Equality
239
—
243
239
ಸಮವಿಲ್ಲ ಸೃಷ್ಟಿಯಲಿ, ನರನಂತೆ ನರನಿಲ್ಲ ।
ಕ್ಷಮೆಯುಮವಳೊಳಗಿಲ್ಲ, ಕರ್ಮದಂತೆ ಫಲ ॥
ಕ್ರಮವೊಂದ ನೀಮಾಗಿಸಿರಿ ನೋಳ್ಪೆನಾನೆನುತೆ ।
ನಮಗವಳ್ ಪ್ರಸ್ಪರ್ಧಿ - ಮಂಕುತಿಮ್ಮ ॥ ೨೩೯ ॥
ಅಸಮತೆಯೇ ಸೃಷ್ಟಿಯ ಗುಣ. ಹಾಗಾಗಿ ಸೃಷ್ಟಿ ಸಮವಿಲ್ಲ ಅಥವಾ ಸೃಷ್ಟಿಯಲ್ಲಿ ಸಮಾನತೆ ಇಲ್ಲ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಂತೆ ಇಲ್ಲ. ಪ್ರತಿಯೊಬ್ಬನೂ ಅವನವನ ಕರ್ಮಾನುಸಾರವಾಗಿ ತನ್ನ ಕರ್ಮಫಲವನ್ನು ಅನುಭವಿಸುತ್ತಾನೆ. ಹಾಗೇನಾದರೂ ನಾವೇನಾದರೂಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತೇನೆಂದು ಸೃಷ್ಟಿಗೆ ಒಂದು ಸ್ಪರ್ಧೆಯನ್ನು ಕೊಟ್ಟರೆ, ಸೃಷ್ಟಿಯೇ ನಮಗೆ ಪ್ರತಿಸ್ಪರ್ಧಿಯಾಗುತ್ತದೆ ಎಂದು ಮಾನ್ಯ ಗುಂಡಪ್ಪನವರು ನಮಗೆ ಅರುಹುತ್ತಾರೆ ಈ ಕಗ್ಗದಲ್ಲಿ.
240
ಬೆರಳುಗಳ ನೋಡವುಗಳೊಂದರಂತೊಂದಿಲ್ಲ ।
ಕರಧರ್ಮಕುಚಿತವಾ ಹೆಚ್ಚು ಕಡಮೆಗಳು ॥
ಪುರಳ ಪಿಡಿವುವೆ ಬೆರಳ್ಗಳೆಲ್ಲಮೊಂದುದ್ದವಿರೆ? ।
ಸರಿಯಹುದು ಕಾರ್ಯದಲಿ - ಮಂಕುತಿಮ್ಮ ॥ ೨೪೦ ॥
ನಮ್ಮ ಕೈ ಬೆರಳುಗಳು ಒಂದೇ ಉದ್ದವಿಲ್ಲ. ಕೈಗಳು ಮಾಡಬೇಕಾದ ಕೆಲಸಕಾರ್ಯಗಳಿಗೆ ಅವುಗಳ ಉದ್ದದಲ್ಲಿರುವ ಹೆಚ್ಚು ಕಡಿಮೆಗಳು ಸರಿಯಾಗೇ ಇದೆ. ಹಾಗೇನಾದರೂ ಎಲ್ಲ ಬೆರಳುಗಳೂ ಒಂದೇ ಉದ್ದ ಇದ್ದಿದ್ದಿದ್ದರೆ, ನಾವು ಕೈಬೆರಳುಗಳಿಂದ ಯಾವ ವಸ್ತುವನ್ನಾದರೂ ಹಿಡಿಯಲು ಆಗುತ್ತಿತ್ತೇ? ಹಾಗಾಗಿ ಈ ಅಸಮತೆಯು ಕೈಗಳ ಕೆಲಸ ಕಾರ್ಯಗಳಿಗೆ ಸರಿಯಾಗೇ ಇದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
241
ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು ।
ಅಸಮಂಜಸದಿ ಸಮನ್ವಯ ಸೂತ್ರ ನಯವ ॥
ವೆಸನಮಯ ಸಂಸಾರದಲಿ ವಿನೋದವ ಕಾಣ್ಬ ।
ರಸಿಕತೆಯೆ ಯೋಗವಲೊ - ಮಂಕುತಿಮ್ಮ ॥ ೨೪೧ ॥
