Firewood
924
—
928
924
ಮನೆಯ ಮಾಳಿಗೆಗಲ್ಲ, ಮುಡಿಯ ಕೊಪ್ಪಿಗೆಗಲ್ಲ ।
ಇನಿವಣ್ಣು ತನಿಯ ಕಾಳೆಂಬುದೇನಿಲ್ಲ ॥
ಬಣಗು ಕುರಿಚಲು ಗಿಡದ ಬಾಳೇನು? ನೀನಂತು ।
ಒಣಗಿದೊಡೆ ಸವುದೆ ಸರಿ - ಮಂಕುತಿಮ್ಮ ॥ ೯೨೪ ॥
ನೀನು ಒಂದು ಕುರಿಚಲು ಗಿಡವಿದ್ದಂತೆ. ಹೇಗೆ ಕುರಿಚಲು ಗಿಡ, ಯಾವ ಮನೆಯ ಮಾಳಿಗೆಗೆ ತೊಲೆಯೋ, ಧೂಲವೋ ಆಗುವುದಿಲ್ಲವೋ ಅಥವಾ ಯಾರ ಮುಡಿಗೂ ಅಂದ ಮತ್ತು ಸುಗಂಧವನ್ನೀಯುವ ಹೂಗಳನ್ನು ಅರಳಿಸುವುದಿಲ್ಲವೋ ಅಥವಾ ರುಚಿಯಾದ ಹಣ್ಣೋ ಅಥವಾ ಅಹಾರವಾಗಬಹುದಾದ ಧಾನ್ಯವನ್ನೋ ಕೊಡುವುದಿಲ್ಲವೋ ಹಾಗೆಯೇ ನಿನ್ನ ಜೀವನವೂ ಸಹ, ನಿಷ್ಪ್ರಯೋಜಕ. ಹೇಗೆ ಕುರಿಚಲು ಗಿಡ ಒಣಗಿದರೆ ಕೇವಲ ಒಲೆಗೆ ಒಡ್ಡಲು ಸೌದೆಯಾಗಬಹುದೋ ಅದೇ ರೀತಿ ನೀನು ಎಂದು, ನಮ್ಮೆಲ್ಲರ ಬದುಕಿನ ಪರಿಯನ್ನು ವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು.
925
ಜೋಳಿಗೆಯ ಪಿಡಿದು ನೀನೂರಿನೂರಿಗೆ ನಡೆದು ।
ಹೇಳುತ್ತ ಹಾಡುಗಳ, ಭಾರಗಳ ಮರೆತು ॥
ಬೀಳು ಮೇಲುಗಳೆಣಿಕೆಯಿಂ ಮನವನಲುಗಿಸದೆ ।
ಬಾಳ ನಡಸುವುದೆಂದೊ?- ಮಂಕುತಿಮ್ಮ ॥ ೯೨೫ ॥
ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಒಂದು ವಿರಕ್ತಭಾವದ ಆಶಯವನ್ನು ಹೊತ್ತು, ತಮಗೆ ತಾವೇ, "ನೀನು, ಕಷ್ಟ ಸುಖಗಳ ಗೆರೆಯನ್ನು ದಾಟಿದ ಮನಸ್ಸನ್ನು ಹೊಂದಿದ ಜೋಗಿಯಂತೆ, ಜೋಳಿಗೆಯನು ಹಿಡಿದು, ಊರಿಂದ ಊರಿಗೆ ಹಾಡುತ್ತಾ, ಬದುಕಿನ ಭಾರವನು ಮರೆತು ಬಾಳನ್ನು ನಡೆಸುವುದು ಎಂದೋ?" ಎಂದು ಕೇಳಿಕೊಳ್ಳುತ್ತಾ, ಅಂತಹ ಮುಕ್ತ ಭಾವದ ಬದುಕನ್ನು ನಡೆಸಿದರೆ ಚೆನ್ನ ಎನ್ನುವಂತಹ ಸಂದೇಶವನ್ನು ನಮಗೂ ನೀಡಿದ್ದಾರೆ.
