Purifying oneself
904
—
908
904
ವಹಿಸು ಕೆಲ ಭಾರಗಳ; ಸಹಿಸು ಕೆಲ ನೋವುಗಳ ।
ಪ್ರಹರಿಸರಿಗಳನನಿತು ಯುಕ್ತಗಳನರಿತು ॥
ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು ।
ವಿಹರಿಸಾತ್ಮಾಲಯದಿ- ಮಂಕುತಿಮ್ಮ ॥ ೯೦೪ ॥
ಬದುಕಿನಲ್ಲಿ ಕೆಲವು ಭಾರಗಳನ್ನು ಹೊತ್ತುಕೋ, ಕೆಲವು ನೋವುಗಳನ್ನು ಸಹಿಸಿಕೋ, ನಿನ್ನ ಶತ್ರುಗಳನ್ನು ಆದಷ್ಟು ಬಗ್ಗುಬಡಿ, ಬದುಕುವಾಗ ಯುಕ್ತ-ಅಯುಕ್ತಗಳನ್ನು ಅರಿತು, ನಿನಗೆ ವಹಿಸಿದ ಈ ಭೂಮಿಯ ಮೇಲಿನ ನಾಟಕದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ನಿನ್ನ ಪಾತ್ರವನ್ನು ವಹಿಸು. ಹಾಗೆ ಮಾಡುವಾಗ ನೀನು ಆತ್ಮದ ಆಲಯದಲ್ಲಿ ವಿಹರಿಸು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
905
ಶ್ವಾನ ತಿಪ್ಪೆಯ ಮೇಲೆ ಮಲಗಿರಲು ಪೂರ್ವಿಕ- ।
ಜ್ಞಾನ ಪಶ್ಚಾತ್ತಾಪ ಶುಭಚಿಂತೆಯಂತೆ ॥
ಏನೋ ವಾಸನೆ ಬೀಸಲದು ಹಾರಿ ದುಮುಕುವುದು ।
ಮಾನವನ ಮನಸಂತು - ಮಂಕುತಿಮ್ಮ ॥ ೯೦೫ ॥
ಈ ಮುಕ್ತಕದಲ್ಲಿ ಮಾನವನ ಮನಸ್ಸನ್ನು ನಾಯಿಗೆ ಹೋಲಿಸಿದ್ದಾರೆ. ಇಲ್ಲಿ ನಾಯಿಯ ಉಪಮೆಯನ್ನು ಕೊಟ್ಟು, ತಿಪ್ಪೆಗುಂಡಿಯ ಮೇಲೆ ಮಲಗಿದ ನಾಯಿ ಕಣ್ಣ ಮುಚ್ಚಿ ತನ್ನ ಪೂರ್ವ ಜ್ಞಾನವನ್ನು ಕೆದಕಿ ಅಲ್ಲಿ ಆದ ತಪ್ಪುಗಳನ್ನು ಕುರಿತು ಪಶ್ಚಾತ್ತಾಪ ಪಡುತ್ತಿರಲು, ಅದಕ್ಕೆ ಯಾವುದಾದರೂ ವಸ್ತುವಿನ ವಾಸನೆ ಬರಲು ತಕ್ಷಣ ತನ್ನೆಲ್ಲಾ ಆಲೋಚನೆ ಪಶ್ಚಾತ್ತಾಪಗಳನ್ನು ತೊರೆದು ‘ಚಂಗೆಂದು ‘ ಆ ವಾಸನೆ ಬಂದ ಕಡೆಗೆ ಹಾರುತ್ತದೆಂದು ಹೇಳಿ, ಮಾನವನ ಮನಸ್ಸೂ ಸಹ ಹಾಗೆಯೇ ಎಂದು ಉಲ್ಲೇಖಿಸಿದ್ದಾರೆ, ಮಾನ್ಯ ಗುಂಡಪ್ಪನವರು.
