Artificial comes from natural
214
—
218
214
ಸಹಜ ನಗ್ನತೆ ನಮಗೆ, ಸಹಜ ನಖದಾಡಿಗಳು ।
ಬಹುಯುಗದ ಸಂಸ್ಕಾರ ವಸ್ತ್ರ ಸಿಂಗಾರ ॥
ಸಹಜತೆ ನಿರಕ್ಷರತೆ, ವಿದ್ಯೆ ತಾಂ ಕೃತಕವಲ ।
ಸಹಜಿದಿನೆ ಕೃತಕಮುಂ - ಮಂಕುತಿಮ್ಮ ॥ ೨೧೪ ॥
ನಗ್ನತೆಯು ಮನುಜನಿಗೆ ಸಹಜ. ಈ ದೇಹದಲ್ಲಿ ಉಗುರುಗಳು ಗಡ್ಡ ಮೀಸೆಗಳು ಸಹಜ. ಆದರೆ ಸಾವಿರಾರು ವರ್ಷಗಳಕಾಲದ ಸಂಸ್ಕಾರದಿಂದ ಮನುಷ್ಯ ಬಟ್ಟೆ ಹಾಕಿಕೊಳ್ಳುವುದನ್ನು, ತನ್ನನ್ನು ತಾನು ಸಿಂಗರಿಸಿಕೊಳ್ಳುವುದನ್ನು ಕಲಿತಿದ್ದಾನೆ. ಹಾಗೆಯೇ ನಿರಕ್ಷರತೆ ಸಹಜ. ಇವನು ಅಕ್ಷರವನ್ನು ಮತ್ತು ವಿದ್ಯೆಯನ್ನು ಕಲಿತ. ಆ ಸಹಜತೆಯಿಂದ ಬಂದ ಕೃತಕತೆಯೇ ಇದು. ಹಾಗಾಗಿ ಹೊರಕಾಣುವ ಕೃತಕತೆಯು ಸಹಜತೆಯಿಂದಲೇ ಬರುತ್ತದೆ ಎಂದು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
215
ಇಹುದಕಿಂತೊಳಿತಿಹುದು; ಒಳಿತ ಗಳಿಸಲ್ಬಹುದು ।
ಸಹಿಸಿಸುವೆನದಕೆನುವ ಮತಿಯಿನೇ ಪ್ರಗತಿ ॥
ರಹಸಿಯದ ಬುಗ್ಗೆಯದು, ಚಿಮ್ಮುತಿಹುದೆಲ್ಲರೊಳು ।
ಸಹಜವಾ ಮತಿ ಕೃತಕ - ಮಂಕುತಿಮ್ಮ ॥ ೨೧೫ ॥
ಈಗ ಇರುವ ಸ್ಥಿತಿಗಿಂತ ಇನ್ನೂ ಉತ್ತಮ ಸ್ಥಿತಿ ಇದೆ, ಒಳಿತಾದ ಸ್ಥಿತಿಯನ್ನು ಪಡೆಯಬಹುದು. ಅದಕ್ಕಾಗಿ ನಾನು ಸಾಹಸ ಮಾಡುತ್ತೇನೆ ಎನ್ನುವುದೇ ಮನುಷ್ಯ ಬುದ್ಧಿ. ಆ ರೀತಿ ಹೊಮ್ಮುವ ಬುದ್ಧಿಯ ಬುಗ್ಗೆಗಳೇ ಪ್ರಗತಿಗೆ ಹಾದಿ. ಈ ರೀತಿಯ ಯೋಚನೆಗಳು ಬುಗ್ಗೆ ಬುಗ್ಗೆಯಾಗಿ, ಅಲೆ ಅಲೆಯಾಗಿ ಎಲ್ಲರಲ್ಲೂ ಸಹಜವಾಗೇ ಇರುತ್ತದೆ. ಈ ರೀತಿ ಇರುವ ಸಹಜ ಬುದ್ಧಿಯೂ ಸಹ ಸಹಜದಿಂದ ಉದ್ಭವವಾದ ಕೃತಕತನವೇ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
216
ಸಿರಿ ಸೊಬಗುಗಳ ಬೆದಕು, ಕೆಳೆ ಬಲುಮೆಗಳ ಬೆದಕು ।
ಪರಬೊಮ್ಮ ನಾಟಕದ ವೇಷಚೇಷ್ಟೆ ॥
ಅರಸುತಿಹ ಜೀವ ನಾಯಕನು, ನಾಯಕಿಯವನ ।
ಕೆರಳಿಸುವ ಮೋಹರುಚಿ - ಮಂಕುತಿಮ್ಮ ॥ ೨೧೬ ॥
ಮಾನವನಿಗಿರುವ, ಐಶ್ವರ್ಯ ಅಲಂಕಾರಗಳ ಅರಸುವಿಕೆಯ ಆಸೆ, ಸ್ನೇಹ, ಬಂಧನ ಮತ್ತು ಬಲ ಪ್ರದರ್ಶನದಆಸೆ, ಇವೆಲ್ಲವುಗಳನ್ನೂ ಮನುಷ್ಯನ ಮನಗಳಲ್ಲಿ ತುಂಬಿ ಹಲವಾರು ವೇಷಗಳನ್ನು ಹಾಕಲು ಹುರಿದುಂಬಿಸುವುದು ಕೇವಲ ಆ ಪರಮಾತ್ಮನ ಜಗನ್ನಾಟಕದ ಒಂದು ಬಾಗವಷ್ಟೇ . ಪರಮ ಚೇತನದ ಅಂಶವಾದ ಈ ಜೀವನು ಈ ನಾಟಕದ ನಾಯಕನು ಮತ್ತು ಇವನನ್ನು ಈ ನಾಟಕದಲ್ಲಿ ಪಾತ್ರವಹಿಸಲು ಪ್ರೇರೇಪಿಸುವ ನಾಯಕಿಯೇ ಹಲವಾರು ರೀತಿಯ ಆಸೆಗಳು ಮತ್ತು ಜಗತ್ತಿನ ಮೋಹಗಳೆಂದು, ಬಹಳ ಸೂಕ್ಷ್ಮವಾದ ವಿಚಾರವನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖಿಸಿದ್ದಾರೆ.
