People’s voice in creation
234
—
238
234
ಕಣ್ಣೆರಡದೇಕೆರಡುಮೊಂದೆ ಪಕ್ಕದೊಳೇಕೆ? ।
ಬೆನ್ನೊಳೊಂದೆದೆಯೊಳೊಂದಿರಲು ಸುಕರವಲ? ॥
ಅನ್ಯಾಯ ವಿಕಟಂಗಳೆನಿತೊ ಸೃಷ್ಟಿಕ್ರಮದಿ! ।
ಸೊನ್ನೆ ಜನವಾಕ್ಕಲ್ಲಿ - ಮಂಕುತಿಮ್ಮ ॥ ೨೩೪ ॥
ನಮಗೆ ಎರಡು ಕಣ್ಣುಗಳು ಇವೆ. ಅವರೆಡೂ ಮುಖದಲ್ಲಿ ಪಕ್ಕ ಪಕ್ಕದಲ್ಲಿ ಇವೆ. ಅದು ಏಕೆ ಹಾಗಿದೆ? ಮುಖದಲ್ಲಿ ಒಂದು ಬೆನ್ನಲ್ಲಿ ಒಂದು ಇದ್ದಿದ್ದಿದ್ದರೆ ಸುಲಭವಾಗಿ ಹಿಂದೆ ಮುಂದೆ ಎರಡೂ ಕಡೆ ನೋಡಲು ಆಗುತ್ತಿತ್ತಲ್ಲ, ಎಂದು ಚಿತ್ರವಿಚಿತ್ರವಾಗಿ ಮನುಷ್ಯ ಯೋಚಿಸುತ್ತಾನೆ. ಆದರೆ ಹೀಗೆ ಸೃಷ್ಟಿಕ್ರಮದಲ್ಲಿ ಎಷ್ಟೋ ವಿಚಿತ್ರಗಳು ಇವೆ. ಈ ರೀತಿಯ ಸೃಷ್ಟಿಯ ವಿಚಿತ್ರಗಳನ್ನು ಪ್ರಶ್ನಿಸುವ ಅಧಿಕಾರ ಮನುಷ್ಯನಿಗೆ ಇಲ್ಲ ಎಂಬ ಮಾನ್ಯ ಗುಂಡಪ್ಪನವರ ಭಾವವೇ ಈ ಕಗ್ಗದ ಹೂರಣ.
235
ಧರೆ ಸಸ್ಯಫಲದಿ ಜೀವಿಗೆ ಪುಷ್ಟಿಯಿತ್ತೊಡೇಂ? ।
ಮರಳಿ ತಾಂ ಪಡೆಯಳೇನ್ ಅವನಿನರ್ಧವನು? ॥
ಧರಣಿಗೇ ನಮ್ಮೊಡಲು ಹುಯ್ಗಡುಬು ತಪ್ಪಲೆಯೊ! ।
ಪರಮೇಷ್ಠಿ ಯುಕ್ತಿಯದು - ಮಂಕುತಿಮ್ಮ ॥ ೨೩೫ ॥
ನಮ್ಮ ಭೂಮಿ ತಾಯಿ ಈ ಸೃಷ್ಟಿಯಲ್ಲಿರುವ ಎಲ್ಲ ಪ್ರಾಣಿಗಳಿಗೂ ಪುಷ್ಟಿಕರವಾದ ಆಹಾರವನ್ನು ಇತ್ತು, ಇತ್ತುದರ ಅರ್ಧವನ್ನು ಮತ್ತೆ ಪಡೆದು ಬಿಡುತ್ತಾಳೆ. "ತನಗೆ ಬೇಕಾದ್ದನ್ನು ನಮ್ಮಲ್ಲಿ ಬೇಯಿಸಿಕೊಳ್ಳಲಿಕ್ಕೆ ನಮ್ಮ ದೇಹವನ್ನೇನಾದರೂ ಹಬೆಯಿಂದ ಮಾಡುವ ಇಡ್ಲಿ ಪಾತ್ರೆಯಂತೆ ಸೃಷ್ಟಿಕರ್ತ ಉಪಯೋಗಿಸುತ್ತಾನೋ?" ಎಂದು ಒಂದು ಪ್ರಶೆಯನ್ನು ಕೇಳಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಒಂದು ಮರದಲ್ಲಿ ಚಿಗುರು, ಹೂ, ಕಾಯಿ, ಹಣ್ಣು ಮತ್ತು ಬೀಜ ಉತ್ಪತ್ತಿಯಾಗಬೇಕಾದರೆ, ಆ ಮರ ತನ್ನ ಬೇರುಗಳ ಮೂಲಕ ಧರೆಯಿಂದ ಸತ್ವವನ್ನು ಹೀರಿಕೊಳ್ಳುತ್ತದೆ. ಆ ಮರದ ಎಲೆಗಳನ್ನು ಶರದೃತುವಿನಲ್ಲಿ ಉದುರುವಂತೆ ಮಾಡಿ, ಅವು ಮತ್ತೆ ಗೊಬ್ಬರದ ರೂಪದಲ್ಲಿ ಭೂಮಿಗೆ ಸತ್ವವಾಗುವುದರ ಮೂಲಕ, ಭೂಮಿ, ಎಲೆಗಳಿಗೆ ತಾನಿತ್ತ ಸತ್ವದ ಅರ್ದವನ್ನು ತಾನೇ ಪಡೆದು ಮತ್ತೆ ತನ್ನಲ್ಲಿ ಆ ಮರಕ್ಕೆ ಸಾರವನ್ನು ನೀಡುವ ಕ್ಷಮತೆಯನ್ನು ಬೆಳೆಸಿಕೊಳ್ಳುತ್ತದೆ.
236
ತರುಜಾತಿ ಖಗಜಾತಿ ಮೃಗಜಾತಿಗಳು ನೂರು ।
ನರಜಾತಿ ಮಿಕ್ಕ ಜಾತಿಗಳಿಂದ ಬೇರೆ ॥
ನರರೊಳೋರೊರ್ವನುಂ ತಾನೊಂದು ಬೇರೆ ಜಗ ।
ಬೆರಕೆ ಸಾಮ್ಯಾಸಾಮ್ಯ - ಮಂಕುತಿಮ್ಮ ॥ ೨೩೬ ॥
ಗಿಡಗಳ ಜಾತಿ, ಪಕ್ಷಿಗಳ ಜಾತಿ, ಪ್ರಾಣಿಗಳ ಜಾತಿಗಳು ನೂರಾರು ಇವೆ ಆದರೆ ಮನುಷ್ಯ ಜಾತಿ ಇವೆಲ್ಲಕ್ಕಿಂತ ಭಿನ್ನ. ಪ್ರತಿಯೊಬ್ಬ ಮನುಷ್ಯನೂ ಒಂದು ಜಗದಂತೆ ಇದ್ದಾನೆ. ಇವನು ಸಾಮ್ಯದ ಮತ್ತು ಅಸಾಮ್ಯದ ಬೆರಕೆ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ
237
ನೆಲವೊಂದೆ, ಹೊಲ ಗದ್ದೆ ತೋಟ ಮರಳೆರೆ ಬೇರೆ ।
ಜಲವೊಂದೆ, ಸಿಹಿಯುಪ್ಪು ಜವುಗೂಟೆ ಬೇರೆ ॥
ಕುಲವೊಂದರೊಳೆ ಸೋದರವ್ಯಕ್ತಿಗುಣ ಬೇರೆ ।
ಹಲವುಮೊಂದುಂ ಸಾಜ - ಮಂಕುತಿಮ್ಮ ॥ ೨೩೭ ॥
