Heart of life
814
—
819
814
ನ್ಯಾಯಾಧಿಪತಿ ತನ್ನ ಮತಿ ಮನಸುಗಳನೆಲ್ಲ ।
ಸ್ವೀಯಲಾಭಸ್ಮರಣೆಯುಳಿದು ವಿವಾದಗಳಾ ॥
ದಾಯನಿರ್ಣಯಕೆ ಯೋಜಿಸುವಂತೆ, ನೀಂ ಜಗದ ।
ಶ್ರೇಯಸ್ಸಿಗುಜ್ಜುಗಿಸು - ಮಂಕುತಿಮ್ಮ ॥ ೮೧೪ ॥
ನಿರ್ಮಮಕಾರದ, ನಿರ್ಮೋಹದ ಮತ್ತು ನಿರಹಂಕಾರದ ಸ್ಥಿತಿ ಬಹಳ ಉತ್ತಮವಾದ ಸ್ಥಿತಿ ಎಂದು ಹಿಂದಿನ ಮುಕ್ತಕದಲ್ಲಿ ಉಲ್ಲೇಖವಾಗಿದೆ. ಆದರೆ ಆ ಸ್ಥಿತಿಯನ್ನು ತಲುಪುವುದು ಹೇಗೆ ಎಂಬುದನ್ನು ಈ ಮುಕ್ತಕದಲ್ಲಿ ಉಲ್ಲೇಖಿಸುತ್ತಾ ಮಾನ್ಯ ಗುಂಡಪ್ಪನವರು,ನ್ಯಾಯಾಧಿಪತಿಯು ನ್ಯಾಯ ವಿತರಣೆ ಮಾಡುವಾಗ, ಹೇಗೆ ತನ್ನ ಸ್ವಂತ ಲಾಭವನ್ನು ಬದಿಗಿಟ್ಟು ತನ್ನ ಮನಸ್ಸು ಮತ್ತು ಬುದ್ಧಿಗಳನ್ನು, ಕೇವಲ ದಾವೆ ಹೂಡಿದವರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನಮಾಡಲು ಉಪಯೋಗಿಸುತ್ತಾನೋ ಹಾಗೆ, ಜಗತ್ತಿನಲ್ಲಿ ಜೀವಿಸುವಾಗ ನಿನ್ನ ಸ್ವಂತದ ಹಿತವನ್ನು ಬದಿಗಿಟ್ಟು ಜಗತ್ತಿನ ಹಿತಕ್ಕಾಗಿ ದುಡಿ, ಎಂದು ಸೂಚಿಸಿದ್ದಾರೆ.
815
ಪೌರುಷಾಶ್ವಕ್ಕಾಶೆ ಛಾಟಿ, ಭಯ ಕಡಿವಾಣ ।
ಹಾರಾಟವದರದಾ ವೇಧೆಗಳ ನಡುವೆ ॥
ಧೀರನೇರಿರೆ, ಹೊಡೆತ ಕಡಿತವಿಲ್ಲದೆ ಗುರಿಗೆ ।
ಸಾರುವುದು ನೈಜದಿಂ - ಮಂಕುತಿಮ್ಮ ॥ ೮೧೫ ॥
ಹುಮ್ಮಸ್ಸಿನಿಂದ ಶಕ್ತಿಯುತವಾಗಿ ಮುನ್ನುಗ್ಗುವ ಮನಸ್ಸೆಂಬ ಕುದುರೆಗೆ ಆಸೆಯೇ ಚಾವಟಿ ಮತ್ತು ಭಯವೇ ಕಡಿವಾಣ. ಬದುಕಿನಲ್ಲಿ ಬರುವ ಸುಖ ಸಂತೋಷಗಳು,ನೋವು ವೇದನೆಗಳ ನಡುವೆ ಇದರ ಹಾರಾಟ. ಆದರೆ ಧೀರನಾದವನು, ವಿವೇಕವಂತನಾದವನು ಆ ಕುದುರೆಯನ್ನು ಏರಿದರೆ, ಈ ಚಾವಟಿಯ ಹೊಡೆತ ಅಥವಾ ಕಡಿವಾಣದ ಹಿಡಿತಗಳಿಲ್ಲದೆ, ತನ್ನ ಗುರಿಯತ್ತ ಸಹಜವಾಗಿ ಸಾಗುವುದು ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
816
ಆರೋಗ್ಯಭಾಗ್ಯವನು ಮನಕೆ ತನುಗೆಂತಂತೆ ।
ಹಾರಯಿಸುವೊಡೆ ಹಲವು ಸರಳ ನೀತಿಗಳ ॥
ಧಾರಯಿಸು ನೆನಸಿನಲಿ ನುಡಿಯಲ್ಲಿ ನಡತೆಯಲಿ ।
ಪಾರಾಗು ಸುಳಿಯಿಂದ - ಮಂಕುತಿಮ್ಮ ॥ ೮೧೬ ॥
ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಸರಳ ನೀತಿಗಳನ್ನು ಪಾಲಿಸುವಂತೆ, ಕೆಲವು ಸರಳ ಸೂತ್ರಗಳನ್ನು ಪಾಲಿಸುವುದರಿಂದ ಮನದ ಆರೋಗ್ಯವನ್ನೂ ಬದುಕಿನಲ್ಲಿ ಸುಳಿಯಂತಹ ಸ್ಥಿತಿಗಳಲ್ಲಿ ಸಿಲುಕಿಕೊಳ್ಳದೆ ಪಾರಾಗು ಎಂದು ಸೂಚನೆಯನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
