Longing for liberation
899
—
903
899
ಜಗದೀ ಜಗತ್ತ್ವವನು, ಮಾಯಾವಿಚಿತ್ರವನು ।
ಒಗೆದಾಚೆ ಬಿಸುಡೆಲ್ಲ ಕರಣವೇದ್ಯವನು ॥
ಮಿಗುವುದೇಂ? ರೂಪಾಖ್ಯೆಯೊಂದುಮಿಲ್ಲದ ವಸ್ತು ।
ಹೊಗಿಸಾ ಕಡೆಗೆ ಮತಿಯ - ಮಂಕುತಿಮ್ಮ ॥ ೮೯೯ ॥
ಜಗತ್ವದಿಂದ(ಜಗತ್ ತತ್ವ) ಆಗಿರುವ ಈ ಜಗತ್ತಿನ ಚಿತ್ರ ವಿಚಿತ್ರವಾದ ಮಾಯಾ ಚಿತ್ರವನ್ನು ತೆಗೆದು ಬಿಸಾಡು, ನಿನಗೆ ಈ ಜಗತ್ತಿನ ಅರಿವುಂಟಾಗಿಸುವ ಎಲ್ಲ ಉಪಕರಣಗಳನ್ನೂ ಒಗೆಯಾಚೆ. ನಂತರ ಮಿಗುವುದು ಏನು? ರೂಪ, ಹೆಸರು ಮುಂತಾದವುಗಳಾವುದೂ ಇಲ್ಲದ ಒಂದು ವಸ್ತು. ಅದನ್ನು ಅರಿಯಲು ನಿನ್ನ ಬುದ್ಧಿಯನ್ನು ಆ ಕಡೆ ತಿರುಗಿಸು ಎಂದು ಉಪದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
900
ಸುತ್ತ ಮುತ್ತಣ ಗಾಳಿಯಾವಗಂ ನಮ್ಮೊಡಲ- ।
ನೊತ್ತಿದೊಡಮಾ ಹೊರೆಯ ಮನಸು ಕಾಣದವೋಲ್ ॥
ಬಿತ್ತರದ ಲೋಕಭಾರವನಾತ್ಮನರಿಯದಿರೆ ।
ಮುಕ್ತ ಲಕ್ಷಣವದುವೆ - ಮಂಕುತಿಮ್ಮ ॥ ೯೦೦ ॥
ಸುತ್ತಲಿನ ಗಾಳಿ ನಮ್ಮ ದೇಹವನ್ನು ಯಾವಾಗಲೂ ಒತ್ತಿ ಹಿಡಿದ್ದರೂ, ಹೇಗೆ ಅದರ ಭಾರ ನಮ್ಮ ಮನಸ್ಸಿಗೆ ಭಾಸವಾಗುವುದಿಲ್ಲವೋ, ಹಾಗೆಯೇ ಈ ವಿಸ್ತಾರವಾದ ಲೋಕದ ಭಾರ ನಮ್ಮ ಆತ್ಮಕ್ಕೆ ಭಾಸವಾಗದಿದ್ದರೆ ಅದೇ ‘ಆತ್ಮ’ ದ ಮುಕ್ತ ಸ್ಥಿತಿ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.
