Fox, monkey, human
189
—
193
189
ಪರಿಪರಿಯ ರೂಪಕಾಂತಿಗಳ ಕಣ್ಣಾಗಿಸುವ ।
ಪರಿಪರಿಯ ಫಲಮಧುರಗಳ ರಸನೆಗುಣಿಪ ॥
ಪರಿಪರಿಯ ಕಂಠರವಗಳ ಕಿವಿಗೆ ಸೋಕಿಸುವ ।
ಗುರು ಸೃಷ್ಟಿ ರಸಿಕತೆಗೆ - ಮಂಕುತಿಮ್ಮ ॥ ೧೮೯ ॥
ಪರಿ ಪರಿಯಾದ ರೂಪ ಕಾಂತಿಗಳು, ಹೂಗಳು ಹಣ್ಣುಗಳು ತಿಂಡಿ ತಿನಿಸುಗಳು, ಪರಿಪರಿಯಾದ ಮಧುರ ನಾದಗಳು ಇವುಗಳನ್ನೆಲ್ಲ ಸೃಷ್ಟಿಸಿ ನಮ್ಮ ಮನಸ್ಸಿಗೆ ಆನಂದವೀಯುವ ಈ ಪ್ರಕೃತಿಯೇ, ಸೃಷ್ಟಿಯೇ ನಮ್ಮ ರಸಿಕತೆಗೆ ಗುರು ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
190
ಅಮೃತಕಣವಂ ಮರ್ತ್ಯಮೃದ್ಘಟದಿ ಬಯ್ತಿರಿಸಿ ।
ವಿಮೃಶಬುದ್ಧಿಗೆ ಮೋಹದುಪನೇತ್ರವಿಡಿಸಿ ॥
ಸಾಮ್ರಾಜ್ಯಮಧ್ಯದಲಿ ದುರ್ಭಿಕ್ಷವಾಗಿಪುದು ।
ಕಮ್ರತೆಯೊ ನಮ್ರತೆಯೊ? - ಮಂಕುತಿಮ್ಮ ॥ ೧೯೦ ॥
ನಾಶವಿಲ್ಲದ ಆತ್ಮ ಅಥವಾ ಚೇತನನನ್ನು, ನಾಶವಾಗುವಂಥಾ ಈ ದೇಹವೆಂಬ ಮಣ್ಣಿನ ಮಡಿಕೆಯಲ್ಲಿ ಬಚ್ಚಿಟ್ಟು, ವಿಮರ್ಶೆಮಾಡುವಂತಾ ಬುದ್ಧಿಶಕ್ತಿಯನ್ನೂ ಕೊಟ್ಟು ವಿವೇಚನೆಯಿಂದಲೋ ಅಥವಾ ಮೋಹದಿಂದಲೋ ತನ್ನ ಬೇಕು ಬೇಡಗಳ ವಿಮರ್ಶೆಮಾಡುತ್ತಾ ಈ ಜಗತ್ತಿಗೆ ಅಂಟಿಕೊಳ್ಳುವಂತಾ ಮನವನಿತ್ತು, ಎಲ್ಲವೂ ಇರುವಾಗ ಇದ್ದಕ್ಕಿದ್ದಂತೆಯೇ, ಏನೂ ಇಲ್ಲದಂತಾಗಿಸುವುದು, ಇದೇನು ವಿಧಾನವೋ ಅಥವಾ ಮಾನವರಿಗೆ ಒಂದು ಪ್ರಲೋಭನೆಯೋ ಎಂದು ವಿಚಾರಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
191
ಪೊಡೆಯುಣಿಸ ಮಿಗಹಕ್ಕಿಹುಳುಗಳಂದದಿ ನರನು ।
ತಡಕುವನು; ತನ್ನಾತ್ಮದುಣಿಸ ಮರೆಯುವನು ॥
ಒಡಲಿನಬ್ಬರವೇನು? ಆತ್ಮದ ನಾಣ್ಚೇನು? ।
ಪೊಡವಿಗಿದೆ ದುಮ್ಮಾನ - ಮಂಕುತಿಮ್ಮ ॥ ೧೯೧ ॥
ಮನುಷ್ಯನು, ಪ್ರಾಣಿ, ಹಕ್ಕಿ ಹುಳುಗಳ ರೀತಿ ತನ್ನ ಹೊಟ್ಟೆಪಾಡಿಗಾಗಿ ಆಹಾರಕ್ಕಾಗಿ ತಡಕಾಡುತ್ತಾನೆ. ಆದರೆ ಆತ್ಮಕ್ಕೆ ಬೇಕಾದ ಆಹಾರವನ್ನು ಕೊಡಬೇಕಾದ ಆಹಾರವನ್ನು ಕೊಡದೆ, ಅದನ್ನು ಸೊರಗಿಸುತ್ತಿದ್ದಾನೆ. ತೆಜೋರೂಪವಾದ ಆತ್ಮವು ಕಡೆಗಣಿಸಲ್ಪಟ್ಟಿದೆ. ಇದು ತೀರ ದುಃಖದ ವಿಚಾರ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡಿದ್ದಾರೆ.
