Kagga Logo

Good and evil

179

183

179

ಕರುಮ ಬಂದಿದಿರಹುದು ಮೋಹನದ ರೂಪಿನಲಿ ।
ಕಿರುನಗುವು ಕುಡಿನೋಟ ಕೊಂಕುನುಡಿಗಳಲಿ ॥
ಕರೆದು ತಳ್ಳುವ, ತಳ್ಕರಿಸುತೊಳಗೆ ಕಿಚ್ಚಿಡುವ ।
ತರಳತೆಯದೇಂ ತಂತ್ರ? - ಮಂಕುತಿಮ್ಮ ॥ ೧೭೯ ॥

ನಮ್ಮ ಕರ್ಮವು ನಮ್ಮನ್ನು ಈ ಜಗತ್ತನ್ನು ಪ್ರೀತಿಸುವಂತೆ ಮಾಡುತ್ತದೆ. ನಮ್ಮನ್ನು ಆಕರ್ಷಿಸುತ್ತದೆ. ಆ ಆಕರ್ಷಣೆಯಲ್ಲಿ ಸಿಕ್ಕು ನಾವು ಜಗದ ಜನರ ಕುಹಕದ ಕಿರುನಗೆ, ತಿರಸ್ಕಾರದ ಕುಡಿನೋಟ ಮತ್ತು ಕೊಂಕುನುಡಿಗಳಿಗೆ ಬಲಿಯಾಗುತ್ತೇವೆ. ನಮ್ಮನ್ನು ಕರೆದಂತೆ ಮಾಡಿ ತಬ್ಬಿಕೊಂಡಂತೆ ಮಾಡಿ ಪುನಃ ತಳ್ಳಿಬಿಡುವ ಈ ಚಪಲತೆಯ ಉಪಾಯ ಅಥವಾ ಉದ್ದೇಶ್ಯ ಏನು ಎಂದು ತಿಳಿಯದಾಗಿದೆ ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

180

ಮೃತ್ಯು ತಾಂ ಬಂದು ಮೋಹಿನಿಯರೂಪದಿ ನಿನ್ನ ।
ಚಿತ್ತವನು ಸೆರೆವಿಡಿದು ನೆತ್ತರನು ಬಸಿದು ॥
ನಿತ್ಯ ನಿನ್ನಸುವ ಲವ ಲವ ಪೀರುತಲಿ ದೀರ್ಘ ।
ಹತ್ಯೆಯಲಿ ಹರುಷಿಪಳೊ - ಮಂಕುತಿಮ್ಮ ॥ ೧೮೦ ॥

ಪಿಶಾಚಿಗಳಲ್ಲಿ ಮೋಹಿನಿ ಎಂಬುದು ಒಂದು ಹೆಣ್ಣು ರೂಪಿನ ಪಿಶಾಚಿ. ಅದು ಅತೀ ಸುಂದರವಾಗಿ ತನ್ನ ಪಾಶಕ್ಕೆ ಸಿಕ್ಕವನ ರಕ್ತವೀರ್ಯಗಳನ್ನೆಲ್ಲ ಕೊಂಚ ಕೊಂಚವಾಗಿ ಹೀರಿ ಶಕ್ತಿಹೀನನನ್ನಾಗಿಸಿ ದೀರ್ಘಕಾಲ ನರಳುವಂತೆ ಮಾಡಿ, ಕಡೆಗೆ ಸಾವಿನ ತೆಕ್ಕೆಗೆ ನಮ್ಮನ್ನು ನೂಕುತ್ತಾಳೆ. ಇದು ಈ ಕಗ್ಗದ ಹೂರಣ. ನಾವೆಲ್ಲಾ ಹೇಗೆ ಈ ಜೀವನದ ” ಮೋಹಿನೀ ಬಲೆಯಲ್ಲಿ” ಸಿಕ್ಕು ನಮ್ಮ ಬಾಳನ್ನು ಅಳಿವಿನೆಡೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ ಮಾನ್ಯ ಗುಂಡಪ್ಪನವರು.

181

ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ ।
ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ ॥
ಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲ ।
ವಣುವಣುವೆ ಬಿಗಿಯುವುವೊ - ಮಂಕುತಿಮ್ಮ ॥ ೧೮೧ ॥

ಯಮನ ಶೂಲ ಕ್ಷಣ ಮಾತ್ರದಲ್ಲಿ ಒಂದೇ ಬಾರಿ ಕೊಲ್ಲುವುದು. ಆದರೆ ಈ ಜಗತ್ತಿನ ಮೋಹವು ನಮ್ಮಕುತ್ತಿಗೆಗೆ ಕುಣಿಕೆ ಹಾಕಿ ಅನುದಿನವೂ ಕ್ಷಣ ಕ್ಷಣವೂ ನಮ್ಮನ್ನು ಸೆಳೆಯುತ್ತಾ ಕೊಲ್ಲುತ್ತಲೇ ಇರುತ್ತದೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡುತ್ತಾರೆ.

182

ಋಣದ ಜಾಲವನಂತ, ಕರುಮಚಕ್ರವನಂತ ।
ಜನುಮಜನುಮದ ಕಥೆಯ ತಂತುಗಳನಂತ ॥
ಅನವರತ ನೂತನವಿದೆನಿಪ ವಿಶ್ವದ ತಂತ್ರ ।
ಬಿನದ ಪರಬೊಮ್ಮಂಗೆ - ಮಂಕುತಿಮ್ಮ ॥ ೧೮೨ ॥

ಈ ಜಗತ್ತಿನೊಂದಿಗೆ ನಮ್ಮ ಋಣದ ಸಂಬಂಧ ಕೊನೆಯಿಲ್ಲದ್ದು, ನಾವು ಅದರೊಳಗೆ ಇದ್ದು, ನಮ್ಮನ್ನೂ ಸೇರಿಸಿಕೊಂಡು ಸುತ್ತುವ ಕರ್ಮದ ಚಕ್ರದ ಸುತ್ತಾಟ, ಕೊನೆಯಿಲ್ಲದ್ದು, ಒಂದು ಜನ್ಮದಿಂದ ಇನ್ನೊದು ಜನ್ಮಕ್ಕೆ ನಮ್ಮನ್ನು ಹೆಣೆದುಕೊಳ್ಳುವ ಸಂಕೋಲೆಗಳೂ ಕೊನೆಮೊದಲಿಲ್ಲದ್ದು. ಆದರೂ ಪ್ರತೀ ಬಾರಿಯೂ ನಮಗೆ ಇದು ಹೊಸದು ಎಂದು ಅನಿಸುವ ಈ ವಿಶ್ವದ ತಂತ್ರವನ್ನು ಆ ಪರಮಾತ್ಮ ತನ್ನ ವಿನೋದಕ್ಕಾಗಿಯೇ ಸೃಷ್ಟಿಸಿಕೊಂಡಂತಿದೆ, ಎಂದು ಒಂದು ವೇದಾಂತದ ಒಂದು ಸೂಕ್ಷ್ಮ ವಿಚಾರವನ್ನು ಪ್ರಸ್ತಾಪಿಸುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

183

ಪುಣ್ಯದಿಂ ಬಂದ ಸಿರಿ ಮದಮೋಹಗಳ ಮೂಲ ।
ಖಿನ್ನನಾಗಿಪ ಪಾಪಫಲವಾತ್ಮಶುದ್ಧಿ ॥
ಅನ್ಯೋನ್ಯಜನಕಗಳು ಪುಣ್ಯಪಾಪಗಳಿಂತು ।
ಧನ್ಯನುಭಯವ ಮೀರೆ - ಮಂಕುತಿಮ್ಮ ॥ ೧೮೩ ॥

ಒಬ್ಬ ವ್ಯಕ್ತಿ ಮಾಡಿದ ಪುಣ್ಯಕಾರ್ಯದಿಂದ ಅವನಿಗೆ ಸುಖ ಸಂಪತ್ತುಗಳು ಆನಂದಗಳು ಲಭಿಸುವುವು. ಹಾಗೆಯೆ ಅವನು ಮಾಡಿದ ಪಾಪಕರ್ಮಗಳಿಂದ ನೋವು ದುಃಖ ಕಷ್ಟ ಪಡೆಯುವನು. ಆದರೆ ಈ ಪಾಪ ಪುಣ್ಯಗಳನ್ನೂ ಮೀರಿ ಅವುಗಳ ಪರಿಧಿಯಿಂದ ಮೇಲೇರುವವನೆ ಧನ್ಯ, ಎಂದು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.