Kagga Logo

Killing with a smile

174

178

174

ತಂದೆಮಕ್ಕಳಿಗೆ ಹದಗೆಟ್ಟುದನು ಕಾಣೆಯಾ? ।
ಹೊಂದಿರುವರವರ್ ಅಹಂತೆಯು ಮೊಳೆಯುವನಕ ॥
ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ? ।
ಬಂಧ ಮುರಿವುದು ಬಳಿಕ - ಮಂಕುತಿಮ್ಮ ॥ ೧೭೪ ॥

ತಂದೆ ಮಕ್ಕಳ ಸಂಬಂಧವನ್ನು ಕುರಿತು ಒಂದು ಚೆಂದಾದ ಕಗ್ಗವಿದು. ಇಂದಿನ ಪ್ರಪಂಚದಲ್ಲಿ ತಂದೆಮಕ್ಕಳ ಬಾಂಧವ್ಯದ ರೂಪ ಹದಗೆಟ್ಟು ಹೋಗಿರುವುದನ್ನು ನೋಡಿ. ಈ ಸಂಬಂಧಗಳು ಮಕ್ಕಳಲ್ಲಿ ಅಹಂಕಾರ ಮೊಳೆಯುವತನಕ, ಸರಿ ಸುಮಾರಾಗಿರುತ್ತದೆ. ಹಾಗೆ ಪ್ರತಿಯೊಬ್ಬರ ಮನಸ್ಸಲ್ಲೂ ಅಹಂಕಾರ ಎದ್ದು ನಿಂತರೆ ತಂದೆಯಾರೋ ಮಕ್ಕಳಾರೋ? ಈ ಸಂಬಂಧಗಳ ಬಂಧ ಮುರಿದುಬೀಳುತ್ತದೆ ಎಂದು ಉಲ್ಲೇಖಮಾಡುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

175

ಕಾಂಕ್ಷೆಗಳ ಬೋಧಿಸುವ ಬಂಧುಸಖರುಪಕಾರ ।
ಯಕ್ಷಿಯರು ಮ್ಯಾಕ್ ಬೆತನಿಗೆಸಗಿದುಪದೇಶ ॥
ಉತ್ಸಾಹವಿದ್ದೇನು? ವಾತ್ಸಲ್ಯವಿದ್ದೇನು? ।
ಅಕ್ಷಿ ನಿರ್ಮಲವೇನೊ? - ಮಂಕುತಿಮ್ಮ ॥ ೧೭೫ ॥

ನಮ್ಮಲ್ಲಿ ಆಸೆಗಳನ್ನು ಹುಟ್ಟಿಸುವ ಮತ್ತು ವಸ್ತು ವಿಷಯವಾಗಿ ನಮಗೆ ಭೋಧನೆಮಾಡುವ ನಮ್ಮ ಬಂಧುಗಳು, ಸ್ನೇಹಿತರು , ಕೇವಲ ಯಕ್ಷಿಣಿಯರು ಮ್ಯಾಕ್ ಬೆತ್ ನಿಗೆ ಮಾಡಿದ ಉಪದೇಶದಂತೆ ಇದೆ. ನಮ್ಮನ್ನು ಕುರಿತು ಅವರಲ್ಲಿ ವಿಶ್ವಾಸವಿದ್ದರೇನು ಅಥವಾ ಪ್ರೀತಿ ಅನುರಾಗವಿದ್ದರೇನು , ಅವರ ಉದ್ಧೇಶಗಳು ಕಲುಷಿತವಾಗಿದೆಯೇನೋ ನೋಡಿಕೋ ಎಂದು ಒಂದು ಸೂಚನೆಯನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ನೀಡುತ್ತಾರೆ.

176

ಇಂಗಿತಜ್ಞಾನವಿಲ್ಲದ ಬಂಧುಪರಿವಾರ ।
ಹಂಗಿಸುವ ಛಲವುಳ್ಳ ಸತಿಪುತ್ರಸಖರು ॥
ಬಂಗಾರದಸಿ ಚುಚ್ಚೆ ಸಿಂಗರದ ಬೊಟ್ಟೆನುವ ।
ಮಂಗಬುದ್ಧಿಯ ಜನರು - ಮಂಕುತಿಮ್ಮ ॥ ೧೭೬ ॥

ಪರರ ಮನಸ್ಸಿನಲ್ಲಿ ಏನಿದೆ ಎಂದು ಅರಿಯದೆ ನಮಗೆ ಕೆಲಸಕ್ಕೆಬಾರದ ಬುದ್ಧಿವಾದವನ್ನು ಹೇಳುವ ಬಂಧುಗಳು ಮತ್ತು ಪರಿವಾರದವರು, ನಮ್ಮನ್ನು ಹಂಗಿಸುವ ಹಠ ಮತ್ತು ಧೈರ್ಯಮಾಡುವ ನಮ್ಮದೇ ಪತ್ನಿ, ಪುತ್ರ ಮತ್ತು ಸ್ನೇಹಿತರುಮತ್ತು ಅವರು ಮಾಡುವ ಸಲಹೆ ಸೂಚನೆಗೆ ಸರಿ ಎಂದು ನಮಗೆ ಬಲವಂತ ಹೇಗಿದೆಯೆಂದರೆ, ಚಿನ್ನದ ಕತ್ತಿಯಲ್ಲಿ ನಮ್ಮ ಹೇಗೆ ಚುಚ್ಚಿ ಅದು ಅಲಂಕಾರದ ತಿಲಕ ಎಂದು ಹೇಳುವ ಮಂಗ ಬುದ್ಧಿಯ ಜನರು ಎಂದು ಮಾನ್ಯ ಗುಂಡಪ್ಪನವರು ಟೀಕಾರೂಪದಲ್ಲಿ ಈ ಕಗ್ಗದಲ್ಲಿ ಉಲ್ಲೇಖ ಮಾಡಿದ್ದಾರೆ.

177

ಬಂಧುವುಂ ಮಿತ್ರನುಂ ಭೃತ್ಯನುಂ ಶತ್ರುವೊಲೆ ।
ದಂಡಧರನೋಲಗಕೆ ನಿನ್ನನೆಳೆವವರೋ ॥
ಅಂದದೊಡವೆಯ ಮೊನೆಗಳಿಂದೆದೆಯನೊತ್ತುವಾ ।
ಮಂದಹಸಿತದ ಕೊಲೆಯೊ - ಮಂಕುತಿಮ್ಮ ॥ ೧೭೭ ॥

ಸ್ವಾರ್ಥವಿಲ್ಲದೆ ನಮಗೆ ಸಹಾಯ ಮಾಡುವವರು ಇಡೀ ಜಗತ್ತಿನಲ್ಲೇ ಕಾಣಸಿಗುವುದು ದುರ್ಲಭ. ನಮಗೆ ಸಹಾಯ ಮಾಡುವವರೆಲ್ಲ, ತಮ್ಮದೇ ಆದ ಕಾರಣಗಳಿಗಾಗಿ ನಮಗೆ ಒದಗುತ್ತಿರುತ್ತಾರೆ. ಆದರೆ ಅವರು ಮಾಡುವ ಸಹಾಯ ಅವರಿಗೇ ಹೆಚ್ಚು ಉಪಕಾರಿಯಾಗಿ ನಮಗೆ ಕಷ್ಟಗಳ ಫಲ ಮಾತ್ರ ಸಿಗುತ್ತವೆ. ಅವರೆಲ್ಲ ನಮಗೆ ಮಿತ್ರರಂತೆ ಕಂಡರೂ ವಾಸ್ತವದಲ್ಲಿ ಅವರು ನಮಗೆ ಶತ್ರುಗಳಂತಾಗಿ, ನಮಗೆ ಯಮಲೋಕದ ಧರ್ಶನ ಮಾಡಿಸುವವರಂತೆ ಎಂದು ಒಂದು ಕಟುಸತ್ಯವನ್ನು ಅರುಹುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ.

178

ದ್ವೇಷ ರೋಷಗಳವೊಲೆ ನೇಹಮುಂ ಮೋಹಮುಂ ।
ಪಾಶವಾಗಲ್ಬಹುದು ನಿನಗೆ ಮೈಮರಸಿ ॥
ವಾಸನೆಗಳುರುಬಿ ಚಿತ್ತಜ್ವರಂಗಳ ಬಿತ್ತಿ ।
ಮೋಸದಲಿ ಕೊಲ್ಲುವುವೊ - ಮಂಕುತಿಮ್ಮ ॥ ೧೭೮ ॥

ಈ ಜಗತ್ತಿನಲ್ಲಿ ಪರಸ್ಪರ ಸಂಬಂಧಗಳು ದ್ವೇಷ, ರೋಷ, ಪ್ರೀತಿ, ಪ್ರೇಮ ಅನುರಾಗ, ಮೋಹಗಳಿಂದ ಕೂಡಿದ್ದು ಅವುಗಳು, ನಿನಗೆ ಅರಿವಾಗದಂತೆ ನಿನ್ನ ಕುತ್ತಿಗೆಗೆ ಉರುಳಾಗವುದು. ಈ ಎಲ್ಲ ಸಂಬಂಧಗಳು ನಿನ್ನ ಮನಸ್ಸಿನಲ್ಲಿ ತಾಪವನ್ನು ಉಂಟುಮಾಡಿ ನಿನಗರಿವಿಲ್ಲದಂತೆಯೇ ನಿನ್ನನ್ನು ಕೊಲ್ಲುತ್ತದೆಯೋ ಎಂದು ಒಂದು ವಾಸ್ತವಿಕ ಸತ್ಯವನ್ನು ಸೂಚ್ಯವಾಗಿ ನಮಗೆ ಅರುಹುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.