Essense of Progress
224
—
228
224
ಅದು ಬೇಕು ಇದು ಬೇಕು ಮತ್ತೊಂದು ಬೇಕೆಂದು ।
ಬೆದಕುತಿರುವುದು ಲೋಕ ಸೊಗದಿರವನೆಳಸಿ ॥
ಹೃದಯಗುಹೆಯಾ ಸುಖಧ್ಯಾನದೂಟೆಯೆ ಸಾಕ್ಷಿ ।
ಮುದಗಳಮಿತದ ನಿಧಿಗೆ - ಮಂಕುತಿಮ್ಮ ॥ ೨೨೪ ॥
ಮನುಷ್ಯರ ಹೃದಯಗಳಲ್ಲಿ ಮಿತಿಯಿಲ್ಲದಸುಖಗಳಆಸೆಯ ಒರತೆ ಅಥವಾ ಊಟೆ ಬತ್ತುವುದೇ ಇಲ್ಲ. ಸದಾಕಾಲಮನಸ್ಸು “ಅದು ಬೇಕು ಇದು ಬೇಕು ಮತ್ತೊಂದು ಬೇಕು” ಎಂದು ಮತ್ತು ಅದು “ಎಲ್ಲಿ ಸಿಗುತ್ತದೆ” ಎಂದು ಹುಡುಕಾಡುತ್ತಲೇಇರುತ್ತದೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈಕಗ್ಗದಲ್ಲಿ.
225
ಶರಧಿಯೊಳಗಣ ವಸ್ತುಗಳನಲಚಿ ಜಾಲಿಸುವ ।
ತೆರೆಯಂತೆ ವಿಶ್ವಸತ್ತ್ವದ ಲಹರಿ ನಮ್ಮ ॥
ಹೊರಗೊಳಗುಗಳಲಿ ಸಂತತ ನೆರೆದು ಹರಿಯುತ್ತ ।
ಭರಿಸುತಿರುವುದು ಬಾಳ - ಮಂಕುತಿಮ್ಮ ॥ ೨೨೫ ॥
ಸಮುದ್ರದೊಳಗಿರುವ ವಸ್ತುಗಳನ್ನು ಕೇರಿ ಜಾಲಿಸುವ ಸಾಗರದ ತೆರೆಗಳಂತೆ, ಈ ಜಗತ್ತಿನ ಸೃಷ್ಟಿಯ ತತ್ವಗಳು ನಮ್ಮ ಒಳಗು ಹೊರಗುಗಳಲ್ಲಿ ತುಂಬಿ ಹರಿಯುತ್ತಾ ನಮ್ಮ ಜೀವನವನ್ನು ಭರಿಸುತ್ತಿದೆ ಎಂದು ಪ್ರಸ್ತಾಪಮಾಡುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
226
ಉಸಿರವೊಲನುಕ್ಷಣಂ ಪುರುಷನೊಳವೊಗುತವನ ।
ಪೊಸಬನಂಗೆಯ್ದು ದೈವಿಕಸತ್ತ್ವಮವನುಂ ॥
ಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆ ।
ಬೆಸಸುತಿಹುದೇಗಳುಂ - ಮಂಕುತಿಮ್ಮ ॥ ೨೨೬ ॥
ಉಸಿರು ನಮ್ಮ ದೇಹದೊಳಕ್ಕೆ ಹೊಕ್ಕು, ನಮಗೆ ಪ್ರತಿ ಉಸಿರಾಟದಲ್ಲೂ ಒಂದು ಹೊಸತನವನ್ನು ನೀಡುವಂತೆ ಆ ಪರಮಾತ್ಮ ತತ್ವವು ಮನುಷ್ಯನ ಒಳಹೊಕ್ಕು ಅವನಿಗೆ ಹೊಸತನವನ್ನು ನೀಡಿ ಲೋಕಕ್ಕೆ ಹೊಸತನವನ್ನು ನೀಡಲು ದುಡಿಯುವಂತೆ ಪ್ರೇರೇಪಿಸುತ್ತದೆ. ಈ ರೀತಿಯ ಪರಸ್ಪರ ಬೆಸುಗೆ ಪರಮಾತ್ಮ ತತ್ವಕ್ಕೂ ಮನುಷ್ಯನಿಗೂ ಸದಾಕಾಲ ಇರುತ್ತದೆ ಎಂದು ಪ್ರತಿಪಾದಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
227
ನೂತ್ನತೆಯ ಪೂರ್ಣತೆಯನನ್ಯೂನತೆಯ ಗಳಿಪ ।
ಯತ್ನಮೆ ಪೌರುಷಪ್ರಗತಿ; ಅದೆ ಪ್ರಕೃತಿ ॥
ವಿಜ್ಞಾನ ಶಾಸ್ತ್ರ ಕಲೆ ಕಾವ್ಯ ವಿದ್ಯೆಗಳೆಲ್ಲ ।
ಧನ್ಯತೆಯ ಬೆದಕಾಟ - ಮಂಕುತಿಮ್ಮ ॥ ೨೨೭ ॥
ಹೊಸತನವನ್ನು ಪೂರ್ಣತೆಯನ್ನು ಕುಂದಿಲ್ಲದ್ದನ್ನು ಗಳಿಸುವ ಪ್ರಯತ್ನವೇ ಪುರುಷನ ಪ್ರಗತಿಯ ಪ್ರತೀಕ. ಪ್ರಕೃತಿಯನ್ನು ಆರಾಧಿಸುವುದು, ವಿಜ್ಞಾನ, ಕಲೆ, ಕಾವ್ಯ, ಸಾಹಿತ್ಯ, ಸಂಗೀತ ಮುಂತಾದ ವಿದ್ಯೆಗಳೆಲ್ಲವೂ ಮನುಷ್ಯ ಪರಿಪೂರ್ಣತೆಯಡೆಗೆ ನಡೆಯಲು ಬೇಕಾದ ಸಾಧನಗಳು ಮತ್ತು ಅವುಗಳ ಮೂಲಕವೇ ಪರಿಪೂರ್ಣತೆಯ ಸಾಧನೆ ಸಾಧ್ಯವೆಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖಮಾಡಿದ್ದಾರೆ.
228
ಮತಿಯು ತಾಂ ಸತ್ಯಶುಭಗಳ ನವನವಾಂಶಗಳ ।
ಗತಿಯನರಸುತ ನಡೆಯೆ ಪೌರುಷಪ್ರಗತಿ ॥
ಮತ ನೀತಿ ಶಾಸ್ತ್ರಗಳು ರಾಜ್ಯಸಂಧಾನಗಳು ।
ಮತಿಯ ಕಿಂಚಿದ್ವಿಜಯ - ಮಂಕುತಿಮ್ಮ ॥ ೨೨೮ ॥
ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಹೊಸ ಹೊಸ ವಿಚಾರಗಳನ್ನು ಹೊಸಹೊಸ ವಿಷಯ ವಸ್ತುಗಳನ್ನು ಹುಡುಕಲು ಉಪಯೋಗಿಸಿ ನಡೆದರೆ ಪುರುಷ ಪ್ರಗತಿ . ಆ ರೀತಿಯ ಪ್ರಯತ್ನದಲ್ಲಿ ಲಭಿಸಿದ ಅಲ್ಪಮಾತ್ರ ವಿಜಯವೇ ವಿಜ್ಞಾನ, ನೀತಿ ಶಾಸ್ತ್ರಗಳು, ಅವನು ಕಟ್ಟಿದ ರಾಜ್ಯಗಳು ಮುಂತಾದವುಗಳು ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಹೇಳುತ್ತಾರೆ.