Third shareholder
820
—
824
820
ಜೀವನವ್ಯಾಪಾರ ಮೂವರೊಟ್ಟು ವಿಚಾರ ।
ಭಾವಿಪೊಡೆ ನೀನು, ಜಗ, ಇನ್ನೊಂದದೃಷ್ಟ ॥
ಆವಗಂ ಮೂರನೆಯ ಭಾಗಸ್ಥನಿಚ್ಛೆ ಬಲ ।
ಈ ವಿವರವರಿಯೆ ಸುಖ - ಮಂಕುತಿಮ್ಮ ॥ ೮೨೦ ॥
ಜಗತ್ತಿನ ಜೀವನದ ವ್ಯಾಪಾರದಲ್ಲಿ ಮೂರು ಜನರ ಒಟ್ಟುವಿಚಾರ ಸಮ್ಮಿಳಿತವಾಗಿರುತ್ತದೆ. ಯೋಚಿಸಿ ನೋಡಿದರೆ ಒಂದು ನೀನು, ಎರಡನೆಯದು ಈ ಜಗತ್ತು ಮತ್ತು ಮೂರನೆಯದು ಆ ಕಾಣದ ಕೈ. ಆದರೆ ಆ ಕಾಣದ ಶಕ್ತಿಯ ಬಲ ಮತ್ತು ಪ್ರಭಾವವೇ ಅಧಿಕವಾಗಿರುತ್ತದೆ. ಈ ವಿವರಗಳನ್ನು ಅರಿತುಕೊಂಡರೆ ನೆಮ್ಮದಿಯಾಗಿರಬಹುದು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
821
ಏನೇನು ಹಾರಾಟ ಸುಖಕೆಂದು ಲೋಕದಲಿ! ।
ತಾನಾಗಿ ಗಾಳಿವೊಲ್ ಬಂದ ಸುಖವೆ ಸುಖ ॥
ನೀನೆ ಕೈಬೀಸಿಕೊಳೆ ನೋವು ಬೆವರುಗಳೆ ಫಲ ।
ಮಾಣು ಮನದುಬ್ಬಸವ - ಮಂಕುತಿಮ್ಮ ॥ ೮೨೧ ॥
ಈ ಲೋಕದಲ್ಲಿ ಸುಖವನ್ನು ಪಡೆಯಲು ಮನುಷ್ಯರು ಏನೆಲ್ಲ ರೀತಿಯ ಹಾರಾಟ ಮಾಡುತ್ತಾರೆ. ಆದರೆ ಪ್ರಯತ್ನಪೂರ್ವಕವಾಗಿ ಪಡೆದ ಸುಖ ಸುಖವಲ್ಲ, ತಾನಾಗೆ ಲಭ್ಯವಾದ ಸುಖವೇ ಸುಖ. ಗಾಳಿಯನ್ನು ನಾವೇ ಬೀಸಿಕೊಂಡರೆ ಕೇವಲ ಕೈ ನೋವು, ಮೈ ಬೆವರುಗಳೇ ಫಲ. ಹಾಗಲ್ಲದೆ ತಾನೇ ಬೀಸುವ ಗಾಳಿ ಹಿತ ತರುತ್ತದೆ. ಹಾಗಾಗಿ ಸುಖ ಪಡೆಯಲು ನಮ್ಮ ಅತಿ ಪ್ರಯತ್ನವನ್ನು ಬಿಡಬೇಕು ಎನ್ನುವ ಸಂದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
822
ಆತುರತೆಯಿರದ ಸತತೋದ್ಯೋಗ ಸರ್ವಹಿತ ।
ಭೂತದಾವೇಶವಾತುರತೆಯಾತ್ಮಕ್ಕೆ ॥
ಕಾತರನು ನಿನಾಗೆ ಮೂರನೆಯ ಸಹಭಾಗಿ ।
ಪ್ರೀತನಾಗುವನೇನೊ? - ಮಂಕುತಿಮ್ಮ ॥ ೮೨೨ ॥
‘ಆತುರತೆ’ ಯಿಲ್ಲದೆ ಸತತವಾಗಿ ಕಾರ್ಯನಿರತನಾಗಿದ್ದರೆ ಅದು ಸರ್ವರ ಹಿತಕ್ಕೆ ಕಾರಣವಾಗುತ್ತದೆ. ಹಾಗಲ್ಲದೆ ಆತುರತೆಯನ್ನು ತೋರಿದರೆ ಅದು ಆತ್ಮಕ್ಕೆ ಭೂತದಾವೇಶದಂತಾಗುತ್ತದೆ. ನೀನು ಕಾತರನಾಗಿ ಸದಾಕಾಲವಿದ್ದರೆ, ನಿನ್ನ ಎಲ್ಲ ಕಾರ್ಯಗಳಲ್ಲಿ ತನ್ನ ಪಾತ್ರವನ್ನೂ ವಹಿಸುವ ಆ ಮೂರನೆಯವನು ಸುಪ್ರೀತನಾಗುವನೇನೋ? ಎಂದು ಒಂದು ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.
