Enjoy with detachment
909
—
913
909
ಮಗುವಾಗಿ ಬೊಂಬೆಗೆಂದತ್ತು ಪಿರಿಯರ ಕಾಡಿ ।
ಜಗದುಣಿಸುಗಳನುಂಡು ಬೆಳೆದವಂ ತಾನೆ ॥
ಮಗುಗಳನು ಬೆಳೆಸುತ್ತ ಮೆನೆಯನಾಳುವವೋಲು ।
ಜಗವನಾಳ್ವನು ಜಾಣ - ಮಂಕುತಿಮ್ಮ ॥ ೯೦೯ ॥
ಮಗುವಾಗಿದ್ದಾಗ ಬೊಂಬೆಗಾಗಿ, ಹಿರಿಯರನ್ನು ಕಾಡಿ, ಅತ್ತು, ಗೋಳಾಡಿ ಹಾಗೆ ಪಡೆದದ್ದನ್ನು, ಅನುಭವಿಸಿ, ಸಂತೋಷಪಟ್ಟು ಬೆಳೆದ ತಾನೇ , ಮಕ್ಕಳನ್ನು ಬೆಳೆಸುತ್ತಾ, ಮನೆಯಲ್ಲಿ ಹಿರಿಯನಾಗಿ, ಎಲ್ಲವನ್ನೂ ಆಳುವವನಂತೆ ಈ ಜಗತ್ತನ್ನು ಆಳುವವನು, ಜಾಣ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
910
ಸಾಮಾನ್ಯರೊಳ್ ಪುಟ್ಟಿ, ಸಾಮಾನ್ಯರೊಳ್ ಬೆಳೆದು ।
ಭೂಮಿಪತಿಪಟ್ಟವನು ಜನ ತನಗೆ ಕಟ್ಟಲ್ ॥
ಸಾಮರ್ಥ್ಯದಿಂದವರನಾಳ್ದ ಲಿಂಕನನಂತೆ ।
ಸ್ವಾಮಿ ಲೋಕಕೆ ಯೋಗಿ - ಮಂಕುತಿಮ್ಮ ॥ ೯೧೦ ॥
ಇಲ್ಲಿ ಮಾನ್ಯ ಗುಂಡಪ್ಪನವರು, ೧೮೬೧-೬೫ ರ ನಡುವೆ ಅಮೇರಿಕಾ ದೇಶದ ಅಧ್ಯಕ್ಷನಾಗಿದ್ದ ‘ಅಬ್ರಹಾಂ ಲಿಂಕನ್’ ನ ವಿಚಾರವನ್ನು ಉಲ್ಲೇಖಿಸುತ್ತಾ, ಹೇಗೆ ಅವನು ಸಾಮಾನ್ಯರಲ್ಲಿ ಹುಟ್ಟಿ, ಬೆಳದು ತನ್ನ ಸಾಮರ್ಥ್ಯ, ಸ್ವಾರ್ಥರಾಹಿತ್ಯ ಮತ್ತು ತ್ಯಾಗದಿಂದ, ಭೂಮಿಪತಿ ಪಟ್ಟವನ್ನು ಏರಿದ, ಎಂದು ಹೇಳುತ್ತಾ ಅಂತಹವರು ತಮ್ಮ ಯೋಗ್ಯತೆಯಿಂದ ಲೋಕಕ್ಕೆ ಸ್ವಾಮಿಯಂತಾಗುತ್ತಾರೆ ಎಂದು ಹೇಳುತ್ತಾರೆ.
