Explosion of truth
219
—
223
219
ಅರೆಯರೆಯ ನಮಗೆ ತೋರ್ಪೊಲವು ಚೆಲುವುಗಳೆಲ್ಲ ।
ಪರಿಪೂರ್ಣ ಸುಖ ಸತ್ತ್ವ ಸಾಗರದ ತೆರೆಗಳ್ ॥
ತರಣಿ ದೂರದೊಳಿಹನು; ಕಿರಣ ನಮಗೆಟಕುವುದು ।
ತೆರೆಯು ನೆರೆತದ ಕುರುಹೊ - ಮಂಕುತಿಮ್ಮ ॥ ೨೧೯ ॥
ನಮಗೆ ಕಾಣುವ ಒಲವು ಚೆಲುವುಗಳೆಲ್ಲ, ಅರೆ ಬರೆ. ಒಂದು ಪರಿಪೂರ್ಣತೆಯ ಅಪೂರ್ಣ ರೂಪ. ಮಹಾನ್ ಸಾಗರದಲ್ಲಿ ಎದ್ದ ತೆರೆಗಳಂತೆ. ಹೇಗೆ ದೂರದಲ್ಲಿರುವ ಸೂರ್ಯನ ಕಿರಣಗಳನ್ನು ಮಾತ್ರ ನಾವು ಕಾಣುತ್ತೇವೆಯೋ, ಹೇಗೆ ಉಕ್ಕುವ ಸಾಗರದ ತೆರೆಗಳನ್ನು ಮಾತ್ರ ನಾವು ನೋಡಲಿಕ್ಕಾಗುತ್ತದೆಯೋ, ಹಾಗೆ ಪರಬ್ರಹ್ಮನ ಈ ಸೃಷ್ಟಿಯಲ್ಲಿಯೂ ಸಹ ನಾವು ನೋಡುವುದು ಕೇವಲ ಹೊರನೋಟ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖ ಮಾಡಿದ್ದಾರೆ.
220
ಸೌಂದರ್ಯ ಬಾಂಧವ್ಯಗಳು ಸತ್ಯವಲ್ಲದೊಡೆ ।
ಕುಂದುವಡೆಯದ ಸತ್ಯವಿಳೆಯೊಳಿನ್ನೆಲ್ಲಿ? ॥
ಗಂಧಾನಿಲಂಗಳವು ಪರಸತ್ತ್ವಪುಷ್ಪದವು ।
ಸಂದೇಹವೇನಲವೊ - ಮಂಕುತಿಮ್ಮ ॥ ೨೨೦ ॥
ಈ ಜಗತ್ತಿನ ಸೌಂದರ್ಯ, ಬಾಂಧವ್ಯಗಳು ಸತ್ಯವಲ್ಲದಿದ್ದರೆ, ಕುಂದದ, ಕಡಿಮೆಯಾಗದ ಸತ್ಯವು ಈ ಜಗತ್ತಿನಲ್ಲಿ ಎಲ್ಲಿದೆ ಎಂದರೆ ಪುಷ್ಪದಲ್ಲಿ ಉತ್ತಮವಾದ ಸತ್ವದಂತೆ ಬಂದು ಸೇರುವ ಗಂಧದಂತೆ ಈ ಜಗತ್ತಿನಲ್ಲಿ ಪರಮಾತ್ಮ ತತ್ವದಿಂದ ಈ ಸೌಂದರ್ಯ ಬಾಂಧವ್ಯಗಳೆಲ್ಲ ಬಂದು ಸೇರಿವೆ, ಇದರಲ್ಲಿ ಸಂದೇಹವೇನೂ ಇಲ್ಲ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
221
ಅರೆಗಳಿಗೆಯನುಭವವೆ ಮಾನಸವ ಕರಗಿಸದೆ? ।
ಪರಿಪಕ್ವಗೊಳಿಸದೇನದು ಜೀವರಸವ? ॥
ಉರಿ ತಣಿಪುಗಳಿನಾತ್ಮಸಂಸ್ಕಾರಗಳನೆಸಪ ।
ಪುರಳ ಪುಸಿಯೆನ್ನುವೆಯ? - ಮಂಕುತಿಮ್ಮ ॥ ೨೨೧ ॥
ಜೀವನದಲ್ಲಿ ಒಂದು ಅರೆಗಳಿಗೆಯಲ್ಲಿ ಆಗುವ ಅನುಭವವು ನಮ್ಮ ಮನಸ್ಸನ್ನು ಕರಿಗಿಸದೆ? ನಮ್ಮಲ್ಲಿ ಹರಿಯುವ ಜೀವರಸವನ್ನು ಪರಿಪಕ್ವಗೊಳಿಸದೇನುಅದು? ಉರಿ ಮತ್ತು ಶೀತಲತೆಗಳು ಆತ್ಮವನ್ನು ಸಂಸ್ಕರಿಸುವ ಆ ತಿರುಳನ್ನು, ಸತ್ವವನ್ನು ಹುಸಿಯನ್ನುತೀಯಾ ನೀನು? ಎಂದು ಒಂದು ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.
222
ಆವುದೋ ಒಳಿತೆಂದು ಆವುದೋ ಸೊಗವೆಂದು ।
ಆವಾವ ದಿಕ್ಕಿನೊಳಮಾವಗಂ ಬೆದಕಿ ॥
ಜೀವ ಪರಿಧಾವಿಪವೊಲ್ ಆಗಿಪಂತರ್ವೃತ್ತಿ ।
ಭಾವುಕದ ನೆಲೆಯ ಕರೆ - ಮಂಕುತಿಮ್ಮ ॥ ೨೨೨ ॥
ಯಾವುದೋ ಒಳ್ಳೆಯದೆಂದು ಮತ್ಯಾವುದೋ ಸೊಗಸೆಂದು ಬೇರೆ ಬೇರೆ ದಿಕ್ಕಿನಲ್ಲಿ ಸದಾಕಾಲ ಹುಡುಕುತ್ತಾ ಓಡುವಂತೆ ಮಾಡುವ ನಮ್ಮ ಅಂತರ್ಯಕ್ಕೆ ಇಂಬುನೀಡುವುದು ನಮ್ಮ ನಮ್ಮ ಭಾವನೆಯ ಕೂಗು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
223
ಒಡೆಯನಾವೆಡೆ ಸಾರ್ದನೆಂದು ಪದವಾಸನೆಯ ।
ತಡಕಿ ಮೂಸುತ ಶುನಕನಲೆದಾಡುವಂತೆ ॥
ಬಡಜಗವನೊಳಿತಕೆಂದತ್ತಿತ್ತ ಪುಡುಕಿಸುವ ।
ಬೆಡಗು ಶಿವನೊಡವೆಯದೊ - ಮಂಕುತಿಮ್ಮ ॥ ೨೨೩ ॥
ತನ್ನ ಒಡೆಯ ಎತ್ತ ಹೋದನೆಂದು ಅವನ ಕಾಲ ವಾಸನೆಯನ್ನು ಮೂಸುತ್ತಾ ಅಲೆಯುವ ನಾಯಿಯಂತೆ, ಈ ಜಗತ್ತಿನಲ್ಲಿ ತನಗೆ ಒಳಿತಾವುದು ಎಂದುನಾವುಹುಡುಕುವಂತೆ ಮಾಡುವ ಈ ಲೋಕಮಾಯೆಯೇ ಆ ಪರಶಿವನ ಅಲಂಕಾರದ ಒಡವೆಯೋ ಎಂದು ಒಂದು ಉದ್ಘಾರವನ್ನು ತೆಗೆಯುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.