192
ದೇವದಾನವರ ರಣರಂಗ ಮಾನವಹೃದಯ ।
ಭಾವ ರಾಗ ಹಠಂಗಳವರ ಸೇನೆಗಳು ॥
ಭೂವಿಭವಜಯಗಳ ಭ್ರಾಂತಿಯಲಿ ಮರೆಯುವರು ।
ಜೀವಾಮೃತವನವರು - ಮಂಕುತಿಮ್ಮ ॥ ೧೯೨ ॥
ಇಂದಿನ ಸಮಾಜದಲ್ಲಿ ಮಾನವರ ನಡವಳಿಕೆಯನ್ನು ವಿಶ್ಲೇಷನೆಮಾಡುತ್ತಾ, ಒಳ್ಳೆಯ ಮತ್ತು ಕೆಟ್ಟ ವಿಚಾರಗಳ ನಡುವಿನ ಯುದ್ಧ ಪ್ರತಿ ಹೃದಯದಲ್ಲೂ ನಡೆದಿದೆ ಮತ್ತು ಜನರೆಲ್ಲಾ, ಭಾವುಕತೆ, ಕೋಪ ಮತ್ತು ಹಠವನ್ನು ಮನಗಳಲ್ಲಿ ತುಂಬಿಕೊಂಡು ಈ ಜಗತ್ತಿನಲ್ಲಿ ವೈಭವದಿಂದ ಜೀವಿಸುತ್ತಿದ್ದೇವೆ ಎನ್ನುವ ಭ್ರಮೆಯಲ್ಲಿ ಜೀವಿಸುತ್ತಾ, ಆತ್ಮದ ವಿಚಾರವನ್ನು ತೊರೆದು, ಅದರಿಂದ ದೊರೆಯುವ ಅಮೃತದ೦ತ ಅನುಭವವನ್ನು ಮರೆತಿದ್ದಾರೆ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು.
193
ಪರಮೇಷ್ಠಿ ನಿಜಚಾತುರಿಯನಳೆಯ ನಿರವಿಸಿದ ।
ನೆರಡುಕೈಯಿಂದೆರಡು ಜಂತುಗಳ ಬಳಿಕ ॥
ಇರದೆ ತಾನವನೊಂದುಗೂಡಿಸಲು ಬೆರಗಾಯ್ತು ।
ನರಿಯು ವಾನರವು ನರ - ಮಂಕುತಿಮ್ಮ ॥ ೧೯೩ ॥
ಪರಬ್ರಹ್ಮನು ತನ್ನ ನಿಜವಾದ ಚಾತುರ್ಯವನ್ನು ಪರೀಕ್ಷಿಸಲು ತನ್ನ ಎರಡೂ ಕೈಗಳಿಂದ ಎರಡು ಪ್ರಾಣಿಗಳನ್ನು ಸೃಷ್ಟಿಸಿದನಂತೆ. ಒಂದು ನರಿ, ಇನ್ನೊಂದು ಮಂಗ. ಅವುಗಳನ್ನು ಸೃಷ್ಟಿಸಿದಮೇಲೆ, ಸುಮ್ಮನೆ ಇರದೆ, ಇವೆರಡನ್ನೂ ಒಂದಾಗಿ ಸೇರಿಸಿದನಂತೆ. ಆಶ್ಚರ್ಯವೆಂದರೆ ಅವೆರಡರ ಸಮ್ಮಿಲನದಿಂದ ಉಂಟಾದದ್ದು ನರ( ಮನುಷ್ಯ) ಪ್ರಾಣಿಯಂತೆ, ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ.