My salutations to all
919
—
923
919
ಜೀವದುದಯ ರಹಸ್ಯ, ಜೀವವಿಲಯ ರಹಸ್ಯ ।
ಜೀವನದ ದೃಶ್ಯ ಮರುವಿನ ಬಿಸಿಲ್ಗುದುರೆ ॥
ಭಾವಿಸಲಿದೇ ತತ್ತ್ವ; ಬ್ರಹ್ಮಮಾಯೆಯೆ ವಿಶ್ವ ।
ಕೇವಲಾತ್ಮ ಬ್ರಹ್ಮ - ಮಂಕುತಿಮ್ಮ ॥ ೯೧೯ ॥
ಒಂದು ಜೀವಿಯ ಹುಟ್ಟು ಮತ್ತು ಸಾವು ಎರಡೂ ನಮಗೆ ರಹಸ್ಯವಾಗಿಯೇ ಇದೆ. ಇನ್ನು ಜೀವನದ ದೃಶ್ಯವೋ, ಮರಳುಗಾಡಿನ ಮರೀಚಿಕೆಯಂತೆ ಇದೆ. ನಾವು ಇಷ್ಟನ್ನು ಮಾತ್ರ ಭಾವಿಸಿಕೊಳ್ಳಬಹುದು ಮತ್ತು ನಮಗೆ ಆರ್ಥವಾಗುವುದು ಇಷ್ಟೇ ತತ್ವ. ಪರಮಾತ್ಮನು ಸೃಷ್ಟಿಸಿರುವ ಮಾಯೆಯೇ ‘ವಿಶ್ವ’. ಮಾಯೆಯಿಂದ ಹೊರಬಂದರೆ ನಮಗೆ ಕೇವಲ ಬ್ರಹ್ಮದ ಅನುಭವವಾಗುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
920
ಆರಲೆನ್ನಯ ಹೃದಯ ಕರಣಗಳ ಕಾವುಗಳು ।
ಸೇರಲೆನ್ನಯ ಜೀವ ವಿಶ್ವಜೀವದಲಿ ॥
ಧಾರುಣಿಯ ಮಡಿಲೆನ್ನ ಕೊಳಲಿ; ಜಗ ಮರೆತಿರಲಿ ।
ಹಾರಯಿಸು ನೀನಿಂತು - ಮಂಕುತಿಮ್ಮ ॥ ೯೨೦ ॥
"ಪುಟಿದು ಕುಣಿದೇಳುವ ನನ್ನ ಮನಸ್ಸು ಬುದ್ಧಿ ಮತ್ತು ದೇಹದ ತುಡಿತಗಳೆಲ್ಲವೂ ಶಾಂತವಾಗಲಿ. ನನ್ನ ಜೀವ ವಿಶ್ವಾತ್ಮದಲ್ಲಿ ಸೇರಲಿ. ಭೂಮಿ ನನ್ನನ್ನು ತನ್ನೊಳಗೆ ಸೇರಿಸಿಕೊಳ್ಳಲಿ ಮತ್ತು ಜಗತ್ತು ನನ್ನನ್ನು ಮರೆತುಹೋಗಲಿ," ಎನ್ನುವಂತಹ ಬಯಕೆಗಳನ್ನಿಟ್ಟುಕೋ ಎಂದು, ಬದುಕಿನಿಂದ ನಿರ್ಗಮಿಸುವಾಗ ಯಾವ ರೀತಿಯ ಮನೋಭಾವವಿಟ್ಟುಕೊಳ್ಳಬೇಕೆಂಬುದರ ಸೂಚನೆ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
921
ಇಳಿಯುವೆನು ಮುಳುಗುವೆನು ವಿಶ್ವಾತ್ಮಸಾಗರದಿ ।
ಮುಳುಮುಳುಗಿ ಕಳೆಯುವನು ಬೇರೆತನದರಿವ ॥
ಇಳೆಬಾನ್ಗಳಾಟದಲಿ ಕುಣಿಯುವೆನು ಮೈಮರೆತು ।
ಗಳಿಸೀ ಮನಃಸ್ಥಿತಿಯ - ಮಂಕುತಿಮ್ಮ ॥ ೯೨೧ ॥
