Kagga Logo

A New Desire Every Moment

204

208

204

ದೇವಾಂಶ ಪಶ್ವಂಶಗಳ ಗಂಟು ಮಾನುಷತೆ ।
ಧೀವಿಮರ್ಶೆಯಿನೊಂದ ಸತ್ಕರಿಸಿ ಬಲಿಸಿ ॥
ಭಾವಪರಿಶೋಧನೆಯಿನಿನ್ನೊಂದ ದಂಡಿಪುದೆ ।
ಜೀವಪ್ರಕರ್ಷಗತಿ - ಮಂಕುತಿಮ್ಮ ॥ ೨೦೪ ॥

ದೇವತೆಗಳಿಗಿರುವ ಗುಣಗಳ ಮತ್ತು ಪಶುಗಳಿಗಿರುವ ಗುಣಗಳ ಮಿಶ್ರಣವೇ ಮನುಷ್ಯಗುಣ. ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ಪಶುಗುಣಗಳನ್ನು ಕರಗಿಸುತ್ತಾ ದೈವೀಗುಣಗಳನ್ನು ಹೆಚ್ಚಿಸಿ ಕೊಳ್ಳುವುದೇ ಪ್ರಕರ್ಷ, ಎಂದರೆ ಪ್ರಗತಿ ಎಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

205

ಕಲ್ಲಾಗಿ ನಿಲ್ಲುವನು, ಬಳ್ಳಿವೊಲು ಬಳುಕುವನು ।
ಮುಳ್ಳಾಗಿ ಚುಚ್ಚುವನು, ಫುಲ್ಲಸುಮವಹನು ॥
ಕಲ್ಲೋಲವಾರಿಧಿವೊಲುರವಣಿಸಿ ಮೊರೆಯುವನು ।
ಕ್ಷುಲ್ಲಮಾನಿಸನಿವನು - ಮಂಕುತಿಮ್ಮ ॥ ೨೦೫ ॥

ಮನುಷ್ಯನ ಹಲವಾರು ಗುಣಗಳನ್ನು ವರ್ಣಿಸುತ್ತಾ, ಮಾನವನು ಕೆಲಬಾರಿ, ಕಲ್ಲಿನಂತೆ ಗಟ್ಟಿಯಾಗಿಯೂ, ಕೆಲಬಾರಿ ಬಳ್ಳಿಯಂತೆ ವಾಲುತ್ತಾ, ಕೆಲಬಾರಿ ಮುಳ್ಳಿನಂತೆ ಪರರನ್ನು ಚುಚ್ಚುತ್ತಾ, ಕೆಲಬಾರಿ ಅರಳಿದ ಕುಸುಮದಂತೆ ಸುಗಂಧವನ್ನು ಬೀರುತ್ತಾ, ಕೆಲಬಾರಿ ಸಮುದ್ರದ ಅಲೆಯಂತೆ ಮೇಲೆದ್ದು ಮತ್ತೆ ಕೆಳಗೆ ಬೀಳುತ್ತಾ ಸ್ಥಿರ ಮನಸ್ಸಿಲ್ಲದ ಕ್ಷುಲ್ಲಕ ಮನಸ್ಸಿನವನು ಇವನು, ಎಂದು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

206

ಸತ್ತವೆನ್ನಾಶೆಗಳು, ಗೆದ್ದೆನಿಂದ್ರಿಯಗಣವ ।
ಚಿತ್ತವಿನ್ನಲುಗದೆಂಬಾ ಜಂಬ ಬೇಡ ॥
ಎತ್ತಣಿಂದಲೊ ಗಾಳಿ ಮೋಹಬೀಜವ ತಂದು ।
ಬಿತ್ತಲಾರದೆ ಮನದಿ - ಮಂಕುತಿಮ್ಮ ॥ ೨೦೬ ॥

“ನನಗೆ ಆಸೆಗಳು ಸತ್ತಿವೆ. ನಾನು ಇಂದ್ರಿಯಗಳನ್ನು ಗೆದ್ದಿದ್ದೇನೆ. ನನ್ನ ಮನಸ್ಸು ಇನ್ನು ಚಂಚಲವಾಗದು ” ಎಂಬ ಜಂಬ ಪಡಬೇಡ. ಯಾವುದಾದರೂ ಒಂದು ಕಾರಣದಿಂದ, ನಿನ್ನ ಮನಸ್ಸಿನಲ್ಲಿ ಮತ್ತೆ ಆಸೆಯ ಬೀಜ ಬಂದು ಮೊಳಕೆಯೊಡೆಯಬಹುದಲ್ಲ ಎಂದು ಒಂದು ವಾಸ್ತವಿಕತೆಯನ್ನು ಬಣ್ಣಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

207

ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ ।
ತೃಣ ಮೊಳೆಯುವುದು ಮರಳಿ ಹನಿಯೆರಡು ಬೀಳೆ ॥
ಅಣಗಿರ್ದು ನರನಾಶೆಯಂತು ಕಷ್ಟದ ದಿನದಿ ।
ಕುಣಿವುದನುಕೂಲ ಬರೆ - ಮಂಕುತಿಮ್ಮ ॥ ೨೦೭ ॥

ಬೇಸಿಗೆಯಲ್ಲಿ ಒಣಗಿ ನಮಗೆ ಬರೀ ಮಣ್ಣಂತೆ ಕಾಣುವ ಹುಲ್ಲು ನಾಲ್ಕು ಹನಿ ಮಳೆ ಬಿದ್ದರೆ ಮತ್ತೆ ಚಿಗುರುವಂತೆ, ಕಷ್ಟದ ದಿನಗಳಲ್ಲಿ ಮನದ ಅಂತರ್ಯದಲ್ಲಿ, ಕಾಣದಂತೆ ಇದ್ದ ಮನುಷ್ಯನ ಆಸೆಗಳೆಲ್ಲ ಅನುಕೂಲವಾದ ಸ್ಥಿತ ಬಂದೊಡನೆಯೇ ಮತ್ತೆ ಚಿಗುರುತ್ತವೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಹೇಳುತ್ತಾರೆ.

208

ಬೆದಕಾಟ ಬದುಕೆಲ್ಲ; ಚಣಚಣವು ಹೊಸ ಹಸಿವು ।
ಅದಕಾಗಿ ಇದಕಾಗಿ ಮತ್ತೊಂದಕಾಗಿ ॥
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ ।
ಕುದಿಯುತಿಹುದಾವಗಂ - ಮಂಕುತಿಮ್ಮ ॥ ೨೦೮ ॥

ಪ್ರತೀ ಕ್ಷಣವೂ ನಾವುಗಳೆಲ್ಲ ಹೊಸ ಹೊಸ ಯೋಜನೆಗಳು, ಯೋಚನೆಗಳು, ಆಸೆಗಳು, ಆಕಾಂಕ್ಷೆಗಳನ್ನು ಹೊತ್ತು, ಇದನ್ನೋ, ಅದನ್ನೋ ಅಥವಾ ಮತ್ಯಾವುದನ್ನೋ ಪಡೆಯುವುದಕ್ಕೆ ಪರದಾಡುತ್ತಿರುತ್ತೇವೆ. ಈ ಪರದಾಟ, ಅಧಿಕಾರ ಸಂಪತ್ತು, ಅಂದ ಚೆಂದ ಅಥವಾ ಕೀರ್ತಿಗಳಂತಹ ವಿಚಾರಗಳನ್ನು ನೆನೆದು ನಮ್ಮ ಮನಸ್ಸುಗಳು ಕುದಿಯುತ್ತಿರುತ್ತವೆ ಎಂಬ ವಿಷಯವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.