Laugh and make others laugh
914
—
918
914
ತೆರೆಯಾಗು ವಿಶ್ವಜೀವನದ ದಿವ್ಯಾಬ್ಧಿಯಲಿ ।
ಕರಗಿಸದರಲಿ ನಿನ್ನ ಬೇರೆತನದರಿವ ॥
ಮರುತನುರುಬನು ತಾಳುತೇಳುತೋಲಾಡುತ್ತ ।
ವಿರಮಿಸಾ ಲೀಲೆಯಲಿ - ಮಂಕುತಿಮ್ಮ ॥ ೯೧೪ ॥
‘ ನಾನು ಬೇರೆ’ ಎನ್ನುವ ಭಾವವನ್ನು ತೊರೆದು, ಕಡಲಿನಲ್ಲಿ ಗಾಳಿಯ ಬೀಸುವಿಕೆಯಿಂದ, ಮೇಲೇಳುತಾ, ಬೀಳುತಾ ಕಡಲಲ್ಲಿ ಒಂದಾಗುವ ‘ ಅಲೆ’ಯಂತೆ ನೀನೂ ಸಹ ಈ ಜಗತ್ಸಾಗರದಲ್ಲಿ ಮತ್ತು ಪರಮಾತ್ಮನ ಲೀಲೆಯಲ್ಲಿ ಒಂದಾಗಿ ಬಾಳು, ಎಂದು ಆದೇಶವನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು.
915
ಬರಿಯ ಪೊಳ್ಳು ವಿಚಾರ ಮಾನುಷವ್ಯಾಪಾರ ।
ಪರಿಕಿಸಲು ಪುಣ್ಯವೆಂಬುದುಮಹಂಕಾರ ॥
ಅರಳಿ ಮೊಗವನಿತಿನಿತು, ನಕ್ಕು ನಗಿಸಿರೆ ಸಾರ ।
ಹೊರೆ ಮಿಕ್ಕ ಸಂಸಾರ - ಮಂಕುತಿಮ್ಮ ॥ ೯೧೫ ॥
ಈ ಜಗತ್ತಿನಲ್ಲಿ ಮನುಷ್ಯ ಮನುಷ್ಯರ ನಡುವೆ ನಡೆಯುವುದೆಲ್ಲಾ ಹುರುಳು-ತಿರುಳು ಇಲ್ಲದ ಪೊಳ್ಳುವಿಚಾರ. ಸೂಕ್ಷ್ಮವಾಗಿ ಪರೀಕ್ಷಿಸಿ ನೋಡಿದರೆ ಪುಣ್ಯವೆಂಬುದೂ ಸಹ ಅಹಂಕಾರದ ಮಾತು. ಮುಖವನ್ನು ಪ್ರಸನ್ನವಾಗಿಟ್ಟುಕೊಂಡು ತಾನೂ ನಕ್ಕು, ಇತರರನ್ನೂ ನಗಿಸಿದರೆ, ಬದುಕು ಸತ್ವಯುತವಾಗಿರುತ್ತದೆ. ಮಿಕ್ಕ ಸಂಸಾರವೆಲ್ಲ ಕೇವಲ ಭಾರವಾದ ಹೊರೆಯಾಗಿರುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
916
ಜನ್ಮ ಸಾವಿರ ಬರಲಿ, ನಷ್ಟವದರಿಂದೇನು? ।
ಕರ್ಮ ಸಾವಿರವಿರಲಿ, ಕಷ್ಟ ನಿನಗೇನು? ॥
ಬ್ರಹ್ಮ ಹೃದಯದಿ ನಿಲ್ಲೆ ಮಾಯೆಯೇಂಗೈದೊಡೇಂ? ।
ಇಮ್ಮಿದಳ ಸರಸವದು - ಮಂಕುತಿಮ್ಮ ॥ ೯೧೬ ॥