911
ರಣದಿ ಬಿದ್ದಾ ನೈನ್ಯಪತಿ ಸಿಡ್ನಿಯುತ್ಕ್ರಮಣ- ।
ದೊಣಗುಬಾಯಿಗೆ ನೀರ್ನೊಡ್ಡಲ್ ಅದನವನು ॥
ತನಗಿಂತ ಕೆಲದ ಭಟಗದು ಸಲ್ವುದೆಂದಿತ್ತು ।
ತಣಿವನಾಂತುದ ನೆನೆಯೊ - ಮಂಕುತಿಮ್ಮ ॥ ೯೧೧ ॥
ರಣರಂಗದಲ್ಲಿ ಬಿದ್ದ ಸೈನ್ಯಾಧಿಪತಿ ‘ಸಿಡ್ನಿ’ಗೆ ಬಾಯಾರಿದಾಗ, ಅವನ ಸೇವಕ ಅವನಿಗೆ ನೀರನ್ನು ನೀಡಲು ಬಂದಾಗ, ಅವನು ತನಗಿಂತ, ತನ್ನ ಕೈಕೆಳಗೆ ಹೋರಾಡುವ ಸಾಮಾನ್ಯ ಸೈನಿಕನಿಗೆ ಇನ್ನೂ ಹೆಚ್ಚು ಬಾಯಾರಿಕೆಯಾಗಿ ಅವನಿಗೆ ಆ ನೀರಿನ ಅವಶ್ಯಕತೆ ಇರಬಹುದೆಂದು, ಆ ನೀರನ್ನು ಅವನಿಗೆ ನೀಡಿ ಸಂತೋಷಪಡುತ್ತಾನೆ. ನೀನೂ ಸಹ ಆ ರೀತಿ ನೀಡಿ ಸಂತಸಪಡು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
912
ಇಂದ್ರಿಯಗಳೊಳು ಬಾಳಿ ಜೀವ ಪಕ್ವಂಗೊಳ್ಳ- ।
ಲಿಂದ್ರಿಯಂಗಳ ಮೀರಿ ಮೇಲೇರಿ ಜಾಣಿಂ- ॥
ದಿಂದ್ರಿಯಂಗಳನಾಳಿ ಲೋಕವಂ ಸಂತಯಿಪ ।
ಬಂಧು ಜೀವನ್ಮುಕ್ತ - ಮಂಕುತಿಮ್ಮ ॥ ೯೧೨ ॥
ಇಂದ್ರಿಯಗಳ ಅನುಭವಗಳನ್ನು ಪಡೆದು, ಬದುಕಿನ ಅನುಭವಗಳಿಂದ ಪಕ್ವವಾಗಿ, ಆ ಇಂದ್ರಿಯಗಳು ನೀಡುವ ಸುಖಗಳ ಅಪೇಕ್ಷೆಯನ್ನು ತೊರೆದು, ಅಂತರಂಗದಿಂದ ಬೆಳೆದು ಮೇಲೆ ಏರಿ, ಜಾಣತನದಿಂದ ಇಂದ್ರಿಯಗಳನ್ನು ಹತೋಟಿಗೆ ತಂದುಕೊಂಡು, ಅನ್ಯರ, ಎಂದರೆ ಇನ್ನೂ ಇಂದ್ರಿಯಗಳ ಸುಳಿಯಲ್ಲಿ ಇರುವವರನ್ನು ಸಂತೈಸುವ ಸ್ಥಿತಿಗೆ ತಲುಪಿದರೆ ಅವನೇ ‘ಜೀವನ್ಮುಕ್ತ ‘ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
913
ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು ।
ಕತ್ತಲೆಯ ಮೊಡುಕು ಮೂಲೆಗಳ ಸೇರದಿರು ॥
ಭಾಸ್ಕರನನುಗ್ರಹವೆ ನೂತ್ನ ಜೀವನಸತ್ತ್ವ ।
ಮೃತ್ಯು ನಿನಗಲ್ಪತೆಯೊ - ಮಂಕುತಿಮ್ಮ ॥ ೯೧೩ ॥
ವಿಸ್ತಾರದಲ್ಲಿ ಬಾಳು, ವೈಶಾಲ್ಯತೆಯಿಂದ ಬದುಕು, ಅಜ್ಞಾನದಿಂದ ಜಗತ್ತಿನ ಸಂಪರ್ಕ ತೊರೆದು ಮೂಲೆ ಸೇರದಿರು. ಬೆಳಕನ್ನೇ ತೋರುವ ಆ ಭಾಸ್ಕರನ ಅನುಗ್ರಹದಿಂದಲೇ ಈ ಜಗತ್ತಿನಲ್ಲಿ ಎಲ್ಲವೂ ನವನವೀನವಾಗಿ ಮತ್ತೆ ಬದುಕಿನ ಉತ್ಸಾಹವನ್ನು ತುಂಬಿಕೊಳ್ಳುತ್ತವೆ. ಒಂದು ವಿಸ್ತಾರವಾದ ಬದುಕಿನಲ್ಲಿ ‘ಸಾವು’ ಎನ್ನುವುದು ಒಂದು ತೀರ ‘ಗೌಣ’ ವಾದ ವಿಷಯ ಎಂಬುದನ್ನು ತಿಳಿ, ಎನ್ನುವ ಸಂದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.