823
ಎಣಿಕೆಯೊಳಿತಾದೊಡೆಯುಮೊಳಿತನಾಗಿಸದು ಹಟ ।
ಮಣಿಕನಕ ಸಂಕೋಲೆ ತನುವ ಬಂಧಿಸದೇಂ? ॥
ತನಯನಿರಿದಸಿ ನಿನ್ನ ಮೈಯ ಹುಣ್ಣಾಗಿಸದೆ? ।
ಮನ ಸರ್ವಸಮವಿರಲಿ - ಮಂಕುತಿಮ್ಮ ॥ ೮೨೩ ॥
ನಮ್ಮ ಆಲೋಚನೆ ಉತ್ತಮವಾದರೂ, ಉತ್ತಮ ಕಾರ್ಯವನ್ನೇ ಮಾಡಲು ನಮ್ಮ ಹಟ ನಮ್ಮನ್ನು ಬಿಡುವುದಿಲ್ಲ. ಬಂಗಾರ ಮತ್ತು ಮಣಿಗಳಿಂದ ಪೋಣಿಸಲ್ಪಟ್ಟ ಸಂಕೋಲೆಯಾದರೂ ಅದು ನಮ್ಮ ದೇಹವನ್ನು ಬಂಧಿಸುವುದಿಲ್ಲವೇ? ನಮ್ಮ ಮಗನೇ ಆದರೂ, ಅವನು ಕತ್ತಿಯಿಂದ ನಮ್ಮನ್ನು ಇರಿದರೆ ಮೈ ಹುಣ್ಣಾಗುವುದಿಲ್ಲವೇ? ಹಾಗಾಗಿ ಮನ ಸರ್ವ ಸಮವಿರಲಿ ಎಂದು ಒಂದು ಉತ್ತಮ ವಿಚಾರವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
824
ಗುರಿಯನೈದದೊಡೊಮ್ಮೆ ಮರಳಿ ನೀನುಜ್ಜುಗಿಸು ।
ಕರಯುಕ್ತಿ ಪೆರ್ಚಿಯೋ, ದೈವ ಕರುಣಿಸಿಯೋ ॥
ಕರುಮಋಣ ಸಂಧಿಸಿಯೊ ಕೈಗೂಡಬಹುದು ಗುರಿ ।
ಪರವೆಯಿಡದುಜ್ಜುಗಿಸು - ಮಂಕುತಿಮ್ಮ ॥ ೮೨೪ ॥
ನಿನ್ನ ಕೃಷಿಯಿಂದ ಆಸೆಪಟ್ಟ ಗುರಿ ತಲುಪಲಾಗದಿದ್ದರೆ ಮತ್ತೆ ಪ್ರಯತ್ನ ಮಾಡು. ನಮ್ಮ ಪ್ರಯತ್ನ ಮತ್ತು ನಿರಂತರ ಕೃಷಿಯಿಂದಲೋ, ಆ ದೈವದ ಕರುಣೆಯಿಂದಲೋ ಅಥವಾ ನಮ್ಮ ಪೂರ್ವ ಕರ್ಮದ ಫಲವೆಂಬಂತೆಯೋ,ನಾವು ಹಿಡಿದ ಕೆಲಸ ಗುರಿ ತಲುಪಬಹುದು. ಆದರೆ ಇವಾವುದರ ಪರಿವೆಯೂ ಇಲ್ಲದೆ ನೀನು ನಿನ್ನ ಕೃಷಿಯನ್ನು ಮುಂದುವರೆಸು ಎಂದು ಬದುಕಿನಲ್ಲಿ ಆಸೆಪಟ್ಟ ಗುರಿಯನ್ನು ತಲುಪುವ ಸೂಕ್ತ ಮಾರ್ಗವನ್ನು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.