926
ತೊಲಗೆಲವೊ ಮನೆಯಿಂದ ಮನವು ಬರಡಾದಂದೆ ।
ಹೊಲಸ ತೊಳೆಯಲು ತೋಳ್ಗೆ ಬಲ ಕುಗ್ಗಿದಂದೆ ॥
ತೊಲಗು ಜಗದಿಂ ದೂರ, ಇಳೆಗಾಗದಿರು ಭಾರ ।
ತೊಲಗಿ ನೀಂ ಮರೆಯಾಗು - ಮಂಕುತಿಮ್ಮ ॥ ೯೨೬ ॥
ಮನಸ್ಸು ಬರಡಾದಂದು, ಮನದ ಹೊಲಸನ್ನು ತೊಳೆಯಲು ಶಕ್ತಿ ಕುಗ್ಗಿದರೆ, ಜಗಕ್ಕೆ ಮತ್ತು ಜಗದ ಜನರಿಗೆ ಭಾರವಾಗದೆ, ಮನೆ ಬಿಟ್ಟು ದೂರ ಯಾರಿಗೂ ಹೊರೆಯಾಗದ ಹಾಗೆ ಹೊರಟು ಬಿಡು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
927
ತೊಲಗು ನಿರ್ಜನದೆಡೆಗೆ; ತೊಲಗು ಮಸಣದ ಕಡೆಗೆ ।
ಒಲವ ಬೇಡಿಸದೆಡೆಗೆ; ಅಳುವು ಬರದೆಡೆಗೆ ॥
ವಿಲಯವಾಗಿಸಿ ಮನವನ್, ಅಲುಗಾಡಿಸದೆ ತುಟಿಯ ।
ತೊಲಗಿ ಮಲಗಲ್ಲಿ ನೀಂ - ಮಂಕುತಿಮ್ಮ ॥ ೯೨೭ ॥
ಯಾರೂ ಇಲ್ಲದ ಕಡೆಗೆ, ಸಾವಿನೆಡೆಗೆ ತೊಲಗು. ಯಾರಿಂದಲೂ ಪ್ರೀತಿ ಒಲವು ಬಯಸದ ಮತ್ತು ದುಃಖವಿಲ್ಲದ ಸ್ಥಿತಿಯಲ್ಲಿ ನಿನ್ನ ಮನಸ್ಸನ್ನು ಲಯಗೊಳಿಸು. ಮೌನದಿಂದ ನೀನು ಅಂತಹ ಸ್ಥಿತಿಯಲ್ಲಿ ಮಲಗು ಎಂದು ಆದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
928
ಕಡೆಗಾಲವನು ತಾನೆ ಮುನ್ನರಿತು ಕಾಡಾನೆ- ।
ಯಡವಿಯೊಳದೊಂದು ದೂರದ ಗವಿಯನೈದಿ ॥
ಬಿಡುವುದಾಯೆಡೆ ಮೌನದಿಂದಸುವನೆನ್ನುವರು ।
ಕಡೆಯ ಸಾರಂತು ನೀಂ- ಮಂಕುತಿಮ್ಮ ॥ ೯೨೮ ॥
‘ ಕಾಡಾನೆ ‘ ತನ್ನ ಮರಣ ಸನ್ನಿಹಿತವಾಯಿತೆಂದು ಮೊದಲೇ ಅರಿತು, ಕಾಡಿನಲ್ಲಿನ ಒಂದು ಗುಹೆಯೊಳಕ್ಕೆ ಸೇರಿ, ಮೌನವಾಗಿ ತನ್ನ ಉಸಿರನ್ನು ಬಿಡುವುದು ಎಂದು ಹೇಳುತ್ತಾರೆ. ನೀನೂ ಸಹ, ನಿನ್ನ ಅಂತ್ಯಕಾಲ ಹತ್ತಿರವಾದಾಗ, ಹಾಗೆ ದೂರ ಸರಿದು, ಮೌನವಾಗಿ ಕೊನೆಯುಸಿರನ್ನು ಬಿಟ್ಟು ಈ ಲೋಕದಿಂದ ಸರಿದು ಹೋಗು ಎಂದು, ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.