Kagga Logo

Four faces

194

198

194

ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು? ।
ಅಂತರಗಭೀರಗಳ ತಾನೆ ಕಂಡವನಾರ್? ॥
ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ ।
ಸ್ವಂತಕೇ ದುರ್ದರ್ಶ - ಮಂಕುತಿಮ್ಮ ॥ ೧೯೪ ॥

ತಮ್ಮ ತಮ್ಮ ಅಂತರಂಗದಲ್ಲಿ ಏನಿದೆ ಎಂದು ತೋರುವವರು ಯಾರು ಅಥವಾ ಒಳಗಿರುವ ಗಂಭೀರತೆಯನ್ನು ಕಂಡವರಾರು, ವಿಚಾರ ಮತ್ತು ವಿಷಯಗಳು ಮನಸ್ಸಿನ ಮಡಿಕೆ ಮಡಿಕೆಗಳಲ್ಲಿ ತಿರುವು ತಿರುವುಗಳಲ್ಲಿ ಗಂಟು ಗಂಟುಗಳಾಗಿ ಸೇರಿಕೊಂಡುಬಿಟ್ಟಿದೆ. ನಮ್ಮ ಮನದಾಳದಲ್ಲಿರುವುದು ನಮ್ಮ ಅನುಭವಕ್ಕೇ ಬರುವುದು ಕಷ್ಟವಾಗಿದೆ, ಎಂದು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

195

ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ॥
ಸೊಗಸಿನೆಳಸಿಕೆಗೊಂದು, ತನ್ನಾತ್ಮಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು - ಮಂಕುತಿಮ್ಮ ॥ ೧೯೫ ॥

ನರನಿಗೆ, ನಾರಿಯನ್ನೂ ಸೇರಿ, ನಾಲ್ಕು ರೀತಿಯ ಮುಖಗಳಂತೆ. ಜಗತ್ತಿಗೆ ತೋರಲು ಒಂದು, ಮನೆಯಲ್ಲಿರುವ ಜನಗಳಿಗೆ ಒಂದು, ತನ್ನನ್ನು ತಾನಿ ನೋಡಿಕೊಳ್ಳುವುದಕ್ಕೆ ಒಂದು ಮುಖ ಮತ್ತು ಕಡೆಯದಾಗಿ ಅನ್ತಾರತ್ಮದ ಮುಖ. ಹೀಗೆ ಮನುಷ್ಯನಿಗೆ ಹಲವಾರು ಮುಖವಾಡಗಳು ಇರುತ್ತವೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ.

196

ಮನುಜಲೋಕವಿಕಾರಗಳನು ನೀನಳಿಸುವೊಡೆ ।
ಮನಕೊಂದು ದರ್ಪಣವ ನಿರವಿಸೆಂತಾನುಂ ॥
ಅನುಭವಿಪರವರಂದು ತಮ್ಮಂತರಂಗಗಳ ।
ಅನುಪಮಾಸಹ್ಯಗಳ - ಮಂಕುತಿಮ್ಮ ॥ ೧೯೬ ॥

ಮನುಜರ ಮನಸ್ಸುಗಳಲ್ಲಿರುವ ವಿಕಾರಗಳನ್ನು ಅಳಿಸಿಹಾಕಿ ಅವರಲ್ಲಿ ನಿರ್ಮಲ ಮನೋ ಪ್ರವೃತ್ತಿಯನ್ನು ಉಂಟು ಮಾಡಲು ಪ್ರಯತ್ನಿಸಿ, ಆ ಮನಸ್ಸು ತನ್ನನ್ನು ತಾನೇ ನೋಡಿಕೊಳ್ಳುವಂಥಾ ಒಂದು ಕನ್ನಡಿಯನ್ನು ತಯಾರಿಸಿದರೆ, ಆಗ ಅವರುಗಳು ತಮ್ಮ ತಮ್ಮ ಮನಸ್ಸಿನ ಭಾವನೆಗಳನ್ನು ನೋಡಿಕೊಂಡರೆ, ಅಂತರಂಗದಲ್ಲಿ ಹುದುಗಿರುವ ಹೋಲಿಸಲಾಗದಷ್ಟು ಅಸಹ್ಯಕರವಾದ ಭಾವನೆಗಳನ್ನು ಅನುಭವಿಸುತ್ತಾರೆ ಎನ್ನುತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

