Prayer
939
—
943
939
ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ ।
ಇಂದು ನಂಬಿಹುದೆ ಮುಂದೆಂದುಮೆಂದಲ್ಲ ॥
ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು ।
ಇಂದಿಗೀ ಮತವುಚಿತ - ಮಂಕುತಿಮ್ಮ ॥ ೯೩೯ ॥
ನಾನು ಬರೆದ ಈ ಕೃತಿಯಲ್ಲಿ ಇನ್ನು ‘ಸಂದೇಹವೇ ಇಲ್ಲ’ ಎಂದಲ್ಲ, ಇರಬಹುದು. ಇಂದು ನಾನು ನಂಬಿರುವ ವಿಷಯಗಳೇ ಮುಂದೆಯೂ ಎಂದೆಂದಿಗೂ ಅನ್ವಯ ಎಂದೂ ಅಲ್ಲ. ಯಾರಾದರೂ ನಾ ಬರೆದದ್ದರಲ್ಲಿ ಕೊರತೆ ಅಥವಾ ಕುಂದನ್ನು ತೋರಿದರೆ, ಅದನ್ನು ಒಪ್ಪಿಕೊಂಡು, ನಾನು ನನ್ನನ್ನು ತಿದ್ದಿಕೊಳ್ಳಲು ಸದಾ ಸಿದ್ಧ. ಆದರೆ ಇಂದು ನಾ ಬರೆದಿರುವುದುಇಂದಿಗೆ ಉಚಿತವೆನಿಸುತ್ತದೆ ಎಂದು, ಬಹಳ ವಿನಯವಾಗಿ, ವಿಶಾಲ ಮನೋಭಾವದಿಂದ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
940
ವ್ಯಾಕರಣ ಕಾವ್ಯ ಲಕ್ಷಣಗಳನು ಗಣಿಸದೆಯೆ ।
ಲೋಕತಾಪದಿ ಬೆಂದು ತಣಿಪನೆಳಸಿದವಂ ॥
ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು ।
ಸ್ವೀಕರಿಕೆ ಬೇಳ್ಪವರು - ಮಂಕುತಿಮ್ಮ ॥ ೯೪೦ ॥
ವ್ಯಾಕರಣ ಮತ್ತು ಕಾವ್ಯ ಲಕ್ಷಣಗಳನ್ನಾವುದನ್ನೂ ಪರಿಗಣಿಸದೆ, ಬದುಕಿನ ಬೇಗೆಯಲ್ಲಿ ಬೆಂದು, ನೊಂದು, ಬವಣೆಯಿಂದ ಸಾಂತ್ವನವನ್ನು ಬಯಸಿದವನು, ಅದರಿಂದ ಪಡೆದ ರಸಾನುಭವವನ್ನು ಮತ್ತು ತಾನು ನಂಬಿದ ವಿಚಾರವನ್ನು, ಈ ‘ ಕಗ್ಗ’ ಎಂಬ ಕಂತೆಯಲ್ಲಿ ಹೆಣೆದಿಹನು. ಬೇಕಿದ್ದವರು ಸ್ವೀಕರಿಸಬಹುದು ಎಂದು, ನಿರ್ಲಿಪ್ತತೆಯ ಪರಮಾವಧಿಯನ್ನು ಮೆರೆಯುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
941
ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ ।
ವೆಂಕನಿಗೊ ಕಂಕನಿಗೊ ಶಂಕರಾರ್ಯನಿಗೊ ॥
ಅಂಕಿತವ ಮಾಳ್ಕೆ ಜನರವರೋದಿದರೆ ಸಾಕು ।
ಶಂಕೆ ನಿನಗೇನಿಹುದೊ - ಮಂಕುತಿಮ್ಮ ॥ ೯೪೧ ॥
ಒಂದು ಹೆಸರಿಡಬೇಕು ಎನ್ನುವ ಬಿಂಕಕ್ಕೆ ‘ ಮಂಕುತಿಮ್ಮ’ನ ಹೆಸರು ಸಾಲದೇನು? ಅದಕ್ಕೆ ವೆಂಕಟರಮಣ, ಧರ್ಮರಾಯ ಅಥವಾ ಶಂಕಾರಾಚಾರ್ಯರಂತಹ ಖ್ಯಾತ ಹೆಸರುಗಳನ್ನೇ ಅಂಕಿತವನ್ನಾಗಿ ಇಡಬೇಕೇನು? ಹೆಸರಿಗಿಂತ ತತ್ವವನ್ನು ಮತ್ತು ಸತ್ವವನ್ನು ಅರಿಯಬೇಕೆಂದು ಜನರು ಓದಿದರೆ ಸಾಕು, ಅದರೊಳಗೆ ನಿನಗೇನೂ ಅನುಮಾನ ? ಎಂದು ಹೆಸರಿಗಿಂತ ಬರಹದಲ್ಲಿನ ತಿರುಳು ಮುಖ್ಯ ಎನ್ನುವಂತೆ ಹೇಳುತ್ತಾರೆ ಮಾನ್ಯ ಗುಂಡಪ್ಪನವರು.