ನಾನು ಬೇರೆ, ನಾನು ಎಲ್ಲರಿಗಿಂತ ಭಿನ್ನ ಎನ್ನುವ ಭಾವವನ್ನು ಕಳೆದುಕೊಂಡು, ವಿಶ್ವಾತ್ಮಭಾವದ ಸಾಗರಲ್ಲಿ ನಾನು ಇಳಿಯುತ್ತೇನೆ, ಮುಳುಗುತ್ತೇನೆ, ಈ ಆಕಾಶ ಮತ್ತು ಧಾರೆಗಳ ನಡುವಿನ ಬಾಳಿನಲ್ಲಿ ಮೈ ಮರೆತು ಕುಣಿಯುತ್ತೇನೆ, ಎನ್ನುವಂತಹ ಆಶಯಗಳನ್ನು ತುಂಬಿಕೊಂಡ ಮನಸ್ಸಿನ ಸ್ಥಿತಿಯನ್ನು ಬೆಳೆಸಿಕೊಳ್ಳುತ್ತೇನೆ ಎಂದು ಹೇಳುತ್ತಾ, ನಮಗೂ ಅಂತಹ ಸ್ಥಿತಿಗೆ ಹೋಗಲು ಮಾರ್ಗವನ್ನು ಸೂಚಿಸಿದ್ದಾರೆ ನಮ್ಮ ಗುಂಡಪ್ಪನವರು.
922
ಎಲ್ಲರಿಗಮೀಗ ನಮೊ - ಬಂಧುಗಳೆ, ಭಾಗಿಗಳೆ ।
ಉಲ್ಲಾಸವಿತ್ತವರೆ, ಮನವ ತೊಳೆದವರೆ ॥
ಟೊಳ್ಳು ಜಗ, ಸಾಕು ಬಾಳ್ - ಎನಿಸಿ ಗುರುವಾದವರೆ ।
ಕೊಳ್ಳಿರೀ ನಮವನೆನು- ಮಂಕುತಿಮ್ಮ ॥ ೯೨೨ ॥
ನನ್ನ ಬಂಧುಗಳೇ, ನನ್ನ ಬದುಕನ್ನು ಹಂಚಿಕೊಂಡವರೇ, ಎನಗೆ ಸಂತೋಷವನ್ನು ಕೊಟ್ಟವರೇ, ಎನ್ನ ಮನವನ್ನು ತೊಳೆದವರೇ, ಈ ಜಗತ್ತು ಟೊಳ್ಳು, ಈ ಬಾಳು ಸಾಕು ಎನ್ನುವಂತಹ ಭಾವವನ್ನು ಎನಗೆ ಬರುವಂತೆ ಮಾಡಿ, ನನ್ನ ಗುರುಸ್ಥಾನದಲ್ಲಿರುವವರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರ, ಎಂದು ಹೇಳುತ್ತಾ, ನೀವೂ ಸಹ ಅಂತಹ ಭಾವ ಮನಸ್ಸಿನಲ್ಲಿ ತುಂಬಿಕೊಂಡು ನೀವು ನಮನವನ್ನು ಹೇಳಿ ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
923
ನಿನಗಾರು ಗುರುವಹರು? ನೀನೊಬ್ಬ ತಬ್ಬಲಿಗ ।
ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು ॥
ದಿನವ ಕಳೆ; ಗುರುಶಿಷ್ಯಪಟ್ಟಗಳು ನಿನಗೇಕೆ? ।
ನಿನಗೆ ನೀನೇ ಗುರುವೊ - ಮಂಕುತಿಮ್ಮ ॥ ೯೨೩ ॥
ನಿನಗೆ ಯಾರು ಗುರುವಾಗುತ್ತಾರೆ? ನೀನೊಬ್ಬ ಗತಿಯಿಲ್ಲದವ. ದಾರಿಯಲ್ಲಿ ಸಿಕ್ಕಿದೆಂಜಲನ್ನು ತಿನ್ನುತ್ತ ದಿನವನ್ನು ದೂಡು. ನಿನಗೊಬ್ಬ ಗುರು, ನೀನೊಬ್ಬ ಶಿಷ್ಯ ಎಂಬ ಪಟ್ಟಗಳು ನಿನಗೇಕೆ? ನಿನಗೆ ನೀನೆ ಗುರುವೋ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.