Kagga Logo

Punishment of naturalness

209

213

209

ದನ ಸಿಂಗ ಹುಲಿ ಹಕ್ಕಿ ಹಾವು ಮೀನ್ ಗಳಿಗೆಲ್ಲ ।
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ॥
ಮನುಜನೆಂತನಿತರಿಂ ತೃಪ್ತಿವಡೆವನವಂಗೆ ।
ಕ್ಷಣಕ್ಷಣವು ಹೊಸ ಹಸಿವು - ಮಂಕುತಿಮ್ಮ ॥ ೨೦೯ ॥

ದನ,ಸಿಂಹ, ಹುಲಿ, ಹಕ್ಕಿ, ಹಾವು, ಮೀನು ಮಂತಾದ ಪ್ರಾಣಿಗಳಿಗೆ ಹಸಿವಾದಾಗ ಆಹಾರ, ಸಂತಾನಾಭಿವೃದ್ಧಿ ಮತ್ತು ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೆ ಪೂರಕವಾದ ಅವಶ್ಯಕತೆಗಳನ್ನು ಬಿಟ್ಟರೆ ಬೇರಾವ ಆಸೆಗಳೂ ಇರದು ಮತ್ತು ಅವುಗಳ ಜೀವಿತವು ಅಷ್ಟಕ್ಕೇ ಸೀಮಿತವು. ಆದರೆ ಕೋಟ್ಯಂತರ ಆಸೆ ಆಕಾಂಕ್ಷೆಗಳ ಆಗರವೇ ಆದ ಮನುಷ್ಯ ಎಂದಿಗೂ ತೃಪ್ತನಾಗುವುದೇ ಇಲ್ಲ. ಕ್ಷಣ ಕ್ಷಣವೂ ಅವನ ಆಸೆಗಳ ಹಸಿವು ಅಧಿಕವಾಗುತ್ತಲೇ ಇರುತ್ತದೆ ಎಂಬ ಭಾವವನ್ನು ವ್ಯಕ್ತಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

210

ತಂಗಳುಣಿಸಾದೊಡಂ ಸಾಕೆನುವನುಪವಾಸಿ ।
ಸಿಂಗಾರ ಸಂಗಾತಿ ಬೇಕುಂಡವನಿಗೆ ॥
ಬಂಗಾರ ಪದವಿ ಪ್ರತಿಷ್ಠೆ ಬೇಕಾಬಳಿಕ ।
ಹಿಂಗದಾಯೆದೆಚಿಲುಮೆ - ಮಂಕುತಿಮ್ಮ ॥ ೨೧೦ ॥

ಬಹಳ ಹಸಿವಿನಿಂದಿರುವವನಿಗೆ ತಂಗಳನ್ನವಾದರೂ ತೃಪ್ತಿ ನೀಡುತ್ತದೆ. ಒಂದು ಬಾರಿ ಆ ಹಸಿವು ನೀಗಿದರೆ ಅವನಿಗೆ ಶೃಂಗಾರ, ಬಟ್ಟೆ ಬರೆ, ಸಂಗಾತಿ ಬೇಕೆನಿಸುತ್ತದೆ. ಅವುಗಳು ಸಿಕ್ಕರೆ ಮುಂದಕ್ಕೆಆಸ್ತಿಅಂತಸ್ತು ಪದವಿ ಬೇಕೆನಿಸುತ್ತದೆ, ಹೀಗೆ ಬಯಕೆಗಳ ಒರತೆ ಮನುಜನ ಮನದಲ್ಲಿ ಎಂದಿಗೂ ಹಿಂಗದು ಎಂದು ಸ್ಪಷ್ಟಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

211

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ ।
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ॥
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ ।
ಕೊನೆಯೆಲ್ಲಿ? ಚಿಂತಿಸೆಲೊ - ಮಂಕುತಿಮ್ಮ ॥ ೨೧೧ ॥