942
ಹರಸುವುದದೇನ ನೀಂ? ವರವದೇನೆಂದರಿವೆ? ।
ಸರಿಯಿಂದು ತೋರುವುದು ನಾಳೆ ಸರಿಯಿಹುದೆ? ॥
ನಿರುಕಿಸುವುದೆಂತು ಚಿರಕಾಲದೊಳ್ಳಿತನಿಂದು? ।
ಅರಿವ ದೈವವೆ ಪೊರೆಗೆ - ಮಂಕುತಿಮ್ಮ ॥ ೯೪೨ ॥
ಮತ್ತೊಬ್ಬರನ್ನು ಹರಸುವುದಾಗಲೀ ಅಥವಾ ತನಗಾಗಿ ಏನನ್ನಾದರೂ ಬೇಡುವುದಾಗಲೀ ಮಾಡಲು ನೀನು ಅದನ್ನು ಸರಿಯಾಗಿ ಅರಿತಿದ್ದೀಯೇನು? ಏಕೆಂದರೆ ಇಂದು ಸರಿಯೆನ್ನಿಸುವುದು, ಸದಾಕಾಲ ಸರಿಯಿರುತ್ತದೆ ಎಂದು ನಿನಗೆ ಗೊತ್ತಿದೆಯೇ? ಅಥವಾ ಏನನ್ನಾದರೂ ಬೇಡುವಾಗ ನಿನಗೆ ಸೂಕ್ತವಾದದ್ದನ್ನೇ ಬೇಡುತ್ತಿದ್ದೇನೆಂದು ನಿನಗೆ ಗೊತ್ತಿದೆಯೇ? ಹಾಗಿರಬೇಕಾದರೆ ಧೀರ್ಘಕಾಲದ ಹಿತವನ್ನು ಇಂದು ಬಯಸುವುದು ಹೇಗೆ ? ಆ ದೈವವೇ ಎಲ್ಲವನ್ನೂ ಅರಿತು ಪೊರೆಯುವುದುಂಟು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
943
ಬೇಡಿದುದನೀವನೀಶ್ವರನೆಂಬ ನೆಚ್ಚಿಲ್ಲ ।
ಬೇಡಲೊಳಿತಾವುದೆಂಬುದರರಿವುಮಿಲ್ಲ ॥
ಕೂಡಿಬಂದುದನೆ ನೀನ್ ಅವನಿಚ್ಛೆಯೆಂದು ಕೊಳೆ ।
ನೀಡುಗೆದೆಗಟ್ಟಿಯನು - ಮಂಕುತಿಮ್ಮ ॥ ೯೪೩ ॥
ನೀನು ಆ ಪರಮಾತ್ಮನಲ್ಲಿ ಬೇಡಿದುದನ್ನೆಲ್ಲಾ ನಿನಗವನು ಕೊಡುವನು ಎಂದು ನಂಬಿಕೆಯಿಲ್ಲ. ಅಷ್ಟೇ ಅಲ್ಲ ಅವನಲ್ಲಿ ಏನನ್ನು ಬೇಡಬೇಕು ಮತ್ತು ಏನನ್ನು ಬೇಡಬಾರದು ಎಂಬುದರ ಪ್ರಜ್ಞೆಯೂ ನಿನಗಿಲ್ಲ. ಹಾಗಿರುವಾಗ ಆಯಾ ಸಮಯಕ್ಕೆ ಸಿಕ್ಕದ್ದನ್ನು ಆ ಪರಮಾತ್ಮನೇ ಇತ್ತದ್ದೆಂದು ಅರಿತು, ನಂಬಿ ಹಾಗೆ ಬಂದದ್ದನ್ನು ಅನುಭವಿಸಲು ನಿನ್ನ ಎದೆಯನ್ನು ಗಟ್ಟಿಯಾಗಿಸಿಕೋ ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು.