ಚಿಗುರನ್ನು ಮೂಡಿಸುವಂತೆ, ಹೊಸ ಸೃಷ್ಟಿಗೆ ಅನುವಾದ ಸತ್ವವು ಎಲ್ಲಿಂದಲೋ ಬಂದು ಈ ಜಗವನೆಲ್ಲ ಹೊಸತಾಗಿಸುತ್ತದೆ, ಎಂದು ಜಗತ್ತಿನಲ್ಲಿ ನಿರಂತರ ನಡೆಯುವ ಹೊಸತನದ ಆನಂದ ನೃತ್ಯವನ್ನು ಬಣ್ಣಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
155
ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯು ।
ತುಸಿರಾಗಿ ನಮ್ಮೊಳಾವಗಮಾಡುವಂತೆ ॥
ವಿಸರಸತ್ತ್ವಮದೊಂದದೆತ್ತಣಿನೊ ಬಂದು ನ ।
ಮ್ಮಸುಗಳೊಳವೊಗುತಿಹುದು - ಮಂಕುತಿಮ್ಮ ॥ ೧೫೫ ॥
ನಮ್ಮ ಉಸಿರಾಗಿರುವ ಈ ಗಾಳಿಯು ಆಕಾಶದಿಂದ ಇಳಿದು, ಬೆಟ್ಟಗಳ ಮೇಲೆ ಬೀಸಿ, ಗುಹೆಗಳಲ್ಲಿ ನುಗ್ಗಿ, ಉಸಿರಾಗಿ ನಮ್ಮ ಒಡಲೊಳಗೆ ಆಡುವಂತೆ ಮಾಡುವ, ಒಂದು ವಿಸ್ತಾರ ಸತ್ವವು ಎಲ್ಲಿಂದಲೋ ಬಂದು ನಮ್ಮ ಪ್ರಾಣಗಳ ಒಳಗೆ ನುಗ್ಗುತ್ತಿದೆ ಎಂದು ಪ್ರಸ್ತಾಪಿಸ್ಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
156
ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ ।
ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ॥
ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ ।
ಬಾಯ ಚಪ್ಪರಿಸುವನು - ಮಂಕುತಿಮ್ಮ ॥ ೧೫೬ ॥
ಈ ವಿಧಿ ಅನ್ನುವುದು ನಮ್ಮನ್ನು ಈ ಭೂಮಿ ಎನ್ನುವ ಒಲೆಯೊಳು, ನೆನೆಸುತ್ತ, ಬೇಯಿಸುತ, ಹೆಚ್ಚುತ್ತ , ಕೊಚ್ಚುತ್ತ, ಕಾಯಿಸುತ, ಕರಿಯುತ್ತ, ಹುರಿಯುತ್ತ, ಸುಡುತ್ತ, ನಮ್ಮನ್ನು ಆಡಿಸುತ್ತ, ತಾನು ಒಂದು ರುಚಿಯಾದ ಪಕ್ವಾನ್ನವನ್ನು ತಿಂದು ಆಸ್ವಾದಿಸುವನಂತೆ ಬಾಯಿ ಚಪ್ಪರಿಸುತ್ತಿದ್ದಾನೆ ಎಂದು ಒಂದು ಗಹನವಾದ ವಿಷಯವನ್ನು ವಿನೋದವಾಗಿ ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
157
ಪರಬೊಮ್ಮನಾ ವಿಧಿಯ ನೇಮಿಸಿಹುದೇತಕೆನೆ ।
ನರಜಾತಿ ಸಾನುಭೂತಿಯ ಕಲಿಯಲೆಂದು ॥
ಪರರೆಂಬರಿಲ್ಲ ಆತ್ಮಾಂಶರೆಲ್ಲರೆನಿತ್ತೆ ।
ಬೆರೆ ನೀನು ವಿಶ್ವದಲಿ - ಮಂಕುತಿಮ್ಮ ॥ ೧೫೭ ॥
ಆ ಪರಬ್ರಹ್ಮನು ಆ “ವಿಧಿ”ಯನ್ನು ಏಕೆ ನೇಮಿಸಿದ್ದಾನೆ ? ಎಂದರೆ, ಮನುಷ್ಯರು ಪರಸ್ಪರ ಸಹಾನುಭೂತಿಯನ್ನು ಕಲಿಯಲಿ ಎಂದು ಮತ್ತು ಪರರು ಯಾರೂ ಇಲ್ಲ, ಎಲ್ಲರೂ ಆತ್ಮದ ಒಂದು ಅಂಶವೆಂದು ಅರಿತು ನೀನೂ ಬೆರೆತು ಈ ವಿಶ್ವದಲಿ ಬಾಳು ಎಂದು ಒಂದು ಆದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
158
ಕರವೆದಡದೃಷ್ಟಕ್ಕೆ; ನರನ ಪೂರ್ವಿಕವೊಂದು ।
ಪೆರತೊಂದು ನವಸೃಷ್ಟಿಸತ್ತ್ವವಾ ಬೊಗಸೆ ॥
ಧರಿಸಿಹುದು ಮನುಜಜೀವಿತವನದರೊತ್ತಡದೆ ।
ಪರಿದಾಟ ನಮಗೆಲ್ಲ - ಮಂಕುತಿಮ್ಮ ॥ ೧೫೮ ॥
ನಮ್ಮ ಪೂರ್ವಜನ್ಮದ ರೇಖೆಗಳನ್ನು ಹೊತ್ತ ಎಡಗೈ ಮತ್ತು ನಮ್ಮ ಈ ಜನ್ಮದ ಆಗು ಹೋಗುಗಳನ್ನು ಬಿತ್ತರಿಸುವ ನಮ್ಮ ಬಲಗೈಯ ರೇಖೆಗಳು . ಎರಡು ಕೈಗಳು. ಈ ಎರಡೂ ಕೈಗಳನ್ನು ಜೋಡಿಸಿದಾಗ ಒಂದು ಬೊಗಸೆಯಾಗುತ್ತದೆ. ಈ ಬೊಗಸೆಯಿಂದ ನಾವು ಹೊಸ ಹೊಸ ಕೆಲಸವನ್ನು ಮಾಡುತ್ತಾ ಇಲ್ಲಿನ ಒತ್ತಡಗಳನ್ನು ಅನುಭವಿಸುತ್ತಾ ನಾವು ಪರದಾಡುತ್ತಿರುತ್ತೇವೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.