Art of life
825
—
828
825
ಕಲೆಗಳಲಿ ಪರಮಕಲೆ ಜೀವನದ ಲಲಿತಕಲೆ ।
ಕಲಿಸಲದನಳವಲ್ಲ ಬಾಹ್ಯಬೋಧನೆಯಿಂ ॥
ಒಲಿದೊಲಿಸಿಕೊಳುವ ಲೌಕಿಕನಯದ ಸೊಗಸ ನೀಂ ।
ತಿಳಿವುದೊಳಹದದಿಂದ - ಮಂಕುತಿಮ್ಮ ॥ ೮೨೫ ॥
ಜಗತ್ತಿನಲ್ಲಿರುವ ಎಲ್ಲಾ ಕಲೆಗಳಲ್ಲಿ ಅತೀ ಉತ್ತಮವಾದ ಕಲೆ ಎಂದರೆ ‘ಬದುಕುವ’ ಕಲೆ. ಇದನ್ನು ಹೊರ ಬೋಧನೆಯಿಂದ ಕಲಿಸಲು ಸಾಧ್ಯವಿಲ್ಲ. ನಾವು ಜಗತ್ತಿಗೆ ಒಲಿದು, ಜಗತ್ತನ್ನು ನಾವು ಒಲಿಸಿಕೊಳ್ಳುವುದೇ ಬದುಕಿನ ಸೊಗಸು. ಇದನ್ನು ನೀನು ನಿನ್ನ ಅಂತರಂಗದ ಮಂಥನದಿಂದ ಅರಿತುಕೋ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
826
ಸಂಗೀತಕಲೆಯೊಂದು, ಸಾಹಿತ್ಯಕಲೆಯೊಂದು ।
ಅಂಗಾಂಗ ಭಾವ ರೂಪಣದ ಕಲೆಯೊಂದು ॥
ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ ।
ಮಂಗಳೋನ್ನತ ಕಲೆಯೊ - ಮಂಕುತಿಮ್ಮ ॥ ೮೨೬ ॥
ಸಂಗೀತ, ಸಾಹಿತ್ಯ, ನಾಟ್ಯ ಮುಂತಾದವು ಒಂದೊಂದು ಕಲೆಗಳು. ನಮ್ಮ ಬದುಕನ್ನು ರೂಪಿಸುವ ನಮ್ಮ ಆಚಾರ ವಿಚಾರದಲ್ಲಿ ಈ ಕಲೆಗಳ ವಿಚಾರವು ಚರ್ಚೆಯಾದಲ್ಲಿ ಜೀವಿಸುವ ಕಲೆಯೂ ಅತ್ಯುತ್ತಮವಾಗುತ್ತದೆ ಎನ್ನುವ ವಿಚಾರವನ್ನು ನಮ್ಮ ಮುಂದೆ ಇಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
827
ಲೋಕದಲಿ ಭಯವಿರಲಿ, ನಯವಿರಲಿ, ದಯೆಯಿರಲಿ ।
ನೂಕುನುಗ್ಗುಗಳತ್ತ, ಸೋಂಕುರೋಗಗಳು ॥
ಸಾಕಿಸಲಹುವರುಮ್ ಅತ್ತಲೆ ನಿನಗೆ; ನಿನ್ನೆಲ್ಲ ।
ಲೋಕ ಮೂಲವು ನೋಡೊ - ಮಂಕುತಿಮ್ಮ ॥ ೮೨೭ ॥
ಜೀವಿಸುವ ಕಲೆಯನ್ನು ಮುಂದುವರೆಸುತ್ತಾ, ಬದುಕುವಾಗ ಭಯವಿರಲಿ, ನಡವಳಿಕೆಯಲ್ಲಿ ನಯವಿರಲಿ ಮತ್ತು ಸೃಷ್ಟಿಯ ಮಿಕ್ಕೆಲ್ಲದರಲ್ಲಿ ದಯೆ ಇರಲಿ ಎಂದು ಹೇಳುತ್ತಾ, ಜನಸಂದಣಿಯಿಂದ ಮತ್ತು ಅವರಿಂದ ನಿನಗೆ ಅಂಟಬಹುದಾದ ರೋಗಗಳಿಂದ, ಅಷ್ಟೇಕೆ, ಸಾಕಿ ಸಲುಹಿದವರಿಂದಲೂ ಸಾಧ್ಯವಾದಷ್ಟು ದೂರವಿರು,ನಿನ್ನ ಗಮನವೆಲ್ಲ ‘ ನೀನು ಎಲ್ಲಿಂದ ಬಂದೆ, ಏನು ತಂದೆ ಮತ್ತೆ ಮುಂದಕ್ಕೆ ಎಲ್ಲಿಗೆ ಮತ್ತು ಹೇಗೆ ಹೋಗಬೇಕು ಎನ್ನುವುದರಲ್ಲಿ ಎಂದು ಒಂದು ಎಚ್ಚರಿಕೆಯ ಮಾತನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
828
ಕಳವಳವ ನೀಗಿಬಿಡು, ತಳಮಳವ ದೂರವಿಡು ।
ಕಳೆ, ತಳ್ಳು ಗಲಭೆ ಗಾಬರಿಯ ಮನದಿಂದ ॥
ಅಲೆದಾಡುತಿರೆ ದೀಪ ಕಣ್ಗೆ ಗುರಿ ತಪ್ಪುವುದು ।
ತಿಳಿತಿಳಿವು ಶಾಂತಿಯಲಿ - ಮಂಕುತಿಮ್ಮ ॥ ೮೨೮ ॥
ಜೀವನದ ಕಲೆಯ ಪರಿಯನ್ನು ನಮಗರಿವಾಗಿಸಲು ತಿಳುವಳಿಕೆಯನ್ನು ನೀಡುತ್ತಾ, ಚಿಂತೆಯನ್ನು ಬಿಡು, ಆತಂಕವನ್ನು ದೂರತಳ್ಳು, ಗಾಬರಿಯನ್ನು ಕಡಿಮೆ ಮಾಡಿಕೋ ಮತ್ತು ಮನದಲ್ಲಿ ನಡೆಯುವ ಹೋರಾಟವನ್ನು ದೂರತಳ್ಳು, ಎಂದು ಹೇಳುತ್ತಾ ಒಂದು ಉದಾಹರಣೆಯನ್ನು ನೀಡಿ, ಬೆಳಕು ಒಂದೇ ಕಡೆ ಇದ್ದರೆ ಗುರಿಯನ್ನು ಸರಿಯಾಗಿ ನೋಡಬಹುದು, ಹಾಗಲ್ಲದೆ ಬೆಳಕು ಸರಿದಾಡುತ್ತಿದ್ದರೆ ಗುರಿಸಾಧನೆ ಸಾಧ್ಯವಿಲ್ಲ ಎಂದು ಮನಸ್ಸು ತಿಳಿಯಾಗಿದ್ದಲ್ಲಿ ಶಾಂತಿಯನ್ನು ಪಡೆಯಲು ಸಾಧ್ಯ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.