Under current
839
—
843
839
ಆವ ಗಾಳಿಯದಾವ ಧೂಳ್ಕಣವ ಪೊತ್ತಿಹುದೊ! ।
ಆವ ಧೂಳಿನೊಳಾವ ಚೈತನ್ಯಕಣವೋ! ॥
ಜೀವವಿಂತಜ್ಞಾತ ಸೂತ್ರದಾಟದ ಬೊಂಬೆ ।
ಭಾವಿಸಾ ಸೂತ್ರಗಳ - ಮಂಕುತಿಮ್ಮ ॥ ೮೩೯ ॥
ಯಾವ ಗಾಳಿಯು ಯಾವ ಧೂಳಿನ ಕಣವನ್ನು ಹೊತ್ತು ತರುತ್ತದೋ, ಯಾವ ಧೂಳಿನ ಕಣದಲ್ಲಿ ಯಾವ ಚೈತನ್ಯವು ಅಡಗಿದೆಯೊ!!!! ಜೀವವೂ ಸಹ ಹೀಗೆಯೇ ಯಾವುದೊ ಒಂದು ಅಜ್ಞಾತ ಶಕ್ತಿಯ ಕೈಯಲ್ಲಿನ ಸೂತ್ರದ ಆಟಕ್ಕೆ ಬೊಂಬೆಯಂತೆ ಕುಣಿಯುತ್ತದೆ. ಆ ಸೂತ್ರಗಳನ್ನು ಭಾವಿಸು ಎಂದು ಹೇಳುತ್ತಾ ಪರಮ ಚೈತನ್ಯವು ಹೇಗೆ ಇಡೀ ಜಗತ್ತನ್ನು ನಡೆಸುತ್ತಿದ್ದರೂ, ತನ್ನ ಕ್ರಿಯೆಯನ್ನು ಸ್ಪಷ್ಟವಾಗಿ ತೋರಗೊಡದೆ ನಿಗೂಢವಾಗಿಟ್ಟಿರುವ ವಿಷಯವನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
840
ಭುಕ್ತಿ ನಿನಗೆಲ್ಲಿಯದು? ಭತ್ತ ತಾನೆಲ್ಲಿಯದೊ! ।
ಎತ್ತಲಿನ ಗೊಬ್ಬರವೊ! ಎತ್ತಲಿನ ನೀರೋ! ॥
ಭಾಕ್ತವಾರಾರ ದುಡಿತದಿನೊ ನಿನಗಾಗಿಹುದು! ।
ಗುಪ್ತಗಾಮಿನಿಯೊ ಋಣ - ಮಂಕುತಿಮ್ಮ ॥ ೮೪೦ ॥
ನೀನುಣ್ಣುವ ಆಹಾರ ನಿನಗೆಲ್ಲಿಂದ ಸಿಕ್ಕಿತು? ಆ ಆಹಾರದಲ್ಲಿನ ಅನ್ನದ ಅಕ್ಕಿಯ ಬತ್ತ ಎಲ್ಲಿಂದ ಬಂದಿತೋ? ಆ ಬತ್ತವ ಬೆಳೆಯಲು ಹಾಕಿದ ಗೊಬ್ಬರವೆಲ್ಲಿಯದೋ? ಮತ್ತು ಆ ಬೆಳೆಗೆ ಹನಿಸಿದ ನೀರು ಎಲ್ಲಿಯದೋ? ಆ ಬೆಳೆಯನ್ನು ಬೆಳೆಸಲು ಯಾರ್ಯಾರ ಶ್ರಮ ಸೇರಿದೆಯೋ? ಇವ್ಯಾವುದೂ ನಮಗೆ ತಿಳಿಯುವುದಿಲ್ಲ ಮತ್ತು ಅರ್ಥವೂ ಆಗುವುದಿಲ್ಲ. ಇದೆಲ್ಲ ನಾವು ಪಡೆದುಕೊಂಡು ಬಂದಂತಹ, ಆದರೆ ‘ಅಭೇದನೀಯ ರಹಸ್ಯ ಋಣ’ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
841
ನಿನ್ನೆಂಜಲಗುಳಾವ ಕಾಲುವೆಯ ಸೇರುವುದೊ! ।
ಮಣ್ಣಾವುದದರಿಂದೆ ಗರ್ಭವತಿಯಹುದೋ! ॥
ಅನ್ನವದರಿಂದಾರ್ಗೊ! ಲೋಕಕವರಿಂದೇನೊ! ।
ಬಣ್ಣಿಸುವರಾರದನು? - ಮಂಕುತಿಮ್ಮ ॥ ೮೪೧ ॥
