Kagga Logo

Company of the world

184

188

184

ನೋಡುನೋಡುತ ಲೋಕಸಹವಾಸ ಸಾಕಹುದು ।
ಬಾಡುತಿಹ ಹೂಮಾಲೆ ಗೂಢವಿಹ ಕಜ್ಜಿ ॥
ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ ।
ನೋಡಾಡು ಹಗುರದಿಂ - ಮಂಕುತಿಮ್ಮ ॥ ೧೮೪ ॥

ಈ ಲೋಕದದಲ್ಲಿ ನಮ್ಮ ಬಾಳ್ವೆ ಮೊದಮೊದಲು ಆನಂದವಾಗಿರುತ್ತದೆ . ಎಲ್ಲವೂ ವಿನೂತನವಾಗಿರುತ್ತದೆ, ಎಲ್ಲವೂ ಇಷ್ಟಪಡುವಂತಿರುತ್ತದೆ. ಕಾಲಕ್ರಮೇಣ ಬಾಡುತಿಹ ಹೂ ಮಾಲೆಯಂತೆಯೋ ಅಥವಾ ಬಹಳದಿನದಿಂದ ಬಾಧಿಸುತ್ತಿರುವ ಕಜ್ಜಿಯಂತೆಯೋ, ” ಸಾಕಪ್ಪಾ ಸಾಕು” ಎಂದು ಅನ್ನಿಸತೊಡಗುತ್ತದೆ. ಹಾಗಾಗಿ ಈ ಲೋಕದ ಸಹವಾಸದಲ್ಲಿ ತುಂಬಾ ಆಳವಾಗಿ ಇಳಿಯದೆ, ಮೇಲೆ ಮೇಲೆ ಹಗುರವಾಗಿ ಓಡಾಡಿಕೊಂಡು ನಿನ್ನ ಜೀವನವನ್ನು ಬಾಳು ಎಂದು ಸೂಚನೆಯನ್ನು ಕೊಡುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ.

185

ಹೃದಯಜೀವನಕಿನಿತು ಬೆಲೆಯಿರದೆ? ಫಲವಿರದೆ? ।
ಮಧುರಭಾವ ಪ್ರೇಮ ದಯೆಯೆಲ್ಲ ಬರಿದೆ ॥
ವಿಧಿಯಂಗಡಿಯೊಳದನು ಕಸವೆಂದು ತಳ್ಳುವೊಡೆ ।
ಬದುಕಿನಲಿ ತಿರುಳೇನು? - ಮಂಕುತಿಮ್ಮ ॥ ೧೮೫ ॥

ಹೃದಯವಂತಿಕೆಯಿಂದ ನಡೆಸುವ ಜೀವನಕೆ ಬೆಲೆಯೇ ಇಲ್ಲವೇ? ಅದಕ್ಕೇನೂ ಪ್ರಯೋಜನವಿಲ್ಲವೆ? ಪರಸ್ಪರ ಸವಿಯಾದ ಭಾವನೆಗಳು,ಪ್ರಮಾನುರಾಗಗಳು ದಯೆ ದಾಕ್ಷಿಣ್ಯಗಳು ಕೇವಲ ಪೊಳ್ಳೆ? ವಿಧಿಯ ಆಟದಲ್ಲಿ ಇದನ್ನೆಲ್ಲಾ ಕೆಲಸಕ್ಕೆ ಬಾರದ್ದು ಎಂದು ತಿರಸ್ಕರಿಸುವಹಾಗಿದ್ದರೆ, ಈ ಜೀವನದ ಸ್ವಾರಸ್ಯವೇನು ಎಂದು ಒಂದು ಪ್ರಶ್ನಾ ರೂಪದ ಪ್ರಸ್ತಾಪವನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಮಾಡುತ್ತಾರೆ.

186

ತಡಕಾಟ ಬದುಕೆಲ್ಲವೇಕಾಕಿಜೀವ ತ ।
ನ್ನೊಡನಾಡಿ ಜೀವಗಳ ತಡಕಿ ಕೈಚಾಚಿ ॥
ಪಿಡಿಯಲಲೆದಾಡುಗುಂ, ಪ್ರೀತಿ ಋಣ ಮಮತೆಗಳ ।
ಮಡುವೊಳೋಲಾಡುತ್ತೆ - ಮಂಕುತಿಮ್ಮ ॥ ೧೮೬ ॥

ಒಂದು ಜೀವ ಬದುಕಲ್ಲಿ ಏಕಾಕಿಯಾಗಿದ್ದು ಒಡನಾಡಿ ಜೀವಗಳ ಹುಡುಕಿ ಹಿಡಿದು, ಪ್ರೀತಿ, ಕರ್ಮಶೇಷ, ಮತ್ತು ಅಪ್ಯಾಯತೆಗಳ ಬಂಧನಗಳ ಸುಳಿಯಲ್ಲಿ ಸಿಕ್ಕು ಜೀವಿಸುತ್ತದೆ ಎಂಬುದೇ ಈ ಕಗ್ಗದ ಹೂರಣ.

187

ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿ ।
ತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆ ॥
ಬಿಡಿಜೀವ ಸಂಗಾತಿಜೀವಗಳನರಸಿ ತಾಂ ।
ಪಡೆದಂದು ಪೂರ್ಣವದು - ಮಂಕುತಿಮ್ಮ ॥ ೧೮೭ ॥

“ನುಡಿಕಟ್ಟು”ಎನ್ನುವುದು ಒಂದು ಆಟ. ಸೂಕ್ತ ಅಕ್ಷರಗಳ ಜೋಡಣೆಯನ್ನು ಮಾಡುತ್ತಾ, ಪದಗಳ ವಿನ್ಯಾಸವನ್ನು ಮಾಡುವುದು. ಅದನ್ನಾಡುವುದಕ್ಕೆ ಉಪಯೋಗಿಸುವ ಅಕ್ಷರಗಳನ್ನು ಬರೆದ ಚೀಟಿಗಳನ್ನು ನಾವು ಆಯುವಂತೆ, ಜೀವನದಲ್ಲೂ ನಮಗೆ ಬೇಕಾದ ಸೂಕ್ತ ಸಂಗಾತಿ ಜೀವಗಳನ್ನಾರಿಸಿಕೊಂಡರೆ ಅಂದು ನಮ್ಮ ಜೀವನದ ವಿನ್ಯಾಸದ ಜೋಡಣೆ ಪೂರ್ಣವಾಗುವುದೆಂದು ಅಪ್ಪಣೆ ಕೊಡಿಸಿದ್ದಾರೆ ಮಾನ್ಯ ಗುಂಡಪ್ಪನವರು. ಈ ಕಗ್ಗದಲ್ಲಿ.

188

ರಸರುಚಿಗಳನು ಕಲಿಸಿ ಪಕ್ವಾನ್ನಗಳ ಪಚಿಸಿ ।
ರಸನೆಯಲಿ ನೀರಿಳಿಸಿ ಬಿಸಿಯುಸಿರ ಬಿಡಿಸಿ ॥
ದಶದಿಶೆಗಳಿಂ ಮುತ್ತಿ ಬರುವ ಪ್ರಕೃತಿಗದಾರು ।
ವಶನಾಗದಿಹ ನರನು? - ಮಂಕುತಿಮ್ಮ ॥ ೧೮೮ ॥

ರುಚಿರುಚಿಯಾದ ರಸಭರಿತವಾದ ಅಡುಗೆಗಳನ್ನು ಮಾಡಲು ಕಲಿಸಿ, ಇವುಗಳನ್ನು ಸವಿಯುವ ತವಕದಲಿ ನಾಲಿಗೆಯಲಿ ನೀರಿಳಿಸಿ,ಹಲವಾರು ರೀತಿಯ ಪಕ್ವಾನ್ನಗಳನ್ನು ಜೀರ್ಣಿಸಿಕೊಂಡು, ಜಿಹ್ವಾ ಚಾಪಲ್ಯವನ್ನು ತೀರಿಸಿಕೊಳ್ಳಲು ಅನುವಾಗುವಂತೆ ಮತ್ತೆ ಮತ್ತೆ ಆಸೆಪದುವಂತೆ, ಪ್ರಕೃತಿಯೇ ಹತ್ತಾರು ಕಡೆಗಳಿಂದ ನಮ್ಮನ್ನು ಸೆಳೆಯುತ್ತಿರುವಾಗ ಇದಕ್ಕೆ ವಶನಾಗದವನು ಯಾರು ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.