197

ಕನಲ್ದ ಹುಲಿ ಕೆರಳ್ದ ಹರಿ ಮುಳ್ ‍ಕರಡಿ ಛಲನಾಗ ।
ಅಣಕು ಕಪಿ ಸೀಳ್ನಾಯಿ ಮೊದಲಾದ ಮೃಗದ ॥
ಸೆಣಸುಮುಸುಡಿಯ ಘೋರದುಷ್ಟಚೇಷ್ಟೆಗಳೆಲ್ಲ ।
ವಣಗಿಹುವು ನರಮನದಿ - ಮಂಕುತಿಮ್ಮ ॥ ೧೯೭ ॥

ಕೋಪಗೊಂಡ ಹುಲಿ, ಕೆರಳಿದ ಸಿಂಹ, ಮುಳ್ಳಿನ ಕರಡಿ, ಛಲ ಹಿಡಿದ ನಾಗರಹಾವು, ಚೇಷ್ಟೆಯ ಕಪಿ, ಬೇಟೆಯಾಡುವ ಸೀಳು ನಾಯಿ ಮೊದಲಾದ ಮೃಗಗಳ೦ತೆ ಹೋರಾಡುವ ಮುಖವಾಡ ಹೊತ್ತು ಘೋರವಾದ ದುಷ್ಟತೆಯಿಂದ ಕೂಡಿದ ಚೇಷ್ಟೆಗಳೆಲ್ಲ ಈ ಮಾನವನ ಮನಸ್ಸಿನಲ್ಲಿ ಅಡಗಿವೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

198

ಸತ್ಯವಂತನನರಸಲೆನುತ ಪೇಟೆಗಳೊಳಗೆ ।
ಹುಟ್ಟಹಗಲೊಳೆ ದೀವಿಗೆಯ ಹಿಡಿದು ನೆಡೆದು ॥
ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಸಿಸಿದನು ।
ತಾತ್ತ್ವಿಕ ಡಯೋಜೆನಿಸ್ - ಮಂಕುತಿಮ್ಮ ॥ ೧೯೮ ॥

ಈಗ್ಗೆ ೨೪೨೪ ವರ್ಷಗಳ ಹಿಂದೆ ಗ್ರೀಕ್ ದೇಶದಲ್ಲಿ ಜನಿಸಿದ ಡಯೋಜೆನಿಸ್ ಎಂಬ ತತ್ವಜ್ಞಾನಿಯು “ಸತ್ಯವಂತನಾದ ವ್ಯಕ್ತಿಯಾರಾದರೂ ಸಿಗುವನೋ” ಎಂದು ಹಗಲಿನ ಹೊತ್ತಿನಲ್ಲಿ ದೀವಿಗೆಯನ್ನು ಹಿಡಿದುಕೊಂಡು ಪೇಟೆಬೀದಿಗಳಲ್ಲಿ ಹುಡುಕಿದನಂತೆ. ಅವನಿಗೆ ಯಾರೂ ಸಿಗದಾಗ, “ಈ ಜಗತ್ತು ಕೆಟ್ಟು ಹೋಗಿದೆ” ಎಂದು ತನ್ನ ಮನೆಯಲ್ಲಿ ಒಂದು ತೊಟ್ಟಿಯನ್ನು ಕಟ್ಟಿಸಿ ಅದರೊಳಗೆ ವಾಸಿಸತೊಡಗಿದನಂತೆ, ಎನ್ನುತ್ತಾ ಒಂದು ವಿಡಂಬನೆಯನ್ನು ಈ ಕಗ್ಗದ ಮೂಲಕ ಮಾನ್ಯ ಗುಂಡಪ್ಪನವರು ಪ್ರಸ್ತಾಪ ಮಾಡಿದ್ದಾರೆ.