Kagga Logo

Surrender

944

945

944

ತಮೆಲ್ಲ ಹಸಿವುಗಳ ತಣಿಯಿಪನಿತನ್ಯೋನ್ಯ ।
ಹೊಮ್ಮುಗೌದಾರ್ಯ ಜನಜನಪದಂಗಳಲಿ ॥
ಬೊಮ್ಮನೆಲ್ಲರನಾಳ್ವನಿಹನೆನುವ ನೆನಪಿನಲಿ ।
ನೆಮ್ಮದಿಯ ಪಡೆಗೆ ಜಗ - ಮಂಕುತಿಮ್ಮ ॥ ೯೪೪ ॥

ಜಗತ್ತಿನ ಜನರೆಲ್ಲರ ಬಯಕೆಗಳನ್ನು ಈಡೇರಿಸಲು ಇರುವ ಜಗದ್ವಸ್ತುಗಳನ್ನು ಜಗತ್ತಿನ ಜನರೆಲ್ಲರೂ ಸೌಹಾರ್ಧತೆಯಿಂದ, ಔದಾರ್ಯದಿಂದ ಮತ್ತು ಅನ್ಯೋನ್ಯತೆಯಿಂದ ಹಂಚಿಕೊಂಡು ಬಾಳಲಿ. ಎಲ್ಲರನ್ನೂ ಕಾಯುವ ಪರಬ್ರಹ್ಮನೊಬ್ಬನಿರುವನು ಎಂದು ದೃಢವಾಗಿ ನಂಬಿ, ನೆಮ್ಮದಿಯನ್ನು ಈ ಜಗತ್ತು ಪಡೆಯಲಿ ಎಂದು ತುಂಬು ಹೃದಯದ ಆಶಯವನ್ನು ವ್ಯಕ್ತಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

945

ಶರಣುವೊಗು ಜೀವನರಹಸ್ಯದಲಿ ಸತ್ತ್ವದಲಿ ।
ಶರಣು ಜೀವನವ ಸಮವೆನಿಪ ಯತ್ನದಲಿ ॥
ಶರಣಂತರಾತ್ಮ ಗಂಭೀರಪ್ರಶಾಂತಿಯಲಿ ।
ಶರಣು ವಿಶ್ವಾತ್ಮದಲಿ - ಮಂಕುತಿಮ್ಮ ॥ ೯೪೫ ॥

ಜೀವನದ ಸತ್ವದ ರಹಸ್ಯಕ್ಕೆ ನೀನು ಶರಣಾಗು. ಈ ಜೀವನವನ್ನು ಹೂವಂತೆ ಸುಂದರವಾಗಿಸುವ ಪ್ರಯತ್ನಕ್ಕೆ ಶರಣಾಗು. ಅಂತರಂಗದ ಪ್ರಶಾಂತತೆಯಲ್ಲಿ ಗಂಭೀರವಾಗಿ ಪರತತ್ವಕ್ಕೆ ಶರಣಾಗು. ಜಗತ್ತಿನಲ್ಲಿರುವ ವಿಶ್ವಾತ್ಮಭಾವಕ್ಕೆ ಶರಣಾಗು ಎಂದು ನಾವು ನಮ್ಮ ನಮ್ಮ ಜೀವನಗಳಲ್ಲಿ ಅಂತಿಮವಾಗಿ ಸಾಧಿಸಿಬೇಕಾದ ಸ್ಥಿತಿಯನ್ನು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.