Choice depends on the mind
934
—
938
934
ನೂರಾರು ಮತವಿಹುದು ಲೋಕದುಗ್ರಾಣದಲಿ ।
ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ॥
ಸಾರದಡುಗೆಯನೊಳವಿಚಾರದೊಲೆಯಲಿ ಮಾಡು ।
ಬೇರೆ ಮತಿ ಬೇರೆ ಮತ - ಮಂಕುತಿಮ್ಮ ॥ ೯೩೪ ॥
ಈ ಜಗತ್ತಿನಲ್ಲಿ ನೂರಾರು ಮತಗಳಿವೆ. ನಿನ್ನ ಮನಸ್ಸಿಗೆ ಇಷ್ಟವಾದ ಯಾವುದಾದರೊಂದು ಮತವನ್ನು ನೀನು ಆರಿಸಿಕೋ. ನಿನ್ನ ಮನಸ್ಸಿನ ಒಲೆಯಲ್ಲಿ ಆ ವಿಚಾರವನ್ನು ಅಡುಗೆಮಾಡಿ ಸಾರವನ್ನು ಅನುಭವಿಸು. ಯಾರ ಬುದ್ಧಿ ಹೇಗಿರುತ್ತದೋ ಹಾಗೆ ಅವರ ಮತ, ಎಂದರೆ ಅಭಿಪ್ರಾಯ ಹಾಗಿರುತ್ತದೆ, ಎಂದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
935
ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ ।
ಅನುವಪ್ಪುದೊಂದೊಂದು ರೋಗಕೊಂದೊಂದು ॥
ನಿನಗಮಂತೆಯೆ ನೂರು ನೀತಿಸೂತ್ರಗಳಿರಲು ।
ಅನುವನರಿವುದೆ ಜಾಣು - ಮಂಕುತಿಮ್ಮ ॥ ೯೩೫ ॥
ಮೆಣಸು ಹಿಪ್ಪಲಿ ಶುಂಠಿ ಜೀರಿಗೆ ಮುಂತಾದ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿದ್ದು, ನಮ್ಮ ದೇಹದ ಒಂದೊಂದು ರೋಗಕ್ಕೆ ಒಂದೊಂದು ಔಷಧಿಯಂತೆ ಸೂಕ್ತವಾಗಿರುತ್ತವೆ. ಅದೇ ರೀತಿ ನಮ್ಮ ಮಾನಸಿಕ ಮತ್ತು ಆಧ್ಯಾತ್ಮಿಕ ರುಗ್ಣತೆ ಅಥವಾ ಖಾಯಿಲೆಯನ್ನು ವಾಸಿಮಾಡಲು ನೂರಾರು ನೀತಿ ಸೂತ್ರಗಳು ಇರುವಾಗ, ನಿನಗೆ ಸೂಕ್ತವಾದದ್ದನ್ನು ಆರಿಸಿಕೊಳ್ಳುವುದೇ ಜಾಣತನ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
936
ವಿಶದಮಾದೊಂದು ಜೀವನಧರ್ಮದರ್ಶನವ- ।
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು ॥
ನಿಸದವಂ ಗ್ರಂಥಾನುಭವಗಳಿಂದಾರಿಸುತ ।
ಹೊಸೆದನೀ ಕಗ್ಗವನು - ಮಂಕುತಿಮ್ಮ ॥ ೯೩೬ ॥
ಹಿಂದಿನ ಎರಡು ಮುಕ್ತಕಗಳಲ್ಲಿ "ನಿನ್ನ ಮನಕೆ ಒಪ್ಪುವ ಮತವನ್ನು ಆಯ್ದುಕೊಂಡು ಅಂತರಂಗದಲ್ಲಿ ಮಥನಮಾಡಿ ನಿನಗೆ ಕಂಡ ಸತ್ಯವನ್ನು ಭದ್ರವಾಗಿ ಹಿಡಿದುಕೊಂಡು ಮುಂದುವರೆ" ಎಂದು ನಮಗೆ ಅರುಹಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ತಾನು ಸಹ ಹೀಗೆಯೇ ಮಾಡಿದೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು
937
ಹೃದ್ಯ ಹೃದಯೇಂಗಿತಕೆ ರಾಗ ತಾಳದ ಕಟ್ಟು ।
ಗದ್ಯ ಲೌಕಿಕ ತಾತ್ವಿಕಕ್ಕಚ್ಚುಕಟ್ಟು ॥
ಮಧ್ಯದಲಿ ಮಿಸುಕಿ, ನೆಲಬಿಟ್ಟು ಬಾನ್ ಮುಟ್ಟದಿಹ ।
ಪದ್ಯವಧಿಕಪ್ರಸಂಗಿ - ಮಂಕುತಿಮ್ಮ ॥ ೯೩೭ ॥
ನಮ್ಮ ‘ಹೃದಯ’ದ ಇಂಗಿತವನ್ನು ಅರುಹಲು, ರಾಗ ತಾಳ ಮತ್ತು ಲಯಗಳ ಚೌಕಟ್ಟಿನಲ್ಲಿರುವ ‘ಸಂಗೀತ’ ಮಾಧ್ಯಮವಾಗುತ್ತದೆ. ಲೌಕಿಕದ ತತ್ವಗಳನ್ನು ಹೇಳಲು, ಗದ್ಯ ಅಚ್ಚುಕಟ್ಟಾಗಿರುತ್ತದೆ. ಆದರೆ ಇವೆರಡರ ಮಧ್ಯೆ ಇದ್ದು ಇತ್ತ ಭೂಮಿಯ ಮೇಲೂ ನಿಲ್ಲಲಾಗದೆ ಅತ್ತ ಆಕಾಶಕ್ಕೂ ಎರಲಾಗದೆ ಇರುವ ‘ಪದ್ಯ’ ರೂಪ ಅಧಿಕಪ್ರಸಂಗಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
938
ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ ।
ಅವನರಿವಿಗೆಟುಕುವವೊಲೊಂದಾತ್ಮನಯವ ॥
ಹವಣಿಸಿದನಿದನು ಪಾಮರಜನದ ಮಾತಿನಲಿ ।
ಕವನ ನೆನಪಿಗೆ ಸುಲಭ - ಮಂಕುತಿಮ್ಮ ॥ ೯೩೮ ॥
ನಾನು ಕವಿಯಲ್ಲ, ವಿಜ್ಞಾನಿಯೂ ಅಲ್ಲ, ಕೇವಲ ಅಲ್ಲಿಂದಿಲ್ಲಿಗೆ ತಾರಾಡುವವನು. ನನ್ನ ಅರಿವಿಗೆ ಎಟುಕಿದ್ದನ್ನು ಆತ್ಮದೊಂದಿಗೆ ಅನುನಯಿಸಿ ಸಾಮಾನ್ಯ ಜನರ ಮಾತಿನಲ್ಲಿ ಹೊಂದಿಸಿಬರೆದಿದ್ದೇನೆ. ಕವನ ನೆನಪಿಗೆ ಸುಲಭವೆಂದು ಇದನ್ನು ಪದ್ಯದ ರೂಪದಲ್ಲಿ ಬರೆದಿದ್ದೇನೆ, ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.