Kagga Logo

Fear of death

834

838

834

ಹೀಗೋ ಹಾಗೋ ಹೇಗೋ ಜನುಮಕಥೆ ಮುಗಿಯುವುದು ।
ಈಗಲೋ ಆಗಲೋ ಎಂ‌ದೋ ಮುಗಿಯುವುದು ॥
ಸಾಗಿಮುಗಿವುದು; ಮುಗಿದು ಮರೆವುದದೆ ನರಸುಕೃತ ।
ಭೂಗತಸ್ಥಿತಿ ಮುಕುತಿ - ಮಂಕುತಿಮ್ಮ ॥ ೮೩೪ ॥

ಹಾಗೋ ಹೇಗೊ ಹೇಗೆ ಒಂದು ರೀತಿಯಲ್ಲಿ ಹುಟ್ಟಿದವರೆಲ್ಲರ ಜನ್ಮದ ಕಥೆ ಮುಗಿಯುತ್ತದೆ. ಈಗಲೇ ಆಗಬಹುದು, ಯಾವಾಗಲೋ ಅಥವಾ ಇನ್ಯಾವಾಗಲೋ ಆಗಬಹುದು. ಅಂತೂ ಇಂತೂ ಬದುಕು ಸಾಗಿ ಖಂಡಿತವಾಗಿಯೂ ಮುಗಿಯುತ್ತದೆ, ಮುಗಿದು ಈ ಜಗತ್ತು ಆ ವ್ಯಕ್ತಿಯನ್ನು ಮರೆಯುತ್ತದೆ. ಹಾಗೆ ಮರೆತುಹೋಗುವುದೇ ಮನುಷ್ಯ ಪಡೆದುಕೊಂಡು ಬಂದಂತಹ ಪುಣ್ಯ. ಮಣ್ಣಲ್ಲಿ ಮಣ್ಣಾಗಿಹೋಗುವುದೂ ಸಹ ಒಂದು ರೀತಿಯ ಮುಕ್ತಿಯೇ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

835

ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ ।
ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ॥
ಸಾತ್ತ್ವಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? ।
ಸತ್ರ ಹೊಸದಿಹುದು ನಡೆ - ಮಂಕುತಿಮ್ಮ ॥ ೮೩೫ ॥

ಸಾವಿನ ಭಯವೇಕೆ? ಈ ಸಾವು ಎಂಬುದು ನಮ್ಮನ್ನು ಹೊಸ ಹೊಸ ಪ್ರದೇಶಗಳನ್ನು ತೋರಿಸುವ, ನಮ್ಮ ಮಿತ್ರ. ಹೊಸ ಸ್ಥಳದಲ್ಲಿ ಹೊಸ ಚಿತ್ರವಿರುತ್ತದೆ. ಈ ಜನ್ಮದಲ್ಲಿ ಸಾತ್ವಿಕನಾಗಿ ಬಾಳಿದವನಿಗೆ, ಮುಂದಿನ ಬಾಳು ಇನ್ನಷ್ಟು ಸುಂದರವಾಗಿರುತ್ತದೆಂಬ ಭಾವದಿಂದ, ಮೃತ್ಯುವಿನ ಭಯವಿರಬೇಕಾಗಿಲ್ಲ. ಅಲ್ಲಿ ಎಲ್ಲವೂ ಹೊಸದಾಗಿರುತ್ತದೆ, ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

836

ಬಹುರಹಸ್ಯವೊ ಸೃಷ್ಟಿ, ಬ್ರಹ್ಮರಹಸ್ಯವೊ ಜೀವ ।
ಅಹುದದಲ್ಲವಿದೆಂಬ ವಾದ ಬರಿ ಹರಟೆ ॥
ಗುಹೆಯೊಳಿಹುದೆಲ್ಲ ತತ್ತ್ವಗಳ ತತ್ತ್ವದ ಮೂಲ ।
ಬಹಿರಂತರ ರಹಸ್ಯ - ಮಂಕುತಿಮ್ಮ ॥ ೮೩೬ ॥

ಸೃಷ್ಟಿ ಬಹಳ ರಹಸ್ಯ. ಜೀವವೂ ಬಹಳ ರಹಸ್ಯದಿಂದ ಕೂಡಿದೆ. ಇದು ಹೌದು, ಅದು ಆಲ್ಲ, ಇದು ಇರಬಹುದು ಅಥವಾ ಅದೂ ಇರಬಹುದು ಎಂಬ ವಿಚಾರಗಳು ಕೇವಲ ವ್ಯರ್ಥ ಮಾತುಗಳು. ಒಳಹೊರಗುಗಳ ರಹಸ್ಯದ ಮೂಲವೇ ನಮ್ಮ ಅಂತರಂಗದ ಒಳಪದರಗಳಲ್ಲಿ ಅಡಗಿದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

837

ಎತ್ತೆತ್ತ ನೋಡಲುಂ ಗುಪ್ತ ಭೂತಗಳಯ್ಯ ।
ಕತ್ತಲೆಯೊಳಾಡುತಿಹ ದೆವ್ವಗಳ ಸುಳಿವು ॥
ಮುತ್ತಿ ಮುಸುಕಿಹುದು ಜೀವನದ ರಹಸ್ಯವೊಂದು ।
ಬೆತ್ತಲೆಯದಹುದೆಂತು? - ಮಂಕುತಿಮ್ಮ ॥ ೮೩೭ ॥

"ಎಲ್ಲಿ ನೋಡಿದರಲ್ಲಿ ಬಚ್ಚಿಟ್ಟುಕೊಂಡಿರುವ ಭೂತಗಳು. ಕತ್ತಲೆಯಲ್ಲಿ ಓಡಾಡುತಿಹ ದೆವ್ವಗಳು. ‘ಜೀವ’ ವನ್ನು ರಹಸ್ಯವೊಂದು ಮುಸುಕಿದಂತಿದೆ. ಮುಸುಕು ತೊಲಗಿ ನಮಗೆ ಆ ರಹಸ್ಯ ತೋರುವುದು ಹೇಗೆ? " ಎನ್ನುತ್ತಾ ಒಂದು ಅದ್ಭುತ ವಿಚಾರವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

838

ಮುಸುಕಿಹುದು ಹುಟ್ಟಳಿವುಗಳ ಕಾರಣವ ಮಬ್ಬು ।
ಮಸಕಿನಲಿ ಹುದುಗಿಹುವು ಮೋಹಮೂಲಗಳು ॥
ನಿಶಿ ಮುಚ್ಚಿಹುದು ದಿನಪಚಂದಿರರ ಹುಟ್ಟೆಡೆಯ ।
ಮಿಸುಕುವ ರಹಸ್ಯ ನೀಂ - ಮಂಕುತಿಮ್ಮ ॥ ೮೩೮ ॥

ಹುಟ್ಟು ಸಾವುಗಳ ಕಾರಣಗಳು ನಿಚ್ಚಳವಾಗಿಲ್ಲದೆ ಕವಿಯಲ್ಪಟ್ಟಿವೆ. ಈ ಜಗತ್ತಿನ ಮೇಲೆ ಮೋಹದ ಕಾರಣವೂ ಸಹ ಕವಿಯಲ್ಪಟ್ಟಿದೆ. ಸೂರ್ಯ ಚಂದ್ರರ ಉಗಮಸ್ಥಾನದ ಜ್ಞಾನವೂ ನಮಗಿಲ್ಲ. ಹಾಗೆಯೇ ನೀನೂ ಸಹ ಇವುಗಳಿಗೆಲ್ಲಾ ಸ್ಪಂದಿಸುವ ಒಂದು ರಹಸ್ಯವೇ, ಎಂದು ಸೃಷ್ಟಿಯ ರಹಸ್ಯಗಳ ಬಗ್ಗೆ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.