Death in sleep
929
—
933
929
ಸದ್ದುಮಾಡದೆ ನೀನು ಜಗಕೆ ಬಂದವನಲ್ಲ ।
ಒದ್ದಾಟ ಗುದ್ದಾಟ ಬಾಳೆಲ್ಲವಾಯ್ತು ॥
ಗದ್ದಲವ ಬಿಡಲು ಕಡೆದಿನವಾನುಮಾದೀತೆ? ।
ನಿದ್ದೆವೊಲು ಸಾವು ಪಡೆ - ಮಂಕುತಿಮ್ಮ ॥ ೯೨೯ ॥
ನೀನು ಈ ಜಗತ್ತಿಗೆ ಬರುವಾಗ ಸದ್ದುಮಾಡಿಕೊಂಡೇ ಬಂದವನು ಮತ್ತು ಬಾಳಿನುದ್ದಕ್ಕೂ ಗದ್ದಲದಲ್ಲೇ ಬದುಕಿದವನು. ಕಡೆಯಪಕ್ಷ ನಿನ್ನ ಅಂತಿಮ ಕ್ಷಣದಲ್ಲಾದರೂ ಈ ಗದ್ದಲದಿಂದ ಹೊರಬಂದು ನಿದ್ರೆಯಂತಹ ಸಾವನ್ನು ಪಡೆ ಎಂದು ಸೂಚಿಸಿದ್ದಾರೆ, ಮಾನ್ಯ ಗುಂಡಪ್ಪನವರು.
930
ಆರ ಕೈತುತ್ತಿಗಂ ನಿನ್ನ ಕಾಯಿಸದೆ ವಿಧಿ ।
ಯಾರ ಭುಜಕಂ ನಿನ್ನ ಭಾರವಾಗಿಸದೆ ॥
ಆರ ಸೆಲೆ ಸುಳಿವುಮಂಟದವೊಲಾಗಿಸಿ ನಿನ್ನ ।
ಪಾರಗಾಣಿಸ ಬೇಡು - ಮಂಕುತಿಮ್ಮ ॥ ೯೩೦ ॥
"ಯಾರೋ ನೀಡುವ ಕೈ ತುತ್ತಿಗೆ ನಾನು ಕಾಯುವಂತಾಗದೆ, ಯಾರ ಭುಜಕ್ಕೂ ನಾನು ಹೊರೆಯಾಗದೆ, ಯಾರದೇ ಪ್ರೀತಿ, ಪ್ರೇಮ ಮತ್ತು ಮೋಹಗಳ ಸೆಳೆತಕ್ಕೆ ಅಂಟದಹಾಗೆ, ಈ ಜಗತ್ತಿನಿಂದ ನಿರ್ಗಮಿಸುವ ದಾರಿ ತೋರೋ " ಎಂದು ಪರಮಾತ್ಮನಲ್ಲಿ ಬೇಡು ಎಂದು, ತಮಗೇನು ಬೇಕೋ ಅದನ್ನು ಹೇಳುತ್ತಾ, ನೀವೂ ಸಹ ಅದನ್ನೇ ಬೇಡಿ ಪಡೆದುಕೊಳ್ಳಿ ಎಂದು ಆದೇಶಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
931
ವೇದಾಂತವಾಕ್ಯಗಳ ನಮಕಾನುವಾಕಗಳ ।
ಕೇದಾರಗೌಳ ಮಣಿರಂಗಾರಭಿಗಳ ॥
ನಾದಂಗಳಲಿ ಮನವ ಬೆರಸಿ ನೀನುತ್ಕ್ರಮಿಸೆ ।
ಸಾಧನವೊ ಮುಕ್ತಿಗದು - ಮಂಕುತಿಮ್ಮ ॥ ೯೩೧ ॥
