Kagga Logo

Hand sketch of fate

199

203

199

ಪದರಪದರಗಳಿಹುವು ಗಂಟುಗಂಟುಗಳಿಹುವು ।
ಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿ ॥
ಇದಮಿತ್ಥಮೆಲ್ಲಿಹುದು ಮನುಜಸ್ವಭಾವದಲಿ? ।
ವಿಧಿಯ ಕೈಚಿತ್ರವದು - ಮಂಕುತಿಮ್ಮ ॥ ೧೯೯ ॥

ಮನುಷ್ಯನ ಹೃದಯದ ಮತ್ತು ಬುದ್ಧಿಯ ಭಾವಗಳು, ಅವನ ಮಾತುಗಳು ಮತ್ತು ಕೃತಿಗಳು ಗೋಜಲು ಗೋಜಲಾಗಿಯೂ ಸಿಕ್ಕು ಸಿಕ್ಕಾಗಿ ಗಂಟಾಗಿಯೂ ಇವೆ. ಮನುಷ್ಯರ ಸ್ವಭಾವ ” ಹೇಗೇ ” ಎಂದು ಹೇಳಲಾಗದು. ಬಹುಷಃ ಇದು ವಿಧಿಯ ಕ್ರಮದಿಂದಾದ ಚಿತ್ರವಿರಬಹುದು ಎಂದು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

200

ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ ।
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ ॥
ಹೊಟ್ಟೆತುಂಬಿದ ತೋಳ ಮಲಗೀತು; ನೀಂ ಪೆರರ ।
ದಿಟ್ಟಿಸುತ ಕರುಬುವೆಯೊ - ಮಂಕುತಿಮ್ಮ ॥ ೨೦೦ ॥

ಊಟದ ಚಿಂತೆಯೊಂದು ಸಾಲದೇನೋ ಎಂಬಂತೆ, ಅಸೂಯೆ ಅಥವಾ ಹೊಟ್ಟೆಯುರಿಯ ಬೆಂಕಿಯನ್ನು ಮನುಷ್ಯರ ಮನಸ್ಸುಗಳಲ್ಲಿ ಆ ವಿಧಿಯು ನೆಟ್ಟಿದ್ದಾನೆ. ಹೊಟ್ಟೆಬಾಕತನಕ್ಕೆ ಅಥವಾ ಹಸಿವಿಗೆ ಹೆಸರಾದ ಪ್ರಾಣಿ ತೋಳ. ಆ ತೋಳವೂ ಹೊಟ್ಟೆ ತುಂಬಿದರೆ ನೆಮ್ಮದಿಯಿಂದ ನಿದ್ದೆ ಮಾಡುತ್ತದೆ, ಆದರೆ ಮನುಷ್ಯ ಮಾತ್ರ ಅನ್ಯರನ್ನು ನೋಡಿ ಕೊರಗುತ್ತಿರುತ್ತಾನೆ ಎಂದು ಮನುಷ್ಯರ ಅಸೂಯಾ ಪ್ರವೃತ್ತಿಯನ್ನು ಉಪಮೆಯ ಸಹಿತ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

201

ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ? ।
ನರಕವೆದೆಯಲಿ ನೆಲಸೆ ನಿದ್ದೆಗೆಡೆಯೆಲ್ಲಿ? ॥
ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ? ।
ಕರುಬಿದನ ಹರಿ ಪೊರೆಗೆ - ಮಂಕುತಿಮ್ಮ ॥ ೨೦೧ ॥

ಹೊಟ್ಟೆಯುರಿಯನ್ನು ಆರಿಸಲು ನೀರು ಎಲ್ಲಿಹುದು? ನರಕದಂಥ ಹಿಂಸೆಯನ್ನು ನೀಡುವ ಈ ಅಸೂಯೆ ಎನ್ನವ ಉರಿ ಹೃದಯದಲಿ ನೆಲೆಸಿರುವಾಗ, ನಿದ್ದೆ ಬರಲು ಹೇಗೆ ಸಾಧ್ಯ. ಮತ್ಸರ ಪಡುವವನ ಸಂಕಟವನ್ನು ಯಾರಾದರೂ ನಿವಾರಿಸಲು ಸಾಧ್ಯವೇ? ಅಂತಹವನನ್ನು ಆ ದೇವರೇ ಕಾಪಾಡಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

202

ರಾವಣನ ದಶಶಿರವದೇಂ? ನರನು ಶತಶಿರನು ।
ಸಾವಿರಾಸ್ಯಗಳನೊಂದರೊಳಣಗಿಸಿಹನು ॥
ಹಾವಾಗಿ ಹುಲಿಯಾಗಿ ಕಪ್ಪೆ ಹುಲ್ಲೆಯುಮಾಗಿ ।
ಭೂವ್ಯೊಮಕತಿಶಯನು - ಮಂಕುತಿಮ್ಮ ॥ ೨೦೨ ॥