217
ಆಗಸದ ಬಾಗು, ಚಂದ್ರಮನ ಗುಂಡಿನ ನುಣ್ಪು ।
ಸಾಗರದ ತೆರೆವಂಕು, ಗಿಡಬಳ್ಳಿ ಬಳುಕು ॥
ಮೇಘವರ್ಣಚ್ಛಾಯೆ - ಯೀಸೃಷ್ಟಿಯಿಂ ನಮ್ಮೊ ।
ಳಾಗಿಹುದು ರೂಪರುಚಿ - ಮಂಕುತಿಮ್ಮ ॥ ೨೧೭ ॥
ದಿಗಂತದಲ್ಲಿ ಕಾಣುವ ಬಾಗಿದಂತ ಮುಗಿಲು, ನುಣುಪಾಗಿ ಮತ್ತು ಗುಂಡಾಗಿ ಕಾಣುವ ಹುಣ್ಣಿಮೆಯ ಚಂದಿರ, ಅಂಕುಡೊಂಕಾದ ಸಾಗರದ ಅಲೆಗಳು, ಚಿತ್ರ ವಿಚಿತ್ರ ವಿನ್ಯಾಸದ ಗಿಡ ಬಳ್ಳಿಗಳ ಬಳುಕು, ಹಲ ವಿದವಾದ ವರ್ಣಗಳನ್ನು ಧರಿಸುವ ಮೋಡಗಳು, ಆ ಮೋಡಗಳ ವಿನ್ಯಾಸದಿಂದ ಭೂಮಿಯಮೇಲೆ ಬೀಳುವ ನೆರಳಿನಾಕಾರಗಳು, ಹೀಗೆ ಸೃಷ್ಟಿಯ ಹಲವಾರು ವಿಚಿತ್ರಗಳೇ ನಮ್ಮೊಳಗಿನ ರೂಪ ಮತ್ತು ರುಚಿಗಳಿಗೆ ಕಾರಣವಾಗಿವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ
218
ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿ ।
ನೆರೆಯಿಸುತ ಪರಿಪರಿಯ ರಸಗಳಂ ಪ್ರಕೃತಿ ॥
ಕೆರಳಿಸುತ ಹಸಿವುಗಳ, ಸವಿಗಳನು ಕಲಿಸುವಳು ।
ಗುರು ರುಚಿಗೆ ಸೃಷ್ಟಿಯಲ - ಮಂಕುತಿಮ್ಮ ॥ ೨೧೮ ॥
ವಿಧ ವಿಧವಾದ ರೂಪಗಳಲ್ಲಿ, ಕಾಂತಿಗಳಲ್ಲಿ, ಹಲವಾರು ಇಂಪಾದ ದನಿಗಳಲ್ಲಿ, ರಸಭರಿತವಾಗಿ ಪ್ರಕಟಗೊಂಡು, ಪ್ರಕೃತಿ, ನಿಸರ್ಗಅವುಗಳಲ್ಲಿಈ ಜಗತ್ತಿನ ಜೀವಿಗಳ ಮನಸ್ಸಿನಲ್ಲಿ ಆಸೆ ಹಸಿವು ಬಯಕೆ ಮತ್ತು ರುಚಿಗಳಂಥಾ ಭಾವಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಸೃಷ್ಟಿಯೇ ರುಚಿಗಳಿಗೆ ಗುರು ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡಿದ್ದಾರೆ.