ಸಮವಲ್ಲದ ವಿಷಯದಲಿ ಸಮತೆಯನು ಕಾಣುವುದು,ವಿಷಮದಲಿ ಸ್ನೇಹವನು ಕಾಣುವುದು,ಸಮಂಜಸವಲ್ಲದರಲ್ಲಿ ಸಮನ್ವಯದ ಸೂತ್ರವನ್ನು ಹೆಣೆಯುವುದು, ಸಂಕಷ್ಟಗಳೇ ತುಂಬಿರುವ ಈ ಸಂಸಾರದಲ್ಲಿ ವಿನೋದವನ್ನು ನಗೆಯನ್ನು ಕಾಣುವಂಥಾ ರಸಿಕತೆಯೇ,ಯೋಗವೆಂದು ತಿಳಿಯಬೇಕು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
242
ಐಕ್ಯ ನಾನಾತ್ವಗಳು, ನಿಯತಿ ಸ್ವತಂತ್ರಗಳು ।
ತರ್ಕ್ಯ ನಿಸ್ತರ್ಕ್ಯಗಳು ಬೆರತು ಚಿತ್ರದಲಿ ॥
ಶಕ್ಯಮುಂ ಪುರುಷತಂತ್ರಕ್ಕಶಕ್ಯಮುಮಾದ ।
ಸಿಕ್ಕಗಳ ಕಂತೆ ಜಗ - ಮಂಕುತಿಮ್ಮ ॥ ೨೪೨ ॥
ನಮ್ಮ ಜಗತ್ತುಒಟ್ಟಾದ , ಬೇರೆ ಬೇರೆಯಾದ, ನಿಯಂತ್ರಕ್ಕೊಳಗಾದ, ಸ್ವತಂತ್ರವಾದ, ತರ್ಕಿಸಬಹುದಾದ, ತರ್ಕಕ್ಕೆ ನಿಲುಕದ ವಿಷಯಗಳು ಚಿತ್ರವಿಚಿತ್ರವಾಗಿ ಸಮ್ಮಿಶ್ರವಾಗಿ ಮತ್ತು ಮಾನವರಿಗೆ ಸಾಧ್ಯವಾದ ಮತ್ತು ಅಸಾಧ್ಯವಾದ ವಿಷಯಮತ್ತು ಕಾರ್ಯಗಳಿಂದ ಕೂಡಿದ ಒಗಟು ಒಗಟಾದ, ಗಂಟು ಗಂಟಾದ ವಿಷಯಗಳಿಂದ ಕೂಡಿದೆ ಎಂದು ಹಲವು ವೈವಿಧ್ಯತೆಗಳನ್ನು ಈ ಕಗ್ಗದಲ್ಲಿ ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
243
ಸಮವರ್ತಿಗಳು ಜಗದೊಳಿಬ್ಬರೇ ದಿಟವರಿಯೆ ।
ಯಮರಾಜನೊಬ್ಬ ಜಾಠರರಾಜನೊಬ್ಬ ॥
ಶ್ರಮವನನುದಿನಮುಮಾಗಿಪನೊಬ್ಬನೆಲ್ಲವನು ।
ಶಮಿಸಿ ಮುಗಿಸುವನೊಬ್ಬ - ಮಂಕುತಿಮ್ಮ ॥ ೨೪೩ ॥
ಈ ಜಗದಲ್ಲಿ ಸಮಭಾವವಿರುವವರು ಇಬ್ಬರೇ. ಒಬ್ಬ ಜಠರರಾಜ.ಇನ್ನೊಬ್ಬ ಯಮರಾಜ. ಒಬ್ಬ ನಮ್ಮೆಲ್ಲರನ್ನೂ ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳಲು ಪ್ರತಿನಿತ್ಯ ಶ್ರಮಪಡುವಂತೆ ಪ್ರೇರೇಪಿಸುವ, ಜಠರದಲ್ಲಿ ಅಡಗಿರುವ ರಾಜ, "ವೈಶ್ವಾನರ" ಮತ್ತು ನಮ್ಮ ಜೀವನದ ಶ್ರಮವನ್ನೆಲ್ಲ ಶಮನಗೊಳಿಸಿ ಜೀವ ಮತ್ತು ದೇಹದ ಸಂಬಂಧವನ್ನು ಅಂತ್ಯಗೊಳಿಸುವವನು ಆ ಯಮರಾಜ. ಈ ಸತ್ಯವನ್ನು ನಾವು ಅರಿತುಕೊಳ್ಳಬೇಕು ಎಂದು ಒಂದು ಜಗತ್ ಸೂಕ್ಷ್ಮವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.