ರಾವಣನಿಗೆ ಹತ್ತು ತಲೆಗಳಿರಬಹುದು. ಆದರೆ ನಮ್ಮ ಮನುಷ್ಯನಿಗೆ ನೂರಾರು ತಲೆಗಳು. ಸಾವಿರ ಮುಖಗಳನ್ನು ಒಂದೇ ಮುಖದಲ್ಲಿ ಅಡಗಿಸಿಟ್ಟುಕೊಂಡು ಪ್ರದರ್ಶಿಸುವ ಕ್ಷಮತೆ ಇರುವವನು ಮನುಷ್ಯ. ಹಾವಾಗಿ, ಹುಲಿಯಾಗಿ, ಕಪ್ಪೆ, ಜಿಂಕೆಯಾಗಿಯೂ ತನ್ನ ಗುಣಗಳನ್ನು ತೋರುವ ಈ ಮನುಷ್ಯ ಇಡೀ ಜಗತ್ತಿನಲ್ಲಿ ಅತಿಶಯದ ಪ್ರಾಣಿ ಎಂದು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ

203

ತಲೆಯೊಳಗೆ ನೆರೆದಿಹುವು ನೂರಾರು ಹಕ್ಕಿಗಳು ।
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು ॥
ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವು ।
ನೆಲೆಯೆಲ್ಲಿ ನಿದ್ದೆಗೆಲೊ? - ಮಂಕುತಿಮ್ಮ ॥ ೨೦೩ ॥

ನಾವು ಈ ಹಿಂದಿನ ಕಗ್ಗಗಳಲ್ಲಿ ಮನುಷ್ಯನ ಮನಸ್ಸಿನಲಿ ಒಂದೇ ಸಮಯದಲ್ಲಿ ನಡೆಯುವ ಹಲವಾರು ಯೋಚನೆಗಳ ವಿಚಾರ ಮತ್ತು ಮನುಷ್ಯನ ಗುಣಗಳ ಹಲವಾರು ಮುಖವಾಡಗಳ ವಿಚಾರವನ್ನು ನೋಡಿದ್ದೇವೆ. ಒಂದು ಬಾರಿ ಯಾವುದೇ ಮನುಷ್ಯನ ಮಸ್ತಿಷ್ಕದಲ್ಲಿ ಹೊಕ್ಕು ನೋಡಿದರೆ, ನಮಗೆ ಅಲ್ಲಿ ಭಯಂಕರವಾಗಿ ನಡೆಯುವ ಚಿತ್ರ ವಿಚಿತ್ರವಾದ ವಿಚಾರಗಳ ಕುಸ್ತಿಯು ಕಾಣುತ್ತದೆ. ಒಂದರ ಮೇಲೊಂದು ಬೀಳುತ್ತಾ, ಒಂದರೊಂದಿಗೆ ಇನ್ನೊಂದು ಗುದ್ದಾಡುತ್ತಾ, ಕೆಲವು ಸೋಲುತ್ತಾ, ಕೆಲವು ಗೆಲ್ಲುತ್ತಾ, ಸೋತದ್ದು ಮತ್ತೆ ಗೆಲ್ಲುತ್ತಾ, ಗೆದ್ದು ಸೋಲುತ್ತಾ, ಹೊಸ ಹೊಸ ಪಟ್ಟುಗಳನ್ನು ಹಾಕುತ್ತಾ, ತಮ್ಮೊಳಗೆ ತಾವೇ ಗುದ್ದಾಡುವ, ವಿವೇಕದೊಡನೆ ಮತ್ತು ಬುದ್ಧಿಯೊಡನೆ ಗುದ್ದಾಡುವ ಸಾವಿರಾರು ಯೋಚನೆಗಳ ಆಗರವೇ ನಮ್ಮ ಮನಸ್ಸಿನ ಹಂದರ. ವಾಸ್ತಿವಿಕವಾಗಿ ಯಾವ ಶಬ್ದವೂ ಆಗದಿದ್ದರೂ ನಮಗೆ ನಮ್ಮ ಮನದಲ್ಲಿ, ಗಿಳಿ – ಕಾಗೆ – ಗೂಬೆ – ಕೋಗಿಲೆಯಂತಹ ಪಕ್ಷಿಗಳು ಒಂದೇ ಬಾರಿ ಕೂಗಿದರೆ ಆಗುವ ಕಲರವವಾದಂತೆ ಭಾಸವಾಗುತ್ತದೆ . ಈ ಶಬ್ದಗಳೇ ಹಲ ವಿಧವಾದ ಆಲೋಚನೆಗಳಂತೆ ನಮ್ಮ ಮನಸ್ಸಿನಲ್ಲಿ ಹೊಕ್ಕು ರಾದ್ದಾಂತ ಮಾಡುತ್ತಿರುತ್ತದೆ. ಅಂತಹ ಕಲಸುಮೆಲೋಗರವಾದ ಆಲೋಚನೆಗಳ ಗೂಡಿನಲ್ಲಿ ಶಬ್ದವೆಲ್ಲಾ ಸ್ಥಬ್ದವಾಗಿ ನಮಗೆ ನಿದ್ದೆ ಬರುವುದು ಸಾಧ್ಯವೇ ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.