ಮನುಷ್ಯನ ಮನಸ್ಸು ಬೆಳೆದಂತೆಲ್ಲ ಅವನ ಮನಸ್ಸಿನ ಹಸಿವೂ ಸಹ ಬೆಳೆಯುತ್ತದೆ. ಆ ಹಸಿವನ್ನು ಇಂಗಿಸಲು ಮನಸ್ಸು ಬಗೆ ಬಗೆಯ ಉಪಾಯಗಳನ್ನು ಹುಡುಕುತ್ತದೆ. ಈ ರೀತಿಯ ಹಸಿವು ಮತ್ತು ಆ ಹಸಿವಿನ ತಣಿಯುವಿಕೆಯಿಂದ ಮನುಷ್ಯನ ಬಾಹ್ಯ ಜೀವನ ಉತ್ತಮವಾಗಬಹುದು.ಈ ರೀತಿ ಆಸೆ ಪಡುವುದು, ಆ ಆಸೆಗಳನ್ನು ತೀರಿಸಿಕೊಳ್ಳಲು ಹಲವಾರು ಉಪಾಯಗಳನ್ನು ಮಾಡುವುದು ಮತ್ತು ಈ ಉಪಾಯಗಳಿಂದ ಉನ್ನತ ಸ್ಥಾನ ಹೊಂದುವುದು, ಹೀಗೆ ನಡೆಯುವ ಏಳಿಗೆಗೆ ಕೊನೆಯಲ್ಲಿ ಎಂದು ಒಂದು ಪ್ರಶ್ನೆಯ ಮೂಲಕ ಬಹಳ ಗಹನವಾದ ವಿಚಾರವನ್ನು ಈ ಕಗ್ಗದಲ್ಲಿ ಪ್ರಸ್ತುತ ಪಡಿಸುತ್ತಾರೆ ಮಾನ್ಯ ಗುಂಡಪ್ಪನವರು.

212

ದಿನದಿನವು ಹಳಸುವುವು, ದಿನದಿನವು ಕೊಳೆಯುವುವು ।
ಮನುಜಕುಲದೆಲ್ಲ ಕೃತಿವಿಜಯವಿಭವಗಳು ॥
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ ।
ಜನುಮಸಫಲತೆ ನಿನಗೆ - ಮಂಕುತಿಮ್ಮ ॥ ೨೧೨ ॥

ಮನುಷ್ಯನ ಕೆಲಸಗಳು, ಸಾಧನೆಗಳು ಮತ್ತು ಅದರ ವೈಭವಗಳು ದಿನ ಕಳೆದಂತೆ ಹಳತಾಗುತ್ತಾ ಹೋಗುತ್ತದೆ ಮತ್ತು ಹಳಸುತ್ತಾ, ಕೊಳೆಯುತ್ತಾ ಹೋಗುತ್ತದೆ. ಅಂತಹ ಹಳಸಿದ ಮತ್ತು ಕೊಳೆತ ಸಾಧನೆಗಳನ್ನು ಮತ್ತೆ ತೊಳೆದು ಹೊಳಪನ್ನು ನೀಡುವುದೇ ನೀನು ಸಾಧಿಸುವ ಸಫಲತೆ, ಹೇ ! ಮಾನವ ಎಂದು ಉದ್ಘಾರವನ್ನು ತೆಗೆಯುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

213

ಸಾಜಗುಣವೆಂದುಪೇಕ್ಷಿಪೆಯ ನಿನ್ನವಗುಣವ? ।
ಸಾಜವನು ಬಿಟ್ಟಲುಗದಿಹುದು ಮೃಗಕೀಟ ॥
ಸಾಜವಂ ಶಿಕ್ಷಿಸುತ ಲೋಕಸಂಸ್ಥಿತಿಗದನು ।
ಯೋಜಿಪುದೆ ನರಮಹಿಮೆ - ಮಂಕುತಿಮ್ಮ ॥ ೨೧೩ ॥

ತನ್ನ ಅವಗುಣಗಳನ್ನು ತೀರಾ ಸಾಮಾನ್ಯವೆಂದು ಅಥವಾ ಸಹಜವೆಂದು ಅವುಗಳನ್ನು ಉಪೇಕ್ಷಿಸುತ್ತಾನೆ ಮನುಷ್ಯ. ಆದರೆ ಪ್ರಾಣಿ, ಪಕ್ಷಿ, ಕೀಟಗಳು ತಮ್ಮ ಸಹಜ ಗುಣವನ್ನು ಬಿಡುವುದೇ ಇಲ್ಲ. ಹೀಗೆ ಇವನ ದುರ್ಗುಣಗಳನ್ನು ದಂಡಿಸುತ ಅಥವಾ ತಿದ್ದುತ್ತಾ ಈ ಜಗತ್ತಿನಲ್ಲಿ ಮಾನವನ ಬದುಕನ್ನು ಒಂದು ವ್ಯವಸ್ಥಿತವಾದ ರೀತಿಯಲ್ಲಿ ಇಡಬೇಕೆಂದು ಯತ್ನಿಸುವುದೇ ನಿರಂತರವಾಗಿ ನಡೆದಿರುವ ಮನುಷ್ಯ ಪ್ರಯತ್ನವೆಂದು ಒಂದು ಗಹನವಾದ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.