ವೇದಾಂತದ ವಾಕ್ಯಗಳನ್ನು ಅಥವಾ ಉಪನಿಷತ್ತಿನ ಸಾರವನ್ನು ಸಾರುವ ವಾಕ್ಕುಗಳಲ್ಲಿ ಅಥವಾ ಕೇದಾರಗೌಳ, ಮಣಿರಂಗ ಅಥವಾ ಆರಭಿಯಂತಹ ಸಂಗೀತದ ರಾಗಗಳಲ್ಲಿನ ವಿಸ್ತಾರವನ್ನು ಕೇಳುತ್ತಾ ಅದರೊಳಗೆ ತಲ್ಲೀನನಾಗಿ ನೀನು ಈ ಜಗತ್ತನ್ನು ತೊರೆದರೆ, ಅದೇ ಮುಕ್ತಿಗೆ ಸಾಧನ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
932
ಮೋಹನಾನಂದಭೈರವಿ ಶಂಕರಾಭರಣ ।
ಶಾಹನ ಕುರಂಜಿ ಕೇದಾರ ಕಾಪಿಗಳ ॥
ಮೋಹ ಸರ್ವಸ್ವಗಳ ರಾಗಾಬ್ಧಿಯೋ ಬ್ರಹ್ಮ ।
ಗಾಹಿಸದರೊಳಗೆ ನೀಂ - ಮಂಕುತಿಮ್ಮ ॥ ೯೩೨ ॥
ಮಾನ್ಯ ಗುಂಡಪ್ಪನವರು ಸಂಗೀತದಲ್ಲಿ ಬಹಳ ಆಸಕ್ತಿಯುಳ್ಳವರಾಗಿದ್ದರು, ಸ್ವತಃ ವಾಗ್ಗೇಯಕಾರರಾಗಿದ್ದರು ಮತ್ತು ಸಂಗೀತ ಶಾಸ್ತ್ರವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಹಾಗಾಗಿ ಅವರು ಏನೆನ್ನುತ್ತಾರೆ ನೋಡಿ!!!!! ‘ಮೋಹನ, ಆನಂದಭೈರವಿ, ಶಂಕರಾಭರಣ, ಶಾಹನ, ಕುರಂಜಿ, ಕೇದಾರ, ಕಾಪಿ’ ಗಳಂತಹ ರಾಗಗಳಲ್ಲಿ ಹೊರ ಹೊಮ್ಮುವ ಸಂಗೀತವು ಪರಬ್ರಹ್ಮನನ್ನು ಆರಾಧಿಸುವ ರಾಗಗಳ ಕಡಲು. ಆ ವಿಸ್ತಾರವಾದ ರಾಗಗಳ ಕಡಲಲ್ಲಿ ನೀನು ಮುಳುಗಿ ಲೀನವಾಗು ಎಂಬ, ಕಿವಿಮಾತನ್ನು ಹೇಳಿದ್ದಾರೆ ಈ ಮುಕ್ತಕದಲ್ಲಿ.
933
ಕಷ್ಟ ಜೀವದ ಪಾಕ; ಕಷ್ಟ ಧರ್ಮವಿವೇಕ ।
ಎಷ್ಟೆಷ್ಟು ನೀತಿಯುಕ್ತಿಗಳ ಬಗೆದಡೆಯುಂ ॥
ಇಷ್ಟಷ್ಟು ನಿನ್ನೊಳ್ ಒಳಿತಿಳಿವಿಲ್ಲದಿರೆ ನಷ್ಟ ।
ದೃಷ್ಟಿಸೂಕ್ಷ್ಮವೆ ಗತಿಯೊ - ಮಂಕುತಿಮ್ಮ ॥ ೯೩೩ ॥
ಜೀವ ಪಕ್ವವಾಗುವುದು ಕಷ್ಟ. ಧರ್ಮದ ವಿವೇಕ ಬರುವುದೂ ಸಹ ಕಷ್ಟ. ಎಷ್ಟು ನೀತಿಕಥೆಗಳನ್ನು ಓದಿ, ಕೇಳಿ ಅರಿತುಕೊಂಡರೂ, ಅಂತರಂಗದಲ್ಲಿನ ವಿವೇಕ ಉದ್ದೀಪನವಾಗದಿದ್ದರೆ ಪ್ರಯೋಜನವಿಲ್ಲ. ಅವುಗಳನ್ನು ಅರಿಯಲು ಸೂಕ್ಷ್ಮ ದೃಷ್ಟಿಯಿರಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.