ಮಾನ್ಯಗುಂಡಪ್ಪನವರು ಈ ಕಗ್ಗದಲ್ಲಿ ಜಗತ್ತಿನ ವೈವಿಧ್ಯತೆಯ ಒಂದು ಆಯಾಮವನ್ನು ನಮಗೆ ಪರಿಚಯ ಮಾಡುತ್ತಾರೆ. ಇಲ್ಲಿ ನೆಲವೊಂದೆ ಆದರೂ ಅದನ್ನು ಹೊಲ, ಗದ್ದೆ, ತೋಟ ಎಂದು ಅಲ್ಲಿನ ಮಣ್ಣಿನ ಗುಣ, ನೀರಿನ ಅನುಕೂಲ. ಮತ್ತು ನೀರಿನ ಗುಣದ ಆಧಾರದಮೇಲೆ ವಿಂಗಡಿಸುತ್ತಾರೆ. ಒಂದೇ ನೆಲವಾದರೂ ಒಂದೇ ರೀತಿಯ ವಾತಾವರಣವಿದ್ದರೂ, ಅಲ್ಲಿ ಬೆಳೆಯುವ ಬೆಳೆಗಳ ಮತ್ತು ಗಿಡಗಳ ವೈವಿಧ್ಯತೆ ಬಹಳ ಅದ್ಭುತ. ಇದು ಸೃಷ್ಟಿಯ ವೈವಿಧ್ಯತೆ. ಒಂದೇ ನೆಲ, ಒಂದೇ ಜಲ ಮತ್ತು ಒಂದೇ ವಾತಾವರಣವನ್ನು ಹಂಚಿಕೊಂಡರೂ ಒಂದು ಮಾವು ಮತ್ತೊಂದು ಬೇವು. ಇದೇ ರೀತಿ ಒಂದೇ ನೆಲವನ್ನು ಹಂಚಿಕೊಂಡ, ಒಂದೇ ನೀರನ್ನು ಕುಡಿವ, ಒಂದೇ ಗಾಳಿಯನ್ನು ಸೇವಿಸುವ ಮನುಷ್ಯ ಮನುಷ್ಯರಲ್ಲಿ ಎಷ್ಟೊಂದು ಬೇಧ ಎಂಬ ವಿಚಾರವನ್ನು ಸುಂದರವಾಗಿ ಪ್ರಸ್ತಾಪಮಾಡಿದ್ದಾರೆ ಮಾನ್ಯ ಡಿ .ವಿ. ಜಿ ಯವರು
238
ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ ।
ತನುವಂಗಗಳೊಳೊಂದು, ರೂಪ ಗುಣ ಬೇರೆ ॥
ಮನದೊಳೊಬ್ಬೊಬ್ಬನೊಂದೊಂದು, ಪ್ರಪಂಚವಿಂ ।
ತನುವೇಕದೊಳ್ ಬಹುಳ - ಮಂಕುತಿಮ್ಮ ॥ ೨೩೮ ॥
ಮನುಷ್ಯರಲ್ಲಿ ಒಬ್ಬನಿದ್ದಂತೆ ಇನ್ನೊಬ್ಬನಿಲ್ಲ. ದೇಹದ ಅಂಗಾಂಗಗಳೆಲ್ಲ ಒಂದೇ ರೀತಿ ಇದ್ದರೂ ರೂಪ ಬೇರೆ ಮತ್ತು ಗುಣಗಳೂ ಬೇರೆ ಬೇರೆ. ಮನದೊಳಗೆ ಪ್ರತಿಯೊಬ್ಬನದೂ ಒಂದೊಂದು ವಿಚಾರ. ಅದೇ ಒಂದು ಬೇರೆ ಪ್ರಪಂಚವಿದ್ದಂತೆ. ಇಡೀ ಜಗತ್ತೇ ಅನೇಕತೆಯಲ್ಲಿ ಏಕತೆಯ ರೂಪ ಎಂದು ಅನೇಕತೆಯಲ್ಲಿ ಏಕತೆಯ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.