901
ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ ।
ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು ॥
ನೂನದಿಂದೆಲ್ಲವನುವಬ್ಧಿಯೊಳಗದನಿರಿಸೆ ।
ಮೌನವದು ಮಣ್ಕರಗಿ - ಮಂಕುತಿಮ್ಮ ॥ ೯೦೧ ॥
ನೀರು ತುಂಬಿದ ಒಂದು ಚಿಕ್ಕ ಮಣ್ಣಿನ ಕೊಡ, ತನಗಿಂತ ಕೋಟ್ಯಾಂತರಪಟ್ಟು ಹಿರಿಯದಾದ, ಕಡಲನ್ನು ಮರೆತು, ‘ನಾನು’ ಎಂಬ ಭಾವದಿಂದ, ನಾನೇ ಎಲ್ಲವೂ, ಎನ್ನ ಬಿಟ್ಟರೆ ಬೇರಾವುದೂ ಇಲ್ಲವೆಂಬಂತಹ ಭಾವವನ್ನು ಬೀಗುತ್ತದೆ. ಆದರೆ ಆ ಕೊಡವನ್ನು ತೆಗೆದುಕೊಂಡು ಹೋಗಿ ಸಮುದ್ರದ ನೀರಿನಲ್ಲಿ ಮುಳುಗಿಸಿದರೆ ಆಗ ಆ ಕೊಡದ ನೀರು ಕಡಲ ನೀರಲ್ಲಿ ಸೇರಿ, ಆ ಕೊಡದ ಮಣ್ಣು ಕರಗಿ ಮೌನವಾಗಿ ‘ನಾನು’ ಎಂಬ ಭಾವವಿಲ್ಲದಂತಾಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
902
ಮಲಗಿದೋದುಗನ ಕೈಹೊತ್ತಿಗೆಯು ನಿದ್ದೆಯಲಿ ।
ಕಳಚಿ ಬೀಳ್ವುದು; ಪಕ್ವಫಲವಂತು ತರುವಿಂ ॥
ಇಳೆಯ ಸಂಬಂಧಗಳು ಸಂಕಲ್ಪನಿಯಮಗಳು ।
ಸಡಿಲುವುವು ಬಾಳ್ ಮಾಗೆ - ಮಂಕುತಿಮ್ಮ ॥ ೯೦೨ ॥
ಕೈಯಲ್ಲಿ ಪುಸ್ತಕವನ್ನು ಹಿಡಿದು ಓದುತ್ತಾ ಮಲಗಿದವನಿಗೆ ನಿದ್ರೆ ಬಂದರೆ ಹೇಗೆ ಕೈಯಲ್ಲಿರುವ ಪುಸ್ತಕ ಜಾರಿ ಬೀಳುತ್ತದೆಯೋ ಹಾಗೆಯೇ, ಪಕ್ವವಾದ ಫಲವೂ ಮರದಿಂದ ಬೀಳುತ್ತದೆ. ಈ ಜಗತ್ತಿನ ಸಂಬಂಧಗಳು, ಸಂಕಲ್ಪಗಳು ಮತ್ತು ನಿಯಮಗಳೂ ಸಹ ನಾವು ಅಂತರಂಗದಲ್ಲಿ ಪಕ್ವವಾದಂತೆ ಸಡಿಲವಾಗುವುವು, ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
903
ಮೋಕ್ಷದಾಶೆಯೊಳಮತ್ಯಾತುರತೆಯೊಳಿತಲ್ಲ ।
ಶಿಕ್ಷೆ ಬಹುಕಾಲ ನಡೆಯದೆ ಮೋಕ್ಷವಿಲ್ಲ ॥
ಲಕ್ಷ್ಯ ತಪ್ಪದೆ ಚರಿಸು ಸಾಮಾನ್ಯಧರ್ಮಗಳ ।
ಮೋಕ್ಷ ಸ್ವತಸ್ಸಿದ್ದ- ಮಂಕುತಿಮ್ಮ ॥ ೯೦೩ ॥
ಮೋಕ್ಷ ಪಡೆಯಬೇಕೆಂಬ ಆಸೆಯಲ್ಲಿ ಅತಿಯಾದ ಆತುರತೆ ಸರಿಯಲ್ಲ. ಏಕೆಂದರೆ ಮೋಕ್ಷದ ಸ್ಥಿತಿಗೆ ತಲುಪಲು ಬಹುಕಾಲದ ಶಿಕ್ಷೆ, ಎಂದರೆ ಶಿಕ್ಷಣ ಅಗತ್ಯ. ಆ ಹಾದಿಯಲ್ಲಿ ಗುರಿಯನ್ನು ಬಿಡದೆ ಬಹಳಕಾಲ ಸಾಮನ್ಯಧರ್ಮಗಳ ಸಾಧನೆ ಮಾಡಿದರೆ, ಮೋಕ್ಷ ಖಂಡಿತ ಸಿಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.