ನೀನುಂಡು ಕೈ ತೊಳೆವ ನೀರು ಯಾವ ಕಾಲುವೆಯ ಸೇರುವುದೋ? ಆ ಕಾಲುವೆಯ ನೀರು ಯಾವ ಭೂಮಿಯನ್ನು ತಣಿಸುವುದೋ? ಹಾಗೆ ತಣಿದ ಯಾವ ಭೂಮಿ ಪೈರ ತಳೆಯುವುದೋ? ಆ ಪೈರಿಂದಾಗುವ ಕಾಳಿನ ಆಹಾರ ಯಾರ ಉದರವ ಸೇರುವುದೋ? ಆ ಕಾಳ ತಿಂದವರಿಂದ ಲೋಕಕ್ಕೇನು ಮಾಡುವರೋ? ಎಂಬ ಪ್ರಶ್ನೆಗಳಿಗೆ ನಮಗೆ ಎಂದಿಗೂ ಉತ್ತರ ಸಿಗಲಾರದು ಎಂದು ಜಗತ್ತಿನಲ್ಲಿ ನಡೆಯುವ ವಿಧ್ಯಮಾನಗಳ ನಿಗೂಢತೆಯನ್ನು ಬಣ್ಣಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
842
ಆವ ನೆಲದಲಿ ಮೇದೊ, ಆವ ನೀರನು ಕುಡಿದೊ ।
ಆವು ಹಾಲ್ಗರೆವುದದನಾರು ಕುಡಿಯುವನೋ! ॥
ಆವ ಬಲವದರಿನೊಗೆದೇಂಗೆಯ್ಸುವುದೊ ಜಗಕೆ! ।
ಭಾವಿಸಾ ಋಣಗತಿಯ - ಮಂಕುತಿಮ್ಮ ॥ ೮೪೨ ॥
ಯಾವುದೋ ನೆಲದಲ್ಲಿ ಬೆಳೆದ ಹುಲ್ಲನ್ನು ತಿಂದು ಯಾವುದೋ ಕೆರೆಯ ಅಥವಾ ತೊರೆಯ ನೀರನ್ನು ಕುಡಿದು ಒಂದು ಹಸು ಹಾಲನ್ನು ನೀಡುತ್ತದೆ. ಆ ಹಾಲನ್ನು ಯಾರು ಕುಡಿಯುವರೋ ಮತ್ತು ಹಾಗೆ ಕುಡಿದವರಿಂದ ಎಂತಹ ಕಾರ್ಯವಾಗುತ್ತದೆಯೊ ಮತ್ತು ಆ ಕಾರ್ಯದಿಂದ ಈ ಜಗತ್ತಿಗೆ ಏನುಪಯೋಗವೋ ಕಂಡವರಾರು? ಇದು ಋಣಗತಿ, ಇದನ್ನು ಭಾವಿಸು ಎಂದು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
843
ಸೇರಿರ್ಪುವುಸಿರುಸಿರುಗಳೊಳೆಷ್ಟೊ ಜೀವಾಣು ।
ಹಾರುತಿಹುವೆಷ್ಟೊ ಚೇತನ ಧೂಳುಕಣದೊಳ್ ॥
ಪ್ರಾರಬ್ಧಗತಿಯ ನಿಶ್ಚಯದಿ ತಿಳಿದವರಿಲ್ಲ ।
ಆ ರಹಸ್ಯಕ್ಕೆರಗೊ! - ಮಂಕುತಿಮ್ಮ ॥ ೮೪೩ ॥
ನಾವು ಎಳೆದುಕೊಳ್ಳುವ ಪ್ರತೀ ಉಸಿರಿನಲ್ಲೂ ಬಹಳಷ್ಟು ಜೀವಾಣುಗಳು ಸೇರಿರುತ್ತವೆ. ನಮ್ಮ ಸುತ್ತಲಿನ ಧೂಳಲ್ಲಿ ಚೈತನ್ಯದ ಅದೆಷ್ಟು ಕಣಗಳಿವೆಯೋ!! ಯಾವುದು, ಹೇಗೆ, ಎಲ್ಲಿಂದ ಬಂದು ನಮ್ಮೊಳಕ್ಕೆ ಸೇರಿಕೊಳ್ಳುತ್ತದೆ ಎಂದು ಖಂಡಿತವಾಗಿ ಯಾರಿಂದಲೂ ಹೇಳಲಾಗುವುದಿಲ್ಲ. ಇದೊಂದು ರಹಸ್ಯ ಮತ್ತು ಆ ರಹಸ್ಯಕ್ಕೆ ನಮಿಸು ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.