Kagga Logo

Eternal dharma of life

229

233

229

ತೊರೆಯ ತೆರೆಸಾಲ್ಗಳೇಳುತ ಬೀಳುತಿರುವಂತೆ ।
ಪರಿಯುತಿರ್ಪುದು ಪುರುಷಚೈತನ್ಯಲಹರಿ ॥
ಅರಿಯದದು ನಿಲುಗಡೆಯ, ತೊರೆಯದದು ಚಲಗತಿಯ ।
ಪರಬೊಮ್ಮನುಯ್ಯಲದು - ಮಂಕುತಿಮ್ಮ ॥ ೨೨೯ ॥

ಪುರುಷ ಚೈತನ್ಯ, ನದಿಯ ತೆರೆಯಂತೆ ಏಳುತ್ತಾ ಬೀಳುತ್ತಾ ಹರಿಯುತ್ತಿದೆ. ಅದಕ್ಕೆ ತನ್ನ ನಿಲುವೆಲ್ಲಿ ಎಂದು ಗೊತ್ತಿಲ್ಲ. ಅದು ತನ್ನ ಚಲನೆಯ ಗತಿಯೂ ಗೊತ್ತಿಲ್ಲ. ಈ ಜಗತ್ತಿನಲ್ಲಿ ಹರಿಯುವ ಪರಮ ಚೈತನ್ಯದ ಚಲನೆ ಆ ಪರಮಾತ್ಮನ ಉಯ್ಯಾಲೆಯಂತಿದೆ ಎಂದು ಬಹಳ ಗಹನ ತತ್ವದ ಪ್ರತಿಪಾದನೆಯನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ .

230

ತೆರೆಯೇಳುವುದು ದೈವಸತ್ತ್ವ ನರನೊಳು ನೆರೆಯೆ ।
ತೆರೆ ಬೀಳುವುದು ಕರ್ಮವಿಧಿಯಿದಿರು ಪರಿಯೆ ॥
ತೆರೆಯನಾನುತೆ ತಗ್ಗು, ತಗ್ಗನಾನುತಲಿ ತೆರೆ ।
ತೆರೆತಗ್ಗುಗಳಿನೆ ತೊರೆ - ಮಂಕುತಿಮ್ಮ ॥ ೨೩೦ ॥

ಮನುಷ್ಯನ ಮನಸ್ಸಿನಲ್ಲಿ ಆ ಪರಮಾತ್ಮ ತತ್ವ ತುಂಬಿದಾಗ ಒಂದು ಆಧ್ಯಾತ್ಮಿಕ ಭಾವ ಉನ್ನತವಾಗಿರುತ್ತದೆ. ಆದರೆ ಬದುಕಿನ ಕೆಲಸಕಾರ್ಯಗಳಲ್ಲಿ ಮಗ್ನರಾದಾಗ ಆ ಭಾವ ಮರೆಯಾಗಿ ನಾವು ಮತ್ತೆ ಪ್ರಾಪಂಚಿಕ ವಿಷಯಗಳಲ್ಲಿ ಬೀಳುತ್ತೇವೆ. ಮತ್ತೆ ಆ ಪಾರಮಾರ್ಥಿಕ ಭಾವ ಮನದಲ್ಲಿ ತುಂಬಿಕೊಂಡಾಗ ಮತ್ತೆ ಮೇಲೇಳುತ್ತೇವೆ ಹೀಗೆ ಏಳುತ್ತಾ ಬೀಳುತ್ತಾ ಸಾಗುವುದೇ ಜೀವನದ ಪ್ರಯಾಣ ಎಂದು ಒಂದು ಸುವಿಚಾರವನ್ನು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

231

ಇಂದೆದ್ದ ತೆರೆ ನಾಳೆ ಬೀಳುವುದು; ಮರುವಗಲು ।
ಮುಂದೆ ತಾನೇಳುವುದು ಬೇರೆ ಗಾತ್ರದಲಿ ॥
ಇಂದು ನಾಳೆಗಳನೆಲ್ಲವ ಕೂಡಿ ನೋಡಿದೊಡೆ ।
ಮುಂದಹುದು ಬೆರಗೊಂದೆ - ಮಂಕುತಿಮ್ಮ ॥ ೨೩೧ ॥