906
ತತ್ತ್ವಸಾಕ್ಷಾತ್ಕಾರ ಚಿತ್ತಶುದ್ಧಿಯಿನಹುದು ।
ಚಿತ್ತಶೋಧನೆ ಮತಿಚಮತ್ಕಾರವಲ್ಲ ॥
ಬಿತ್ತರದ ಲೋಕಪರಿಪಾಕದಿಂ, ಸತ್ಕರ್ಮ ।
ಸಕ್ತಿಯಿಂ ಶುದ್ಧತೆಯೊ - ಮಂಕುತಿಮ್ಮ ॥ ೯೦೬ ॥
ತತ್ವದ ಅರಿವು ಕೇವಲ ಚಿತ್ತದ ಶುದ್ಧಿಯಿಂದ ಆಗುತ್ತದೆ. ಚಿತ್ತದಲ್ಲಿನ ಕಶ್ಮಲಗಳನ್ನು ತೆಗೆಯುವುದು ಕೇವಲ ಬುದ್ಧಿವಂತಿಕೆಯ ಕೆಲಸವಲ್ಲ. ಆಸಕ್ತಿಯಿಂದ ಸತ್ಕರ್ಮಗಳನ್ನು ಮಾಡುತ್ತಾ ಬದುಕಿನ ಅನುಭವವನ್ನು ಪಡೆದು ಮತ್ತು ಆ ಅನುಭವದ ಸಾರವನ್ನು ಅಂತರಂಗಕ್ಕೆ ‘ಪಾಕ’ದಂತೆ ಇಳಿಸಿಕೊಂಡಾಗ, ಚಿತ್ತದ ಶುದ್ಧತೆ ಸಿದ್ಧಿಸುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
907
ತನುರುಜೆಗೆ ಪಥ್ಯಾನ್ನ, ಬಾಯ ಚಪಲಕ್ಕಲ್ಲ ।
ಮನದ ಶಿಕ್ಷೆ ಲೋಕ, ಮಮಕಾರಕಲ್ಲ ॥
ಗುಣಚರ್ಯೆ ವಿಶ್ವಸಮರಸಕೆ, ಕಾಮಿತಕಲ್ಲ ।
ಮುನಿವೃತ್ತಿ ಸೂತ್ರವಿದು - ಮಂಕುತಿಮ್ಮ ॥ ೯೦೭ ॥
ದೇಹದ ಆರೋಗ್ಯವನ್ನು ಕಾಪಾಡುವುದಕ್ಕಾಗಿ ಪಥ್ಯದ ಆಹಾರ, ನಮ್ಮ ಬಾಯಿ ಚಪಲವನ್ನು ತೀರಿಸಲು ಅಲ್ಲ. ಈ ಲೋಕದ ಬದುಕು ನಮಗೆ ಜೀವನದಲ್ಲಿ ಪಾಠ ಕಲಿಸಲಿಕ್ಕಾಗಿಯೇ ಹೊರತು, ಮಮಕಾರವನ್ನು ಬೆಳೆಸಿಕೊಳ್ಳಲು ಅಲ್ಲ. ನಮ್ಮ ಗುಣ ಮತ್ತು ನಮ್ಮ ನಡವಳಿಕೆ, ಜಗತ್ತಿನಲ್ಲಿ ನಮ್ಮನ್ನು ಸಮರಸದೊಂದಿಗೆ ಬದುಕಲೇ ವಿನಃ, ನಮ್ಮ ಸ್ವಂತದ ಆಸೆಗಳನ್ನು ಈಡೇರಿಸಿಕೊಳ್ಳಲು ಅಲ್ಲ. ಹೀಗೆ ಬದುಕುವುದೇ ಋಷಿಗಳಂತೆ ಬದುಕುವುದಕ್ಕೆ ಸೂತ್ರ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
908
ತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ ।
ನಿಜಕುಕ್ಷಿ ಚಿಂತೆಯೇಂ ಮೊದಲು ಮನೆತಾಯ್ಗೆ? ॥
ಭುಜಿಪ ಪತಿಸುತರೊಪ್ಪು ತುಪ್ಪವವಳೂಟಕ್ಕೆ ।
ಭಜಿಸು ನೀನಾ ವ್ರತವ- ಮಂಕುತಿಮ್ಮ ॥ ೯೦೮ ॥
ತನ್ನಲಿರುವುದನ್ನು ಪರರಿಗೆ ನೀಡಿ ತಾನು ಉಣ್ಣುವವನೇ ಈ ಜಗತ್ತಿಗೆ ಯಜಮಾನನಂತೆ. ತಾಯಿಗೆ ತನ್ನ ಹಸಿವಿನ ಚಿಂತೆ ಇರುತ್ತದೇನು? ತನ್ನ ಪತಿ ಮತ್ತು ಮಕ್ಕಳು ಭುಜಿಸಿ ತೃಪ್ತಿಪಟ್ಟರೆ ಅವಳಿಗದೇ ತುಪ್ಪದೂಟದ ಸಮಾನ. ಅಂತಹ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವ ವ್ರತವನ್ನು ನೀನೂ ಸಹ ಆಚರಿಸು, ಎಂಬ ಸಂದೇಶವನ್ನು, ಆದೇಶದ ರೂಪದಲ್ಲಿ ನಮಗೆ ಇತ್ತಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ .