Kagga Logo

Dirt makes us conscious of cleanliness

829

833

829

ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ ।
ತಳದ ಕಸ ತೇಲುತ್ತ ಬಗ್ಗಡವದಹುದು ॥
ಕಲಕದದ್ದೆದೆ ಕೊಂಚ ಬಿಟ್ಟಿದ್ದೊಡದು ಮರಳಿ ।
ತಿಳಿಯಹುದು ಶಾಂತಿಯಲಿ - ಮಂಕುತಿಮ್ಮ ॥ ೮೨೯ ॥

ಮನಸ್ಸೆಂಬುದು ಒಂದು ಸರೋವರ ಅಥವಾ ಕೊಳವಿದ್ದಂತೆ. ಲೋಕದ ವಿಚಾರಗಳು ಅದರೊಳಕ್ಕೆ ಬಿದ್ದರೆ ತಳಗೆ ಅಡಗಿದ್ದ ಕಸ ಕದಡಿ ಹೋಗುತ್ತದೆ ಮತ್ತು ಬಗ್ಗಡವಾಗುತ್ತದೆ. ಮತ್ತೆ ಸ್ವಲ್ಪ ಹೊತ್ತು ಕದಡದೆ ಕಲಕದೆ ಇದ್ದರೆ, ಮತ್ತೆ ತಿಳಿಯಾಗುವುದು ಎಂದು ಮಾನಸ ಸರೋವರದ ವಿಚಾರವನ್ನು ನಮಗೆ ಅರುಹಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು.

830

ಕೊಳಕೆಂದು, ಹುಳುಕೆಂದು, ಹೇಸಿಗೆಯ ಹುಳುವೆಂದು ।
ಇಳೆಯೊಳಾವುದರೊಳಮಸಹ್ಯಪಡಬೇಡ ॥
ಬೆಲೆಯುಂಟು ಕೊಳೆಗಮೀ ಜೀವಸಾಮಾಗ್ರಿಯಲಿ ।
ಕೊಳೆ ಶುಚಿಖ್ಯಾಪಕವೊ - ಮಂಕುತಿಮ್ಮ ॥ ೮೩೦ ॥

"ನಿನ್ನ ಮನಸ್ಸು ತಿಳಿಯಾಗಿರಿಸಿಕೊಳ್ಳಬೇಕು ಎಂದು ನಿನಗೆ ಬೇಡವಾದದ್ದೆಲ್ಲ ‘ಕೊಳಕು, ಕುಲುಕು, ಹೇಸಿಗೆ, ಹುಳ’ ಎಂದು ಹೇಳುತ್ತಾ ಈ ಜಗತ್ತಿನಲ್ಲಿರುವಾವುದನ್ನೂ ಅಸಹ್ಯ ಪಟ್ಟುಕೊಳ್ಳಬೇಡ". ಜಗತ್ತಿನ ಜೀವನದ ಸಮಗ್ರತೆಯಲ್ಲಿ, ಸೃಷ್ಟಿಯ ಪ್ರತಿಯೊಂದು ವಸ್ತುವಿಗೂ ಒಂದು ಬೆಲೆಯುಂಟು. ಕೊಳೆ ನಮಗೆ ಶುಚಿಯನ್ನು ಜ್ಞಾಪಿಸುತ್ತಿರುತ್ತದೆ, ಎಂದು ಮಾನಸಿಕ ಸಮಭಾವದ ಮೂಲಕ ಶಾಂತಿಯನ್ನು ಸಾಧಿಸುವ ಪರಿಯನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

831

ತಳೆಯಲಾರನೆ ಬೊಮ್ಮ ಬೀಭತ್ಸರೂಪಗಳ? ।
ನಲಿಯಲಾರನೆ ತಿಪ್ಪೆರೊಚ್ಚು ನಾತದಲಿ? ॥
ಮಲವೇನೊ! ಹೊಲೆಯೇನೊ! ಜೀವಸಂಬಧವಲ ।
ಮಲಿನದಲಿ ನೆನೆ ಶುಚಿಯ - ಮಂಕುತಿಮ್ಮ ॥ ೮೩೧ ॥

ಆ ಪರಬ್ರಹ್ಮನು ಭಯಂಕರವಾದ ರೂಪಗಳನ್ನು ಧರಿಸಲಾರನೆ? ಅವನು ಹೊಲಸು ನಾರುವ ತಿಪ್ಪೆಗುಂಡಿಯಲ್ಲೂ ಸಂತಸಿಸಲಾರನೆ? ಬದುಕಿನ ಸಂಬಂಧದಲಿ ಮಲಿನವಾದದ್ದು, ಹೊಲಸಾದದ್ದು ಎಲ್ಲವೂ ಉಂಟು. ಮಲಿನತೆಯಲ್ಲಿ ಇದ್ದರೂ ಶುಚಿತ್ವವನ್ನು ನೀನು ಸದಾ ನೆನೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

832

ಗುಡಿಯ ಪೂಜೆಯೊ, ಕಥೆಯೊ, ಸೊಗಸುನೋಟವೊ, ಹಾಡೊ ।
ಬಡವರಿಂಗುಪಕೃತಿಯೊ, ಆವುದೋ ಮನದ ॥
ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ ।
ಬಿಡುಗಡೆಯೊ ಜೀವಕ್ಕೆ - ಮಂಕುತಿಮ್ಮ ॥ ೮೩೨ ॥

ಗುಡಿಯ ಪೂಜೆಯಿಂದಲೋ, ಪುರಾಣ ಪುಣ್ಯ ಕಥಾ ಶ್ರವಣದಿಂದಲೋ, ಮೈ ಮರೆತು ಸೊಗಸಾದ ಪ್ರಕೃತಿಯ ನೋಟವನ್ನು ನೋಡುವುದರಲ್ಲಿಯೋ, ದಯಾ ಭಾವದಿಂದ ದೀನಗರಿಗುಪಕಾರವನ್ನು ಮಾಡುವುದರಿಂದಲೋ, ಹೀಗೆ ಯಾವುದಾದರೂ ರೀತಿಯಲ್ಲಿ ಮನಸ್ಸಿನ ಚಂಚಲ ಬಡಿದಾಟವನ್ನು ನಿಲ್ಲಿಸಿ ನೆಮ್ಮದಿಯನ್ನು ಪಡೆಯಬಹುದಾದರೆ, ಅದೇ ‘ಜೀವ’ ಕ್ಕೆ ಮುಕ್ತಿ ಅಥವಾ ಬಂಧನದಿಂದ ಬಿಡುಗಡೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

833

ನಗುನಗುವ ಕಣ್ಗಳಿಗೆ ಹೊಗೆಯನೂದಲುಬೇಡ ।
ಜಗವ ಸುಡುಗಾಡೆನುವ ಕಟುತಪಸು ಬೇಡ ॥
ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ ।
ಮಿಗೆಚಿಂತೆ ತಲೆಹರಟೆ - ಮಂಕುತಿಮ್ಮ ॥ ೮೩೩ ॥

ನಗುನಗುತಾ ಇರುವ ಕಣ್ಣುಗಳಿಗೆ ಹೊಗೆಯನೂದ ಬೇಡ. ಈ ಜಗತ್ತು ಒಂದು ಸುಡುಗಾಡು, ಇದೇಕೆ ಬೇಕು ಎನ್ನುವ ಹಠವೂ ಬೇಡ. ಸಹಜವಾಗಿ ತಂದೆ ತಾಯಿಗಳ ಮುಂದೆ ನಡೆದು ನಲಿದಾಡುವ ಮಗುವಂತೆ ಜೀವಿಸು. ಮಿಕ್ಕೆಲ್ಲಾ ವಿಚಾರಗಳೂ ಕೇವಲ ‘ತಲೆಹರಟೆ ‘ ಎಂದು ಬಾಳುವ ರೀತಿಯ ಬಗ್ಗೆ ಒಂದು ಕಿವಿಮಾತನ್ನು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.