ಇಂದು ಎದ್ದ ತೆರೆ ಬೀಳುವುದು ಮತ್ತೆ ಮರುದಿವಸ ಇನ್ನೊಂದು ತೆರೆ ಬೇರೆ ಗಾತ್ರದಲಿ ಏಳುವುದು. ಹಾಗೆ ಇಂದು ನಾಳೆಗಳ ಬೇರೆ ಬೇರೆ ಗಾತ್ರದ ತೆರೆಗಳನ್ನೆಲ್ಲ ಒಟ್ಟುಗೂಡಿಸಿದರೆ ಅದರ ಹಿಂದೆ ನಮಗೆ ಒಂದು ವಿಶಾಲವಾದ ಕಡಲು ಕಾಣುವಂತೆ, ನಮ್ಮ ಮನಸ್ಸುಗಳಲ್ಲಿ ಬೇರೆ ಬೇರೆ ರೀತಿಯಲ್ಲಿ, ರೂಪದಲ್ಲಿ, ಗಾತ್ರದಲ್ಲಿ ಮತ್ತು ಬೇರೆ ಸಮಯದಲ್ಲಿ, ಬೇರೆ ಬೇರೆ ಕಾರಣಗಳಿಗೆ ಎಂದ್ದಂತಹ ಪರತತ್ವದ ಭಾವಗಳನ್ನೆಲ್ಲ ಒಟ್ಟು ಮಾಡಿದರೆ ನಮಗೆ ಆ ಪರತತ್ವದಿಂದ ಪ್ರತಿರೂಪವಾದ ಪರಮಾತ್ಮನ ಅರಿವು ಮೂಡುತ್ತದೆ ಎಂದು ಒಂದು ಗಹನವಾದ ವಿಚಾರವನ್ನು ಈ ಕಗ್ಗದ ಮೂಲಕ ಮಾನ್ಯ ಗುಂಡಪ್ಪನವರು ಮಂಡಿಸಿದ್ದಾರೆ.

232

ಬೀಳುವುದ ನಿಲ್ಲಿಪುದು, ಬಿದ್ದುದನು ಕಟ್ಟುವುದು ।
ಹಾಲೊಡೆಯೆ ಕಡೆದದನು ತಕ್ರವಾಗಿಪುದು ॥
ಹಾಳ ಹಾಳಾಗಿಪುದು, ಹಳದ ಹೊಸತಾಗಿಪುದು ।
ಬಾಳಿಗಿದೆ ಚಿರಧರ್ಮ - ಮಂಕುತಿಮ್ಮ ॥ ೨೩೨ ॥

ಬೀಳುವುದನ್ನು ಎತ್ತಿ ನಿಲ್ಲಿಸುವುದು, ಬಿದ್ದುದ್ದನ್ನು ಕಟ್ಟಿ ನಿಲ್ಲಿಸುವುದು, ಹಾಲು ಒಡೆದರೆ( ಮೊಸರಾದರೆ) ಅದನ್ನು ಕಡೆದು ಮಜ್ಜಿಗೆಯನ್ನಾಗಿಸುವುದು, ಯಾವುದಾರೂ ವಸ್ತು ಹಾಳಾದರೆ ಹಾಗೆಯೇ ಬಿಡುವುದು, ಹಳತನ್ನು ಹೊಸದಾಗಿಸುವುದು, ಮುಂತಾದ ಕೆಲಸಗಳನ್ನು ಮಾಡುವುದೇ ಮಾನವನ ಬಾಳಿಗೆ ಶಾಶ್ವತ ಧರ್ಮ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

233

ಸೃಷ್ಟಿಯ ವಿಧಾನದಲಿ ಸೊಟ್ಟಗಳು ನೂರಿಹುವು ।
ನೆಟ್ಟಗಿಪೆನ್ ಅವನ್ ಎಂದು ನರರ ಚಿರದೀಕ್ಷೆ ॥
ಇಷ್ಟಗಳನನ್ಯೋನ್ಯವವರೇಕೆ ಬಗೆದಿರರು? ।
ನಿಷ್ಠುರಪ್ರಿಯರವರು - ಮಂಕುತಿಮ್ಮ ॥ ೨೩೩ ॥

ಈ ಜಗತ್ತಿನ ಸೃಷ್ಟಿಯ ವಿಧಾನದಲ್ಲಿ ನೂರಾರು ಸೊಟ್ಟುಗಳು ಅಂದರೆ ಅಂಕು ಡೊಂಕುಗಳು ಇವೆ. ಅದನ್ನು ನೆರವಾಗಿಸಬೇಕೆನ್ನುವುದೇ ಮಾನವನ ಸದಾಕಾಲದ ಇಚ್ಛೆ. ಮನುಷ್ಯರು ಪರಸ್ಪರ ಇಚ್ಛೆಗಳನ್ನು ಅರಿಯಲು ವಿಫಲರಾಗುತ್ತಾರೆ . ಆದರೆ ಜಗತ್ತಿನ ಸೊಟ್ಟಗಳನ್ನು ಸರಿಪಡಿಸಲು ಮನುಷ್ಯ ಮಾಡುವ ಪ್ರಯತ್ನದಲ್ಲಿ ತಾನೂ ನಿಷ್ಠುರನಾಗಿ, ಅನ್ಯರೊಡನೆ ಹಗೆತನವನ್ನು ಕಟ್ಟಿಕೊಳ್ಳುತ್ತಾನೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.