817
ಮರವ ನೀನರಿಯುವೊಡೆ ಬುಡವ ಕೀಳಲು ಬೇಡ ।
ತರಿಯಬೇಡೆಲೆಕಡ್ಡಿಗಳ ಪರೀಕ್ಷಣಕೆ ॥
ಎರೆ ನೀರ, ಸುರಿ ಗೊಬ್ಬರವ, ಕೆದಕು ಪಾತಿಯನು ।
ನಿರುಕಿಸುತ ತಳಿರಲರ - ಮಂಕುತಿಮ್ಮ ॥ ೮೧೭ ॥
ಒಂದು ಮರವನ್ನು ಅರಿಯಲು ಅದರ ಬುಡವನ್ನು ಕೀಳಬೇಡ. ಅದರ ಎಲೆ ಮತ್ತು ಕಡಿಗಳನ್ನು ಪರೀಕ್ಷಿಸಲೆಂದು ತರಿಯಬೇಡ. ಬದಲಾಗಿ ಅದಕ್ಕೆ ನೀರನ್ನು ಹಾಯಿಸು, ಅದರ ಪಾತಿಯನ್ನು ಕೆದಕಿ ಸ್ವಲ್ಪ ಗೊಬ್ಬರವನ್ನು ಕೊಟ್ಟು ಅದರಲ್ಲಿ ಚಿಗುರುವ ಎಲೆಗಳ ಮೇಲಿಂದ ಬೀಸುವ ತಂಪಾದ ಮಂದಮಾರುತವನ್ನು ನಿರೀಕ್ಷಿಸು, ಎಂದು ಹೇಳುತ್ತಾ ಈ ಜಗತ್ತೆಂಬ ಹೂದೋಟದಲ್ಲಿ ನಾವು ಹೇಗಿರಬೇಕು ಎನ್ನುವುದಕ್ಕೆ ಒಂದು ದೃಷ್ಟಾಂತದ ಮೂಲಕ ವಿವರಿಸಿದ್ದಾರೆ.
818
ವನಜಂತುಗಳ ಸಸ್ಯಮೂಲಿಕಾಹಾರದಿಂ ।
ಗುಣವನರಿತವರಾದಿವೈದ್ಯರೌಷಧದೊಳ್ ॥
ಒಣತರ್ಕಗಳಿನೇನು? ಜೀವನದ ವಿವಿಧರಸ- ।
ದನುಭವದಿ ತತ್ತ್ವವೆಲೊ - ಮಂಕುತಿಮ್ಮ ॥ ೮೧೮ ॥
ಈ ಜಗತ್ತಿನಲ್ಲಿ ವನ್ಯ ಮೃಗಗಳು ತಮ್ಮ ಅನಾರೋಗ್ಯದ ಕಾರಣವನ್ನು ತಾವೇ ಅರಿತು ತಮಗೆ ಬೇಕಾದ ಔಷಧೀಯ ಗಿಡ ಮೂಲಿಕೆಗಳನ್ನು ತಾವೇ ಕಂಡುಗೊಳ್ಳುವ ಗುಣವನ್ನು ಅನುಸರಿಸಿ ಮನುಕುಲದ ಆದಿ ವೈದ್ಯರುಗಳು ಔಷಧಿಗಳನ್ನು ಕಂಡುಕೊಂಡರು. ಹಾಗೆಯೇ, ಒಣತರ್ಕಮಾಡದೆ ಬದುಕಿನ ಅನುಭವದಿಂದ ಜೀವನದ ತತ್ವದ ರಸಾನುಭವವನ್ನು ಪಡೆಯಬೇಕು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
819
ಕಡಿದೊಡೆ ಪರೀಕ್ಷೆಗುಳಿವುವು ಸತ್ತನಾರುಗಳು ।
ಕಡಿಯದಿರೆ ಮರದಿ ಪರಿಯುವುದು ಜೀವರಸ ॥
ಬಿಡುವಮ್ ಈ ಬಾಳ್ ಅದೇಕೆಂಬ ಚರ್ಚೆಯ; ನಾವು ।
ದುಡಿವಮ್ ಅದು ಪೆಂಪುಗೊಳೆ - ಮಂಕುತಿಮ್ಮ ॥ ೮೧೯ ॥
ಮುಕ್ತಕ ೮೧೭ನ್ನು ಮುಂದುವರೆಸಿ ಮಾನ್ಯ ಗುಂಡಪ್ಪನವರು, ಮರದ ಕೊಂಬೆ ರೆಂಬೆಗಳನ್ನು ಕಡಿದರೆ ನಿನಗೆ ಸಿಗುವುದು ಕೇವಲ ಜೀವಕಳೆದುಕೊಂಡ ನಾರುಗಳು, ಬೇರುಗಳು. ಕಡಿಯದಿದ್ದರೆ ಅವುಗಳಲ್ಲಿ ಜೀವರಸ ಹರಿಯುವುದು. ಈ ಬಾಳೂ ಸಹ ಹೀಗೆಯೇ. ಇದು ಏಕೆ? ಏನು? ಹೀಗೇಕೆ? ಹಾಗೇಕಲ್ಲ? ಮುಂತಾದ ಚರ್ಚೆಗೆ ಎಡೆಕೊಡದೆ ಬದುಕನ್ನು ವೃದ್ಧಿಗೊಳಿಸುವ ಮತ್ತು ಅಭಿವೃದ್ಧಿಗೊಳಿಸುವ ಕೆಲಸದಲ್ಲಿ ತೊಡಗಿದರೆ ಒಳ್ಳೆಯದು, ಎಂದಿದ್ದಾರೆ ಈ ಮುಕ್ತಕದಲ್ಲಿ.