ಸಾವಿರಾರು ಜನ್ಮಗಳು ಬರಲಿ, ಅದರಿಂದ ನಷ್ಟವೇನೂ ಇಲ್ಲ. ಆ ಜನ್ಮಗಳಲ್ಲಿ, ನಮ್ಮ ಕರ್ಮಗಳು ಸಾವಿರಾರು ಆಗಲಿ, ‘ಬ್ರಹ್ಮ’ ಹೃದಯದಲ್ಲಿ ಸ್ಥಿರವಾಗಿ ನಿಂತರೆ, ಅದನ್ನು ಅನುಭವಿಸಲು ನಮಗೇನು ಕಷ್ಟ? ಈ ಮಾಯೆಯೆಂಬ ಮೋಹಿನಿ ಎನು ಮಾಡಿದರೇನು? ಈ ಜಗತ್ತಿನ ಲೀಲಾ ವಿನೋದವನ್ನು, ಪ್ರೇಯಸಿಯ ಸರಸವೆಂಬಂತೆ ಬಗೆದು ಶಾಂತವಾಗಿ ಜೀವಿಸಬಹುದು ಎಂದು ಬದುಕಿನಲ್ಲಿ ಇದ್ದು, ಅದನ್ನು ಅನುಭವಿಸುತ್ತಾ ಇದ್ದರೂ, ನಿರ್ಲಿಪ್ತತೆಯ ಜೀವನದ ಮಾರ್ಗವನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
917
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ ।
ನಗುವ ಕೇಳುತ ನಗುವುದತಿಶಯದ ಧರ್ಮ ॥
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ।
ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ ॥ ೯೧೭ ॥
ನಗುವುದು ಮಾನವನ ಸಹಜವಾದ ಧರ್ಮ. ನಗಿಸುವುದು ನಾವು ಆಚರಿಸಬಹುದಾದ, ಪರಧರ್ಮ. ಮತ್ತೊಬ್ಬರ ನಗುವನ್ನು ಕೇಳುತ್ತಾ, ನಾವು ನಗುವುದು ಅತಿಶಯದ ಧರ್ಮ. ನಾವು ನಗುವ, ನಗಿಸುವ, ಮತ್ತೊಬ್ಬರನ್ನು ನಗಿಸುವಾಗ ನಾವೂ ನಗುವಂತಹ ಭಾವವಿರಲಿ ಎಂದು ಆ ವರವನ್ನು, ನೀನು ಅಧಿಕವಾಗಿ ಪರಮಾತ್ಮನಲ್ಲಿ ಬೇಡಿಕೊಳ್ಳು, ಎಂದು ಒಂದು ಅದ್ಭುತ ಸಂದೇಶವನ್ನು ಹೇಳಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
918
ನೆನೆನೆನೆದು ಗಹನವನು, ಜೀವನರಹಸ್ಯವನು ।
ಮನವ ಬಳಲಿಸಿ ಸೋಲಿಸಿರುವ ತತ್ತ್ವವನು ॥
ಮನದೇಕಾಂತದಲಿ ಮೌನದ ಧ್ಯಾನದಲಿ ।
ಮಣಿಮಣಿದು ಕೈಮುಗಿಯೊ - ಮಂಕುತಿಮ್ಮ ॥ ೯೧೮ ॥
ಮೌನದದಿಂದ ಮಾಡುವ ಧ್ಯಾನದಲ್ಲಿ ಮತ್ತು ಮನನ ಮಾಡುವಾಗಿನ ಏಕಾಂತದಲ್ಲಿ, ನಿನ್ನ ಮನವನ್ನು ಬಳಲಿಸಿ, ಸೋಲಿಸಿರುವ ಆ ಗಹನವಾದ ಜೀವನ ರಹಸ್ಯವನ್ನು ನೆನೆನೆನೆದು, ಬಾರಿ ಬಾರಿ ತಲೆಬಾಗಿ, ಕೈ ಮುಗಿಯೋ ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು.